ಪತ್ರಕರ್ತರ ಲೈಫ್ ಕಹಾನಿ | Rahman

Date:

ಪತ್ರಕರ್ತರ ಲೈಫ್ ತುಂಬಾ ಆರಾಮಾಗಿರುತ್ತೆ, ಅವರದ್ದು ಐಷಾರಾಮಿ ಜೀವನ, ಯಾವ್ದೇ ಕಷ್ಟಗಳಿರಲ್ಲ ಎಂಬುದು ಬಹಳಷ್ಟು ಜನರಲ್ಲಿರೋ ತಪ್ಪು ಕಲ್ಪನೆ. ಬೇರೆ ಬೇರೆ ಕ್ಷೇತ್ರದ ಸಾಧಕರಂತೆ ಪತ್ರಿಕೋದ್ಯಮದಲ್ಲಿನ ಸಾಧಕರೂ ಕೂಡ ಕಲ್ಲು-ಮುಳ್ಳಿನ ಹಾದೀಲಿ ನಡೆದು ಬಂದವರು..! ಜನಪ್ರಿಯ ಹಾಗೂ ಸಾಧನೆಯ ಶಿಖರವನ್ನೇರಿರೋ ಪತ್ರಕರ್ತರ ಜೀವನದ ಕಥೆಯನ್ನು ನಿಮ್ಮ ಮುಂದೆ ತರುವ ಪ್ರಯತ್ನ ನಮ್ಮದು..! ಇದೇ ಪತ್ರಕರ್ತರ ‘ಲೈಫ್ ಕಹಾನಿ’.

 

 

ಜನಪ್ರಿಯ ನಿರೂಪಕ, ಬಿಗ್‍ಬಾಸ್ ಮೂಲಕ ಕನ್ನಡಿಗರ ಮನೆಮಗನಾದ ಹೆಮ್ಮೆಯ ಕನ್ನಡಿಗ ರೆಹಮಾನ್ ಹಾಸನ್. ಟಿವಿ9 ಸುದ್ದಿವಾಹಿನಿ ಅಂದೊಡನೆ ಕಣ್ಣೆದುರು ಬರುವ ನಿರೂಪಕರ ಸಾಲಿನಲ್ಲಿ ಇವತ್ತಿಗೂ ಮುಂಚೂಣಿಯಲ್ಲಿರೋದು ಇವರೇ ಎಂದರೆ ಅತಿಶಯೋಕ್ತಿಯಲ್ಲ. ಇವರು ಟಿವಿ9 ಬಿಟ್ಟು ವರ್ಷಗಳೇ ಉರುಳಿವೆ..ಆದರೂ ಜನಮಾನಸದಲ್ಲಿ ಟಿವಿ9 ರೆಹಮಾನ್ ಆಗಿಯೇ ಉಳಿದಿದ್ದಾರೆ. ಇವರ ಕನ್ನಡ ಉಚ್ಛಾರಣೆ, ಮಾತನಾಡುವ ಶೈಲಿ, ನ್ಯೂಸ್ ಓದುತ್ತಿದ್ದ ರೀತಿ, ಸ್ಟೈಲಿಶ್ ಲುಕ್ ಎಲ್ಲರಿಗೂ ಅಚ್ಚುಮೆಚ್ಚು.
ನೀವು ಟಿವಿ ಪರದೆ ಮೇಲೆ ರೆಹಮಾನ್ ಅವರನ್ನು ನೋಡಿದ್ದೀರಿ. ಅವರು ನಡೆಸಿಕೊಟ್ಟಿರೋ ಅನೇಕ ಕಾರ್ಯಕ್ರಮಗಳು, ಸಂದರ್ಶನಗಳು ನಿಮಗಿಷ್ಟವಾಗಿವೆ. ರೆಹಮಾನ್ ಒಬ್ಬ ಸ್ಟಾರ್ ನಿರೂಪಕ. ಆದರೆ, ಇವರು ಈ ಸ್ಟಾರ್ ಪಟ್ಟಕ್ಕೇರಲು ಪಟ್ಟ ಕಷ್ಟಗಳೆಷ್ಟಿವೆ ಗೊತ್ತಾ?
ಆರಂಭದಲ್ಲಿ ಸಾಕಷ್ಟು ಅವಮಾನಗಳನ್ನು ಎದುರಿಸಿ, ಸವಾಲುಗಳನ್ನು ಸ್ವೀಕರಿಸಿ, ತಾನು ಯಾರೆಂದು ಸಾಭೀತು ಪಡಿಸಿ, ಕನ್ನಡ ಮಾಧ್ಯಮ ಲೋಕದಲ್ಲಿ ತನ್ನದೇಯಾದ ಛಾಪು ಮೂಡಿಸಿದವರು ರೆಹಮಾನ್ ಹಾಸನ್.

ಒಂದು ನ್ಯೂಸ್ ಓದಿದಕ್ಕೆ ಸಿಗ್ತಿದಿದ್ದು 25 ರೂ..! :
ನಾಲ್ಕು ಜನ ಗುರುತಿಸುವಂತಹ ಕೆಲಸ ಮಾಡ್ಬೇಕು ಎಂಬ ತುಡಿತ ರೆಹಮಾನ್ ಅವರಲ್ಲಿತ್ತು. ಆದರೆ, ಏನ್ಮಾಡ್ಬೇಕು ಎಂಬ ಕಲ್ಪನೆ ಇರ್ಲಿಲ್ಲ. ಹೀಗಿರುವಾಗ ಒಂದು ದಿನ ‘ಟಿವಿ ಚಾನಲ್‍ಗಳಲ್ಲಿ ಬರೀ ತಪ್ ತಪ್ಪಾಗಿ ಕನ್ನಡ ಓದೋರ್ ಇದ್ದಾರೆ. ನಿನ್ನ ಕನ್ನಡ ಕೂಡ ಚೆನ್ನಾಗಿದೆ. ಟಿವಿ ಪರದೆ ಮೇಲೂ ಚೆನ್ನಾಗಿ ಕಾಣ್ತೀಯ. ನೀನು ಆ್ಯಂಕರ್ ಆಗು ಎಂದು ರೆಹಮಾನ್ ಅವರಿಗೆ ಅವರ ಅಕ್ಕ ಪ್ರೇರಿಪಿಸಿದ್ರು..! ಅವತ್ತು ಅಕ್ಕನ ಪ್ರೇರಣೆಯಿಂದ ಹಾಸನದ ಸ್ಥಳಿಯ ಸುದ್ದಿ ವಾಹಿನಿಯೊಂದಕ್ಕೆ ಹೋಗ್ತಾರೆ. ಆದರೆ, ಅಲ್ಲಿ ಅವರಿಗೆ ಸಿಗಬೇಕಾದ ಬೆಲೆ ಸಿಗಲಿಲ್ಲ..! ಸುಮ್ಮನೆ ಅಲ್ಲಿಗೆ ಹೋಗು, ಇಲ್ಲಿಗೆ ಹೋಗು, ಇದನ್ನು ತಗೊಂಡು ಬಾ, ಅದನ್ನು ತಗೊಂಡ್ ಬಾ ಅಂತ ಸುತ್ತಿಸ್ತಾರೆ..! ಇದರಿಂದ ಕನಸುಗಳ ಬೆನ್ನತ್ತಿ ಹೊರಟಿದ್ದ ರೆಹಮಾನ್‍ಗೆ ತುಂಬಾನೇ ನಿರಾಸೆ ಆಗುತ್ತೆ..! ಹಾಗಂತ ಇಟ್ಟ ಹೆಜ್ಜೆಯನ್ನು ಹಿಂದಕ್ಕಿಡಲಿಲ್ಲ..! ಛಲ ಬಿಡದೆ ಮುನ್ನುಗಿದರು. ಆ ಸುದ್ದಿವಾಹಿನಿ ಬಿಟ್ಟು ಹೊಸದಾಗಿ ಆರಂಭವಾದ ಸುದ್ದಿವಾಹಿನಿಗೆ ಸೇರಿ ಮಾಧ್ಯಮ ಲೋಕದ ಜರ್ನಿ ಆರಂಭ ಮಾಡಿದ್ರು..! ಆಗ ಅವರಿಗೆ ಒಂದು ನ್ಯೂಸ್ ಓದ್ತಾ ಇದ್ದಿದ್ದಕ್ಕೆ ಸಿಗ್ತಾ ಇದ್ದಿದ್ದು 25 ರೂ ಮಾತ್ರ…!


ಉದಯ ಟಿವಿಯಲ್ಲಿ ರೆಹಮಾನ್ :
ಲೋಕಲ್ ಚಾನಲ್ ನಲ್ಲಿ ನ್ಯೂಸ್ ರೀಡರ್ ಆಗಿದ್ದ ರೆಹಮಾನ್ ಅವರಿಗೆ ಉದಯ ಟಿವಿಯಲ್ಲಿ ಕೆಲಸ ಮಾಡುವ ಅವಕಾಶ ಸಿಗ್ತು. ಚೆನ್ನೈಯತ್ತ ರೆಹಮಾನ್ ಪಯಣ ಬೆಳೆಸಿದ್ರು. ಆದರೆ, ಅಲ್ಲಿಯೂ ಕೂಡ ಅವರಿಗೆ ಎದುರಾಗಿದ್ದು ಕಷ್ಟದ ದಿನಗಳು..! ಸುಮಾರು 1 ತಿಂಗಳುಗಳ ಕಾಲ ಸುಮ್ಮನೇ ಕೂರಿಸಿದ್ರು..! ಬಳಿಕ ಸೀನಿಯರ್ ಪ್ರೊಡ್ಯೂಸರ್ ಆಗಿದ್ದ ಸಮಿಉಲ್ಲಾ ಅವರಿಂದಾಗಿ ನ್ಯೂಸ್ ರೀಡರ್ ಆಗಿ ಕೆಲಸ ಆರಂಭಿಸಲು ಸಾಧ್ಯವಾಯ್ತು.
ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕಿದ್ರು..!: ಟಿವಿ9 ಸುದ್ದಿವಾಹಿನಿ ಆರಂಭವಾಯ್ತು. ರೆಹಮಾನ್ ಅವರಿಗೆ ಆಫರ್ ಬಂತು. ಚೆನ್ನೈ ಬಿಟ್ಟು ಬೆಂಗಳೂರಿಗೆ ಬಂದ್ರು. ಟಿವಿ9ಗೆ ಸೆಲೆಕ್ಷನ್ ಕೂಡ ಆದ್ರು. ಆದರೆ, ಇನ್ನೇನು ಜಾಯಿನ್ ಆಗ್ಬೇಕು ಎನ್ನುವಷ್ಟರಲ್ಲಿ, ಜೊತೆಗಿದ್ದವರೇ ಬೆನ್ನಿಗೆ ಚೂರಿ ಹಾಕಿದ್ರು..! ಇಲ್ಲಿ ಕೆಲಸ ಸಿಗುತ್ತೆ ಎಂಬ ಭರವಸೆಯಿಂದ ಉದಯದಲ್ಲಿ ಕೆಲಸ ಬಿಟ್ಟು ಬಂದಿದ್ದ ರೆಹಮಾನ್ ಅವರಿಗೆ ಎದುರಾಗಿತ್ತು ಭವಿಷ್ಯದ ಆತಂಕ..!
ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯ ತನಕ ಟಿವಿ9 ಕಚೇರಿ ಹೊರಗಡೆ ಕಾಯಿಸಿದ್ರು..! ಅಲ್ಲಿ ಓಡಾಡುವವರಿಗೆಲ್ಲಾ ಇವರು ಉದಯದಲ್ಲಿ ನಿರೂಪಕರಾಗಿದ್ದವರು ಎಂದು ಗೊತ್ತಿದ್ದರೂ ಮಾತಾಡಿಸಿರಲಿಲ್ಲ..! ಒಬ್ಬರೇ ಒಬ್ಬರು ಮಾತನಾಡದೇ ಇರುವಾಗ ಕಣ್ಣಲ್ಲಿ ನೀರು ಬರುವಂತಾಗಿತ್ತು..! ಕಣ್ಣೀರನ್ನು ಹಿಡಿದಿಟ್ಟುಕೊಂಡು ರಿಸಪ್ಷನಿಸ್ಟ್ ಹತ್ತಿರ ಹೋಗಿ ಎಷ್ಟೊತ್ತಿಗೆ ಬರ್ತಾರೆ ಎಂದು ವಿಚಾರಿಸಿದ್ರೆ, ಅವರ ಉತ್ತರ ಬರ್ತಾರೆ ಕಾಯಿರಿ ಎಂಬುದಷ್ಟೇ ಆಗಿತ್ತು..! ಕೊನೆಗೂ ಮುಖ್ಯಸ್ಥರೊಬ್ಬರು ಸಂಜೆ 5 ಗಂಟೆ ಸುಮಾರಿಗೆ ಭೇಟಿಯಾದ್ರು..! ಆದರೆ, ಆಗಲೂ ಅವರಿಗೆ ಸಿಕ್ಕಿದ್ದು ಬರೀ ನೋವು..ನಿರಾಸೆ, ತಡೆದುಕೊಳ್ಳಲಾಗದ ದುಃಖ..!
ಈಗ ಕೆಲಸಕ್ಕೆ ಬೇಡ, ಸ್ವಲ್ಪ ದಿನ ಆದ್ಮೇಲೆ ತೆಗೆದುಕೊಳ್ಳೋಣ ಅಂತ ಟಿವಿ9ನವ್ರು ರೆಹಮಾನ್‍ಗೆ ಹೇಳಿದ್ರು..! ಕೆಲಸ ಇಲ್ದೆ ಏನ್ ಮಾಡೋದು ಎಂಬ ಚಿಂತೆ ಎದುರಾಯ್ತು..! ಯಾವ ಮುಖ ತಗೊಂಡು ಮನೆಗೆ ಹೋಗೋಣ ಎಂಬ ನೋವು ಕೂಡ ಮನಸ್ಸಿನಲ್ಲಿ ಗಾಢವಾಗಿ ನೆಲೆಯೂರಿತು..! ಆ ದಿನಗಳಲ್ಲಿ ಬಹಳ ಕಷ್ಟದ ದಿನಗಳನ್ನು ಎದುರಿಸಿದ್ರು..!
ಇವರಿಗೆ ಕೆಲಸದ ಅವಶ್ಯಕತೆ ಇತ್ತು.. ಟಿವಿ9 ಕಚೇರಿ ಬಿಟ್ಟು ಹೋಗದೇ ಹಠ ಹಿಡಿದು ಕುಳಿತರು..! ಆದರೆ ಅಲ್ಲಿದ್ದವರಿಗೆ ಇವರು ಬಿಟ್ಟು ಹೋದರೆ ಸಾಕಪ್ಪ ಎಂದೆನಿಸುತ್ತಿತ್ತಂತೆ..! ‘ನಿಮಗೆ 3 ತಿಂಗಳ ಅವಕಾಶ ಕೊಡ್ತೀವಿ, ಅಷ್ಟರೊಳಗೆ ನೀವು ಪ್ರೂ.. ಮಾಡಿದ್ರೆ ನಮ್ಮೊಡನೆ ಮುಂದುವರೆಯಬಹುದು. ಇಲ್ಲವಾದಲ್ಲಿ ಬಿಟ್ಟು ಹೋಗ್ತಾ ಇರಿ ಎಂದು ಚಾನಲ್ ಸಿಇಒ ಮಿಶ್ರಾ ಅವರೇ ಹೇಳಿಬಿಟ್ಟರು..! ‘ನನಗೆ ಮೂರು ತಿಂಗಳು ಬೇಡ ಸರ್, ಒಂದೇ ತಿಂಗಳು ಸಾಕು. ನಾನೇನು ಎಂಬುದನ್ನು ಸಾಭೀತು ಪಡಿಸ್ತೀನಿ’ ಅಂತ ಹೇಳಿದ ರೆಹಮಾನ್ ಟಿವಿ9ನಲ್ಲಿ ಸೇವೆ ಆರಂಭಿಸಿದ್ರು..! ಆಮೇಲೆ ನಡೆದಿದ್ದೆಲ್ಲವೂ ನಿಮಗೇ ಗೊತ್ತಿದೆ..! ರೆಹಮಾನ್ ಹಿಂತಿರುಗಿ ನೋಡಲಿಲ್ಲ.. ಸ್ಟಾರ್ ನಿರೂಪಕನಾಗಿ ಕನ್ನಡಿಗರ ಮನಗೆದ್ದರು..!

ಸ್ಟಾರ್ ಆ್ಯಂಕರ್‍ಗೆ ಲವ್ ಆಯ್ತು..! :

ರೆಹಮಾನ್ ಟಿವಿ9ನಲ್ಲಿರುವಾಗ ನಿರೂಪಕಿ ಸಮೀನಾ ಅವರ ಪರಿಚಯವಾಯ್ತು. ಆತ್ಮೀಯತೆ ಬೆಳೆಯಿತು. ಕಾಲೇಜು ದಿನಗಳಲ್ಲಿದ್ದ ತನ್ನ ಲವ್‍ಸ್ಟೋರಿ, ಅದು ಹೇಗೆ ಬ್ರೇಕಪ್ ಆಯ್ತು ಎನ್ನೋದನ್ನು ರೆಹಮಾನ್ ಸಮೀನಾ ಅವರಲ್ಲಿ ಹೇಳಿಕೊಂಡ್ರು..! ನೊಂದ ರೆಹಮಾನ್ ಅವರ ಹೃದಯಕ್ಕೆ ಸಮೀನಾ ಮುಲಾಮ್ ಹಚ್ಚಿದ್ರು..! ಎರಡೂ ಕುಟುಂಬಗಳ ಒಪ್ಪಿಗೆ ಪಡೆದು ರೆಹಮಾನ್ ಮತ್ತು ಸಮೀನಾ ವಿವಾಹವಾದ್ರು..!
ಟಿವಿ9 ಬಿಟ್ಟಿದ್ದೇಕೆ ಗೊತ್ತಾ? : ಸ್ಟಾರ್ ನಿರೂಪಕನಾಗಿ ಹೊರಹೊಮ್ಮಲು ವೇದಿಕೆಯಾದ ಟಿವಿ9 ಸುದ್ದಿವಾಹಿನಿಯನ್ನು ಬಿಟ್ಟು ರೆಹಮಾನ್ ಹೊರಬರುವುದಕ್ಕೆ ಕಾರಣ ಏನ್ ಗೊತ್ತಾ..? ಸುದ್ದಿವಾಹಿನಿಗಳಲ್ಲಿ ಟಿಆರ್‍ಪಿ ಹಪಾಹಪಿಯಲ್ಲಿ ತೀರಾ ಖಾಸಗಿ ವಿಚಾರಗಳನ್ನು ಪ್ರಸಾರ ಮಾಡುವುದು ರೆಹಮಾನ್ ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಬದಲಾವಣೆ ಬೇಕೆಂದು ಕಾಯುತ್ತಿದ್ದರು. ಆಗ ಬಿಗ್‍ಬಾಸ್‍ನಲ್ಲಿ ಅವಕಾಶ ಸಿಕ್ತು. ಬಿಗ್ ಬಾಸ್ ಮನೆಗೆ ಹೋದ್ರು. ಹೊಸ ದಾರೀಲಿ ಪಯಣ ಆರಂಭಿಸಿದ್ರು.
ಮತ್ತೆ ನ್ಯೂಸ್ ರೀಡರ್ ಆಗ್ತಾರ ರೆಹಮಾನ್ : ರೆಹಮಾನ್ ಅವರು ಸದ್ಯ ಸಿನಿಮಾದಲ್ಲಿ ಬ್ಯುಸಿ ಇದ್ದಾರೆ. ರಣವಿಕ್ರಮ, ಜಾಗ್ವಾರ್ ಸಿನಿಮಾಗಳಲ್ಲಿ ಕಾಣಿಸಿಕೊಂಡಿರುವ ಇವರ ಅಭಿನಯದ ‘ಗರ’ಸಿನಿಮಾದ ಚಿತ್ರೀಕರಣ ನಡೀತಿದೆ. ವೆನಿಲ್ಲಾ ಎಂಬ ಸಿನಿಮಾ ಬಿಡುಗಡೆ ಸಿದ್ದವಾಗಿದೆ.


ಸದ್ಯ ಇದೇ ಕ್ಷೇತ್ರದಲ್ಲಿ ಮುಂದುವರೆಯಲಿದ್ದಾರೆ. ಆದರೆ, ಒಂದೊಲ್ಲ ಒಂದು ದಿನ ಮತ್ತೆ ಸುದ್ದಿವಾಹಿನಿಯಲ್ಲಿ ನಿರೂಪಕರಾಗಿ ಕಾಣಿಸಿಕೊಳ್ತಾರೆ..! ಯಾವಾಗ ಅಂತ ಗೊತ್ತಿಲ್ಲ..! ಈಗಲೂ ಇವರಿಗೆ ಅನೇಕ ಸುದ್ದಿವಾಹಿನಿಗಳು ಆಫರ್ ನೀಡ್ತಿವೆ. ಮುಂದೊಂದು ದಿನ ಮತ್ತೆ ನ್ಯೂಸ್ ರೀಡರ್ ಆಗುವೆ ಎಂದು ರೆಹಮಾನ್ ಹೇಳಿದ್ದಾರೆ.


ಕಿರುಚಿತ್ರ: ರೆಹಮಾನ್ ಅವರು ಸಿನಿಮಾದ ಜೊತೆಗೆ ಕಿರುಚಿತ್ರ ನಿರ್ಮಾಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ‘ಲವ್ ಬೈಟ್’ ಎಂಬ ಕಿರುಚಿತ್ರದ ಮೂಲಕ ಡೆಂಗೆ ಬಗ್ಗೆ ಅರಿವು ಮೂಡಿಸಿದ್ದಾರೆ. ಕಿರುಚಿತ್ರಗಳ ಮೂಲ ಸಮಾಜದಲ್ಲಿ ಅರಿವು ಮೂಡಿಸುವ ಉದ್ದೇಶ ರೆಹಮಾನ್ ಅವರದ್ದು.

ಹೀಗೆ ರೆಹಮಾನ್ ಹಾಸನ್ ಅನೇಕ ನೋವು, ಅವಮಾಗಳನ್ನು ಎದುರಿಸಿ ಬೆಳೆದು ಬಂದವರು. ಸದಾ ಸವಾಲುಗಳನ್ನು ಸ್ವೀಕರಿಸಿ ಗೆದ್ದವರು. ಇವತ್ತಿನ ರೆಹಮಾನ್ ಅವರ ಜನಪ್ರಿಯತೆ ಸಾಧನೆಯ ಹಿಂದೆ ಸಾಕಷ್ಟು ಪರಿಶ್ರಮವಿದೆ. ರೆಹಮಾನ್ ಅವರ ಸಾಧನೆಯ ಹಾದಿ ಯುವ ಸಮುದಾಯಕ್ಕೆ ನಿಜಕ್ಕೂ ಸ್ಪೂರ್ತಿ. ನಿಷ್ಕಲ್ಮಶ ಮನಸ್ಸಿನ, ಸಹೃದಯಿ ರೆಹಮಾನ್ ಅವರಿಗೆ ಶುಭವಾಗಲಿ..

https://www.youtube.com/watch?v=WUnA2GDuZjs

  • ಶಶಿಧರ್ ಎಸ್ ದೋಣಿಹಕ್ಲು

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...