ಪ್ರೌಢಶಿಕ್ಷಣ ಪಡೆದವರಿಂದ ಹಿಡಿದು ಇಂಜಿನಿಯರಿಂಗ್ ಪದವಿ ಪಡೆದವರಿಗಾಗಿ ರೈಲ್ವೆ ಇಲಾಖೆಯಲ್ಲಿ ಒಳ್ಳೆಯ ಅವಕಾಶವಿದೆ.
ಒಂದು ಲಕ್ಷಕ್ಕೂ ಹೆಚ್ಚು ಉದ್ಯೋಗ ನಿಮಗಾಗಿ ಕಾದಿದೆ. ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ರೈಲ್ವೆ ಸಚಿವ ಪಿಯೂಶ್ ಗೋಯಲ್ ಅವರು ಭಾರತದ ಜನತೆಗೆ ಟ್ವಿಟರ್ ಮೂಲಕ ತಿಳಿಸಿದ್ದಾರೆ. ಫೆಬ್ರವರಿ 10ರಂದು ಈ ಹುದ್ದೆಗಳ ನೇಮಕಾತಿಗಾಗಿ ನೋಟಿಫಿಕೇಶನ್ ಹೊರಡಿಸಲಾಗಿದೆ.
ರೈಲ್ವೆಯಲ್ಲಿ 62, 907 ಹುದ್ದೆಗಳಿಗೆ ಅರ್ಜಿ ಆಹ್ವಾನ :
ಭಾರತೀಯ ರೈಲು ಇತಿಹಾಸದಲ್ಲೆ ಅತೀದೊಡ್ಡದಾದ ಉದ್ಯೋಗಮೇಳ ನಡೆಯುತ್ತಿದ್ದು, ಗ್ರೂಪ್ ಸಿ ಮತ್ತು ಡಿ ಸೇರಿದಂತೆ, ಲೋಕೋ ಪೈಲಟ್, ತಂತ್ರಜ್ಞರು, ಗ್ಯಾಂಗ್ ಮೆನ್ , ಸ್ವಿಚ್‍ಮೆನ್, ಟ್ರಾಕ್‍ಮೆನ್, ಕ್ಯಾಬಿನ್‍ಮೆನ್, ಮುಂತಾದ 89, 000 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಗ್ರೂಪ್ ಡಿ ಉದ್ಯೋಗಿಗಳಿಗೆ 62,907 ಹುದ್ದೆಗಳನ್ನು ಮೀಸಲಿಡಲಾಗಿದೆ.
ಭದ್ರತಾ ವಿಭಾಗದಲ್ಲಿಯೇ 1 ಲಕ್ಷ 22 ಸಾವಿರ ಹುದ್ದೆಗಳು ಖಾಲಿಯಿದ್ದು, ಪ್ರತಿವರ್ಷ 40 ಸಾವಿರದಿಂದ 50 ಸಾವಿರ ಉದ್ಯೋಗಿಗಳು ನಿವೃತ್ತಿಯಾಗುತ್ತಿದ್ದಾರೆ. ಇದೇ ವರ್ಷದಲ್ಲಿ 56, 000 ಉದ್ಯೋಗಿಗಳು ನಿವೃತ್ತಿಯಾಗಲ್ಲಿದ್ದಾರೆ. ಈ ಹುದ್ದೆಗಳನ್ನು ಪರ್ಮನೆಂಟ್ ಬದಲು ಕಾಂಟ್ರಾಕ್ಟ್ ಆಧಾರದ ಮೇಲೆ ತೆಗೆದುಕೊಳ್ಳುವ ಸಾಧ್ಯತೆಯಿದೆ.
ವಿದ್ಯಾರ್ಹತೆ ಮತ್ತು ಸಂಬಳ..
ಎಸ್ ಎಸ್ ಎಲ್ ಸಿ, ಪದವಿ, ಐಟಿಐ ಡಿಪ್ಲೋಮೋ ಪಡೆದವರು ಗ್ರೂಪ್ ಹುದ್ದೆಗೆ ಅರ್ಜಿ ಸಲ್ಲಿಸಬಹುದು.ಪರೀಕ್ಷೆಯಲ್ಲಿ ತೇರ್ಗಡೆಯಾಗಿ ಹುದ್ದೆಗೆ ಆಯ್ಕೆಯಾದವರು 7ನೇ ಕೇಂದ್ರ ವೇತನ ಆಯೋಗದ ಪ್ರಕಾರ ತಿಂಗಳಿಗೆ 18, 000ಸಂಬಳ ಮತ್ತು ಭತ್ಯೆ ದೊರಯಲಿದೆ.
ಯಾರು ಅರ್ಜಿ ಹಾಕಬಹುದು??
18 ರಿಂದ 31 ವರ್ಷದೊಳಗಿನ ಅರ್ಹ ಉದ್ಯೋಗಾರ್ಥಿಗಳು ಗ್ರೂಪ್ ಡಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗದವರಿಗೆ ಮತ್ತೀತರ ವಿಭಾಗದವರಿಗೆ ವಯೋಮಿತಿಯ ರಿಯಾಯಿತಿಯನ್ನೂ ನೀಡಲಾಗಿದೆ. ಗ್ರೂಪ್ ಡಿ ಮತ್ತು ಗ್ರೂಪ್ ಸಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 12.
ಆನ್‍ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಕೆ..
ಉದ್ಯೋಗಾರ್ಥಿಗಳು ಆನ್ ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು. ಯಾವುದನ್ನು ಪ್ರಿಂಟೌಟ್ ತೆಗೆದು ಕಳುಹಿಸುವಂತಿಲ್ಲ. ಮತ್ತು ಮಾಹಿತಿ ಸರಿಯಾಗಿರದಿದ್ದ ಪಕ್ಷ ಅರ್ಜಿಯನ್ನು ತಿರಸ್ಕರಿಸಲಾಗುವುದು.
ಕನ್ನಡ ಭಾಷೆಯ ಆಯ್ಕೆ ನೀಡಲಾಗಿದೆ..
ಅರ್ಜಿ ಮತ್ತು ಎಲ್ಲ ಪ್ರಮಾಣ ಪತ್ರಗಳು ಇಂಗ್ಲಿಷ್ ಅಥವಾ ಹಿಂದಿಯಲ್ಲಿರಬೇಕು. ಬೇರೆ ಭಾಷೆಯಲ್ಲಿದ್ದರೆ ಅದನ್ನು ಇಂಗ್ಲಿಷ್ ಅಥವಾ ಹಿಂದಿಗೆ ಬದಲಾಯಿಸಿದ ಕಾಪಿ ನೀಡಬೇಕು. ಆದರೆ ಬೆಂಗಳೂರು ಕೇಂದ್ರದವರಿಗೆ ಕನ್ನಡದ ಆಯ್ಕೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಪರೀಕ್ಷೆ ತೆಗೆದುಕೊಳ್ಳುವವರು ಕನ್ನಡ, ತೆಲುಗು, ಮರಾಠಿ, ಕೊಂಕಣಿ ಮತ್ತು ತಮಿಳು ಭಾಷೆಯನ್ನು ಆಯ್ಕೆ ಮಾಡಬಹುದು.
ಪರೀಕ್ಷೆ ಯಾವ ರೀತಿ ನಡೆಸಲಾಗುತ್ತದೆ?
ಕಂಪ್ಯೂಟರ್ ಆಧಾರಿತ ಪರೀಕ್ಷೆ ನಡೆಸಲಾಗುವುದು. ಇದರಲ್ಲಿ ಪಾಸಾದವರು ದೈಹಿಕ ಸಕ್ಷಮತೆಯ ಪರೀಕ್ಷೆಯನ್ನೂ ತೆಗೆದುಕೊಳ್ಳಬೇಕು. ಬೆಂಗಳೂರಿನಲ್ಲಿ ಒಟ್ಟು 2,293 ಹುದ್ದೆಗಳು ಖಾಲಿಯಿದ್ದು ,ಮೀಸಲಾತಿ ಇಲ್ಲದ ಜನರಲ್ ಉದ್ಯೋಗಾರ್ಥಿಗಳಿಗೆ 1,184, ಪರಿಶಿಷ್ಟ ಜಾತಿಗೆ 346 ಮತ್ತು 167 ಪರಿಶಿಷ್ಟ ಪಂಗಡದವರಿಗೆ ಮತ್ತು ಹಿಂದುಳಿದ ವರ್ಗದವರಿಗೆ 596 ಹುದ್ದೆಗಳನ್ನು ಮೀಸಲಿಡಲಾಗಿದೆ. ಮಾಜಿ ಸೈನಿಕರಿಗೆ ಮತ್ತು ಇತರೆ ವಿಭಾಗದಲ್ಲೂ ಕೆಲ ಹುದ್ದೆಗಳಿವೆ.