ಇವರು ಶಿಕ್ಷಕ, ಚಾಲಕ ಅಷ್ಟೇ ಅಲ್ಲ….ಇನ್ನೂ ಏನೇನು ಗೊತ್ತಾ?
ರಾಜಾರಾಮ್. ಇವರು ಉಡುಪಿ ಜಿಲ್ಲೆ ಬ್ರಹ್ಮಾವರ ತಾಲ್ಲೂಕಿನ ಸರ್ಕಾರಿ ಶಾಲೆಯ ವಿಜ್ಞಾನ ಮತ್ತು ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸರಕಾರಿ ಸಂಬಳದ ಜತೆಗೆ ಸಿಗುವ ಲಾಭಗಳನ್ನು ಬಾಚಿಕೊಂಡು ತನ್ನಷ್ಟಕ್ಕೇ ಇರುವ ಸರಕಾರಿ ಶಿಕ್ಷಕರಿಗೆ ಹೋಲಿಸಿದರೆ, ಈ ಶಿಕ್ಷಕ ರಾಜಾರಾಮ್ ಕೊಂಚ ವಿಭಿನ್ನ.
ಬೆಳಗ್ಗೆ 5.30ಕ್ಕೆ ಎದ್ದು, 6 ಗಂಟೆಗೆ ವಿದ್ಯಾರ್ಥಿಗಳಿಗೆ ಹೈಜಂಪ್ ತರಬೇತಿ, 6.30ಕ್ಕೆ ಬ್ಯಾಡ್ಮಿಂಟನ್ ಅಭ್ಯಾಸ, 7.30ಕ್ಕೆ ರೆಡಿಯಾಗಿ 8 ಗಂಟೆಗೆ ಮಿನಿ ಬಸ್ನ ಚಾಲಕನ ಸೀಟ್ನಲ್ಲಿ ಕೂತರೆ, ಮನೆಗೆ ತೆರಳೋದು ಸಂಜೆ 5.30ಕ್ಕೆ. ಇದು ಬಾರಾಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ರಾಜಾರಾಮ್ ಅವರ ದಿನಚರಿ.
ಹೇಳಿ ಕೇಳಿ ಇದು ಸರಕಾರಿ ಶಾಲೆ. ಸಾರಿಗೆ ವ್ಯವಸ್ಥೆಯ ನೆಪವೊಡ್ಡಿ ಆಂಗ್ಲ ಮಾಧ್ಯಮ ಶಾಲೆಯತ್ತ ವಿದ್ಯಾರ್ಥಿಗಳು ಮುಖ ಮಾಡುತ್ತಿರುವ ಕಾರಣಕ್ಕೆ ಸರಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಕ್ಷೀಣಿಸುತ್ತಿದೆ. ಏತನ್ಮಧ್ಯೆ ಮಕ್ಕಳು ಸರಕಾರಿ ಶಾಲೆಗೆ ಬರಬೇಕೆಂಬ ದೃಷ್ಟಿಯಿಂದ ಹಳೆ ವಿದ್ಯಾರ್ಥಿ ವಿಜಯ ಹೆಗ್ಡೆ ಬಾರಾಳಿ ಎಂಬವರು ಶ್ರೀರಾಮ ಸೇವಾ ಸಮಿತಿ ಮೂಲಕ 2017-18ರಲ್ಲಿ ಶಾಲೆಗೆ ಮಿನಿ ಬಸ್ ಕೊಟ್ಟಿದ್ದಾರೆ. ಮಿನಿ ಬಸ್ನ ನಿರ್ವಹಣೆ ವೆಚ್ಚವನ್ನು ಹಳೆ ವಿದ್ಯಾರ್ಥಿಗಳು ಭರಿಸುತ್ತಾರೆ.
ಈ ಶಾಲೆಗೆ ಸುತ್ತಲಿನ 4, 5 ಕಿ.ಮೀ. ದೂರದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಶಿಕ್ಷಕ ರಾಜಾರಾಮ್ ಅವರು ಶಿರಿಯಾರ ಕಲ್ಲುಬೆಟ್ಟು, ಹೊರಳಿಜೆಡ್ಡು, ಅಲ್ತಾರು ಕಾರ್ತಿಬೆಟ್ಟು, ಕಾಜ್ರಳ್ಳಿ, ಮುಸಪುರಿ ಭಾಗಗಳಿಗೆ ತಾನೇ ಮಿನಿ ಬಸ್ ಡ್ರೈವಿಂಗ್ ಮಾಡಿಕೊಂಡು ಹೋಗಿ ವಿದ್ಯಾರ್ಥಿಗಳನ್ನು ಪಿಕಪ್ ಮಾಡುತ್ತಾರೆ.
ಬೆಳಗ್ಗೆ ಹಾಗೂ ಸಂಜೆ ಒಟ್ಟು 60 ಕಿ.ಮೀ. ವಾಹನ ಚಲಾಯಿಸುತ್ತಾರೆ. ಕಳೆದ ವರ್ಷದಿಂದ ಗಾಡಿ ವಿಮೆ, ಡೀಸೆಲ್ ಹಾಗೂ ನಿರ್ವಹಣೆಗಾಗಿ ಶಿಕ್ಷಕ ರಾಜಾರಾಮ್ ತಮ್ಮ ಜೇಬಿನಿಂದ 65 ಸಾವಿರ ರೂ. ವ್ಯಯಿಸಿದ್ದಾರೆ. ದೈಹಿಕ ಶಿಕ್ಷಕನಾದರೂ 5, 6, 7ನೇ ತರಗತಿ ಮಕ್ಕಳಿಗೆ ಗಣಿತ, ವಿಜ್ಞಾನ ಬೋಧನೆ ಜತೆಗೆ ಪ್ಲಾಸ್ಟಿಕ್ ಬಾಟಲಿಯಿಂದ ಹೂವಿನ ಕುಂಡ ತಯಾರಿಸುವ ಕ್ರಿಯಾಶೀಲ ಶಿಕ್ಷಕ ಇವರಾಗಿದ್ದಾರೆ.
ಸಾಮಾನ್ಯ ರಜೆ -ಸಿಎಲ್ ಹಾಕಿದರೂ ಬೆಳಗ್ಗೆ ಮತ್ತು ಸಂಜೆ ಮಕ್ಕಳನ್ನು ಶಾಲೆಗೆ ಬಿಡುವುದು ಇವರೇ. ತರಬೇತಿಗಾಗಿ ಊರು ಬಿಟ್ಟು ಹೊರ ಜಿಲ್ಲೆಗೆ ಹೋದರೆ ಮಾತ್ರವೇ ಬಸ್ಗೆ ಬದಲಿ ಚಾಲಕನ ನೇಮಕ. 1ರಿಂದ 7ನೇ ತರಗತಿಯಲ್ಲಿ 58 ಮಕ್ಕಳಿದ್ದು, ಬಸ್ ಸಿಕ್ಕಿದ ವರ್ಷ ಮಕ್ಕಳ ಸಂಖ್ಯೆ 72ಕ್ಕೆ ಏರಿದೆ. ಈ ಬಾರಿ 90 ತಲುಪಿದೆ.
ಶಾಲೆಯ 90 ವಿದ್ಯಾರ್ಥಿಗಳು ಹಾಗೂ ಅಂಗನವಾಡಿಗೆ ಬರುವ 8 ಮಕ್ಕಳನ್ನು ಕರೆದುಕೊಂಡು ಬರುತ್ತೇನೆ. ಮಿನಿ ಬಸ್ಗೆ ಚಾಲಕನನ್ನು ಇಟ್ಟರೆ ತಿಂಗಳಿಗೆ 4, 5 ಸಾವಿರ ರೂ. ಬೇಕು. ಅದೇ ಖರ್ಚಿನಲ್ಲಿ ಡೀಸೆಲ್, ಮಿನಿ ಬಸ್ ನಿರ್ವಹಣೆ ಮಾಡಬಹುದು. ತಾನೇ ಹೋಗುವುದರಿಂದ ಮಕ್ಕಳ ಹಿತದೃಷ್ಟಿಯಿಂದಲೂ ಅನುಕೂಲ. ಹಳೆ ವಿದ್ಯಾರ್ಥಿಗಳ ತುಂಬು ಸಹಕಾರ, ಶಾಲಾ ಮುಖ್ಯ ಶಿಕ್ಷಕಿ, ಸಹ ಶಿಕ್ಷಕರ ಪ್ರೋತ್ಸಾಹವಿದೆ ಎನ್ನುತ್ತಾರೆ ಶಿಕ್ಷಕ ರಾಜಾರಾಮ್
ಆದಾಯ ಇದ್ರೆ ಮಾತ್ರ ಕೆಲಸ ಮಾಡುವ ಜನರ ಮಧ್ಯೆ ರಾಜಾರಾಮ್ ಅಂತಹ ಶಿಕ್ಷಕರು ಇರುವುದು ನಿಜಕ್ಕೂ ಗ್ರೇಟ್. ಇವರ ಕಾರ್ಯವೈಖರಿ ಪ್ರತಿಯೊಬ್ಬರಿಗೂ ಸ್ಫೂರ್ತಿ.