ಪ್ರತಿಯೊಬ್ಬರಿಗೂ ಅವಕಾಶಗಳು ಸಿಗುತ್ತವೆ. ಸಿಕ್ಕ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಆದರೆ ಕೆಲವೊಮ್ಮೆ ಒಬ್ಬರ ಯಶಸ್ಸು ಇನ್ನೊಬ್ಬರ ಅವಕಾಶಕ್ಕೆ ಅಡ್ಡಿಯಾಗುತ್ತದೆ..! ಅಂತೆಯೇ ಟೀಮ್ ಇಂಡಿಯಾದಲ್ಲಿ ಯುವ ಆಟಗಾರರೊಬ್ಬರು ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸುವಲ್ಲಿ ಎಡವಿದ್ದರೆ, ಇನ್ನು ಕೆಲವರಿಗೆ ಮತ್ತೊಬ್ಬ ಆಟಗಾರನ ಸದ್ದಿಲ್ಲದ ಯಶಸ್ಸು ದೊಡ್ಡ ತಲೆನೋವಾಗಿದೆ.
ಹೌದು, 2019ರಲ್ಲಿ ಇಂಗ್ಲೆಂಡ್ ನಲ್ಲಿ ನಡೆದ ಏಕದಿನ ವಿಶ್ವಕಪ್ ಬಳಿಕ ಮಹೇಂದ್ರ ಸಿಂಗ್ ಧೋನಿ ಟೀಮ್ ಇಂಡಿಯಾದಿಂದ ದೂರ ಉಳಿದರು.. ವರ್ಲ್ಡ್ ಕಪ್ ಬಳಿಕ ಧೋನಿ ಯಾವುದೇ ಪಂದ್ಯದಲ್ಲೂ ಕಾಣಿಸಿಕೊಳ್ಳಲಿಲ್ಲ. ಧೋನಿಯನ್ನು ಮತ್ತೆ ಅಂಗಳದಲ್ಲಿ ನೋಡಲು ಅಭಿಮಾನಿಗಳು ಉತ್ಸುಕರಾಗಿದ್ದರು.
ಆದರೆ. ಧೋನಿ ಮರಳಿ ತಂಡ ಸೇರಲಿಲ್ಲ . ದಿಢೀರ್ ಅಂತ ಆಗಸ್ಟ್ 15 ರಂದು ನಿವೃತ್ತಿ ಘೋಷಿಸಿದರು .
ಧೋನಿ ನಂತರ ಭಾರತ ತಂಡದ ಮೂರೂ ಮಾದರಿಯ ಕ್ರಿಕೆಟ್ಗೆ ಯುವ ಆಟಗಾರ ರಿಷಭ್ ಪಂತ್ ಖಾಯಂ ವಿಕೆಟ್ ಕೀಪರ್ ಅಂತ ಬಿಸಿಸಿಐ ಹಾಗೂ ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ನಿರ್ಧರಿಸಿತ್ತು. ವಿಶ್ವಕಪ್ನಲ್ಲೂ ಪಂತ್ ಆಡುವ 11ರ ಬಳಗದಲ್ಲಿ ಸ್ಥಾನ ಪಡೆದಿದ್ದರು.
ವಿಕೆಟ್ ಕೀಪಿಂಗ್ ಅವಕಾಶ ಸಿಗದಿದ್ದರೂ ಬ್ಯಾಟ್ಸ್ಮನ್ ಆಗಿ ಮಿಂಚುವ ಅವಕಾಶ ಅವರಿಗಿತ್ತು. ಆದರೆ ಅವರು ವಿಶ್ವಕಪ್ನಲ್ಲೂ ಸಿಕ್ಕ ಅವಕಾಶದಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಆದರೂ ಧೋನಿ ಇಲ್ಲದ ತಂಡಕ್ಕೆ ಪಂತೇ ವಿಕೆಟ್ ಕೀಪರ್ ಎಂದು ಮುಂದಿನ ಸರಣಿಗಳಿಗೂ ಅವರನ್ನು ಆಯ್ಕೆ ಮಾಡಲಾಯಿತು. ಆದರೆ, ರಿಷಭ್ ಸಕ್ಸಸ್ ಕಂಡಿಲ್ಲ.! ಪದೇ ಪದೇ ಫೇಲ್ಯೂರ್ ಆಗುತ್ತಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಟೂರ್ನಿಯಲ್ಲಿ ಪಂತ್ ಗಾಯಗೊಂಡ ಬಳಿಕ ಕನ್ನಡಿಗ ಕೆ.ಎಲ್ ರಾಹುಲ್ ವಿಕೆಟ್ ಕೀಪಿಂಗ್ ಜವಬ್ದಾರಿ ನಿಭಾಯಿಸಿದರು. ಬ್ಯಾಟಿಂಗ್ ಜೊತೆಗೆ ಕೀಪರ್ ಆಗಿಯೂ ರಾಹುಲ್ ಅದ್ಭುತ ಪ್ರದರ್ಶನ ನೀಡಿದರು. ಹೀಗಾಗಿ ನ್ಯೂಜಿಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಪಂತ್ ಅನುಪಸ್ಥಿತಿಯಲ್ಲಿ ಬೇರೊಬ್ಬ ವಿಕೆಟ್ ಕೀಪರ್ ಅನ್ನು ಆಯ್ಕೆ ಮಾಡುವ ಗೋಜಿಗೆ ಬಿಸಿಸಿಐ ಹೋಗಲಿಲ್ಲ.. ಅಲ್ಲದೆ ವಿಕೆಟ್ ಕೀಪರ್ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳಲಿಲ್ಲ..ರಾಹುಲ್ ಇದ್ದರಲ್ಲಾ ನಿಭಾಯಿಸ್ತಾರೆ ಅನ್ನೋ ಭರವಸೆ ಬಿಸಿಸಿಐ ಹಾಗೂ ತಂಡದ ಮ್ಯಾನೇಜ್ಮೆಂಟ್ ನದ್ದಾಗಿತ್ತು. ಕ್ಯಾಪ್ಟನ್ ಕೊಹ್ಲಿ ಕೂಡ ಗೆಳೆಯ ರಾಹುಲ್ ಮೇಲೆ ಭರವಸೆ ಇಟ್ಟರು.. ರಾಹುಲ್ ಅವರೆಲ್ಲರ ಭರವಸೆ, ನಿರೀಕ್ಷೆಗೂ ಮೀರಿ ಮಿಂಚಿದರು. ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆರಂಭಿಕರಾಗಿ ಹಾಗೂ ವಿಕೆಟ್ ಕೀಪರ್ ಆಗಿ ತಂಡದ ಸರಣಿ ಗೆಲುವಲ್ಲಿ ಪ್ರಮುಖಪಾತ್ರವಹಿಸಿ ಸರಣಿ ಶ್ರೇಷ್ಠ ಗೌರವಕ್ಕೆ ಪಾತ್ರರಾದರು. ನಂತರ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ತಂಡ ಸೋತರೂ ರಾಹುಲ್ ಆಟದ ಬಗ್ಗೆ ಯಾರೂ ಕೆಮ್ಮಂಗಿಲ್ಲ!
ನಂತರ ನಡೆದ ಟೆಸ್ಟ್ ಸರಣಿಯಲ್ಲಿ ರಾಹುಲ್ ಅನುಪಸ್ಥಿತಿ ಕಾಡಿತು. ರಿಷಭ್ ಪಂತ್ ಮತ್ತೆ ವೈಫಲ್ಯ ಮುಂದುವರೆಸಿದರು. ನಾಯಕ ವಿರಾಟ್ ಕೊಹ್ಲಿ ಸೇರಿದಂತೆ ಎಲ್ಲಾ ಬ್ಯಾಟ್ಸ್ಮನ್ಗಳು ನಿರಾಸ ಪ್ರದರ್ಶನ ನೀಡಿದರು. ಹೀಗಾಗಿ ರಾಹುಲ್ ಇದ್ದಿದ್ದರೆ ಅಂತ ಕೈ ಕೈ ಹಿಸುಕಿಕೊಳ್ಳುವಂತಾಗಿತ್ತು. ಮುಂದಿನ ಟೆಸ್ಟ್ ಸರಣಿಗೆ ಅವರ ಆಯ್ಕೆ ಮಾಡಲೇಬೇಕೆಂಬ ಒತ್ತಾಯ ಕೇಳಿಬಂದಿದೆ.
ಹೀಗೆ ಟೀಮ್ ಇಂಡಿಯಾಕ್ಕೆ ನಮ್ಮ ಕನ್ನಡಿಗ ಕೆ.ಎಲ್ ರಾಹುಲ್ ಬ್ಯಾಟಿಂಗ್ ಜೊತೆಗೆ ವಿಕೆಟ್ ಕೀಪರ್ ಆಗಿಯೂ ನೆರವಾಗುತ್ತಿರುವುದರಿಂದ ವಿಕೆಟ್ ಕೀಪರ್ ಆಗಿ ತಂಡದಲ್ಲಿ ಸ್ಥಾನ ಪಡೆಯಲು ಎದುರು ನೋಡುತ್ತಿರುವವರಿಗೆ ದೊಡ್ಡ ತಲೆನೋವಾಗಿದೆ. ಆ ಎಲ್ಲಾ ವಿಕೆಟ್ ಕೀಪರ್ಗಳು ಯಾರೆಲ್ಲಾ ಅನ್ನೋದನ್ನು ನೋಡೋದಾದ್ರೆ..
ರಿಷಭ್ ಪಂತ್ : ಮಹೇಂದ್ರ ಸಿಂಗ್ ಧೋನಿ ಬಳಿಕ ತಂಡದ ಖಾಯಂ ವಿಕೆಟ್ ಕೀಪರ್ ಆಗಲು ಹೆಚ್ಚು ಹೆಚ್ಚು ಅವಕಾಶ ಸಿಕ್ಕರೂ ಅದನ್ನು ಬಳಸಿಕೊಳ್ಳದ ರಿಷಭ್ ಪಂತ್ ಗೆ ರಾಹುಲ್ ಸಕ್ಸಸ್ ಕಂಟಕ ಎಂದರೆ ತಪ್ಪಾಗಲಾರದು. ರಾಹುಲ್ ವಿಕೆಟ್ ಕೀಪಿಂಗ್ ಜೊತೆಗೆ ಯಾವ್ದೇ ಕ್ರಮಾಂಕದಲ್ಲೂ ಬ್ಯಾಟ್ ಬೀಸಬಲ್ಲವರಾಗಿರವುದರಿಂದ ಪಂತ್ ತಂಡಕ್ಕೆ ಮರಳಿ, ನೆಲೆನಿಲ್ಲಲು ಶ್ರಮಿಸಲೇಬೇಕಿದೆ.
ದಿನೇಶ್ ಕಾರ್ತಿಕ್ : ಧೋನಿ ಇಲ್ಲದ ತಂಡದಲ್ಲಿ ಯುವ ಆಟಗಾರ ಪಂತ್ ವೈಫಲ್ಯದ ಹಿನ್ನೆಲೆಯಲ್ಲಿ ಕೀಪರ್ ಹಾಗೂ ಬ್ಯಾಟ್ಸ್ಮನ್ ಆಗಿ ಕಮ್ಬ್ಯಾಕ್ ಮಾಡುವ ಅವಕಾಶ ಅನುಭವಿ ದಿನೇಶ್ ಕಾರ್ತಿಕ್ಗೆ ಇತ್ತು. ಆದರೆ. ರಾಹುಲ್ ಅದ್ಭುತ ಆಟ ಕಾರ್ತಿಕ್ ಕಮ್ ಬ್ಯಾಕ್ಗೆ ಅಡ್ಡಿಯಾಗಿದೆ.
ವೃದ್ಧಿಮಾನ್ ಸಾಹ : ರಾಹುಲ್ ಸಕ್ಸಸ್ ನಿಂದ ಪ್ರತಿಭಾವಂತಾ ವಿಕೆಟ್ ಕೀಪರ್ ವೃದ್ಧಿಮಾನ್ ಸಾಹ ಕೂಡ ಅವಕಾಶ ವಂಚಿತರಾಗುವ ಸಾಧ್ಯತೆ ಹೆಚ್ಚು.
ಇಶಾನ್ ಕಿಶಾನ್ : ಯುವ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಇಶಾನ್ ಕಿಶಾನ್ ಟೀಮ್ ಇಂಡಿಯಾದ ಭವಿಷ್ಯದ ತಾರೆ. ಅವರು ಕೀಪರ್ ಆಗಿ ತಂಡ ಕೂಡಿ ಕೊಳ್ಳುವ ಸಾಧ್ಯತೆ ಹೆಚ್ಚಿತ್ತು. ಆದರೆ, ರಾಹುಲ್ ಈಗ ವಿಕೆಟ್ ಕೀಪರ್ ಆಗಿ ಅದ್ಭುತ ಪ್ರದರ್ಶನ ನೀಡುತ್ತಿರುವುದು ಇಶಾನ್ಗೆ ತಡೆ.
ಶ್ರೀಕರ್ ಭಾರತ್ : ಆಂಧ್ರಪ್ರದೇಶದ 27ರ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಶಿಕರ್ ಭರತ್ ಕೂಡ ಟೀಮ್ ಇಂಡಿಯಾ ವಿಕೆಟ್ ಕೀಪರ್ ಆಗುವ ಕನಸು ಕಂಡಿದ್ದರು. ಆ ಹಾದಿಗೆ ರಾಹುಲ್ ಮಹಾ ಯಶಸ್ಸು ಅಡ್ಡಿಯಾಗಿದೆ.
ಸಂಜು ಸ್ಯಾಮ್ಸನ್ : ಪ್ರತಿಭಾವಂತ ವಿಕೆಟ್ ಕೀಪರ್, ಬ್ಯಾಟ್ಸ್ಮನ್ ಸಂಜು ಸಾಮ್ಸನ್ ಟೀಮ್ ಇಂಡಿಯಾದಲ್ಲಿ ಸ್ಥಾನ ಪಡೆದರೂ ಬ್ಯಾಟ್ಸ್ಮನ್ ಆಗಿ ಮಾತ್ರ ಕಾಣಿಸಿಕೊಳ್ಳಬಹುದು. ರಾಹುಲ್ ವಿಕೆಟ್ ಕೀಪರ್ ಆಗಿ ಮುಂದುವರೆದರೆ ಸಂಜುಗೆ ಕೀಪಿಂಗ್ ಮಾಡುವ ಅವಕಾಶ ಸಿಗುವುದು ಕಷ್ಟ.
ಹೀಗೆ ರಾಹುಲ್ ವಿಕೆಟ್ ಕೀಪರ್ ಆಗಿ ಕ್ಲಿಕ್ ಆಗಿದ್ದು, ಅದರಲ್ಲಿ ಅವರು ಮುಂದುವರೆದರೆ ಕೀಪಿಂಗ್ ಸ್ಪೆಷಲಿಸ್ಟ್ ಗಳು ತಂಡದಲ್ಲಿ ಸ್ಥಾನ ಪಡೆಯುವುದು ಕಷ್ಟ. ಬ್ಯಾಟ್ಸ್ಮನ್ ಗಳಾಗಿ ಕೂಡಿ ಕೊಳ್ಳಲು ಪೈಪೋಟಿ ಕೂಡ ಹೆಚ್ಚಿದೆ.