ಹಿಂದೂಗಳು, ಕ್ರೈಸ್ತರು, ಮುಸಲ್ಮಾನರು ಸೇರಿದಂತೆ ಪ್ರತಿಯೊಂದು ಧರ್ಮದವ್ರು ಅವರ ಧಾರ್ಮಿಕ ಹಬ್ಬಗಳನ್ನು ಭಕ್ತಿ, ಸಡಗರದಿಂದ ಆಚರಿಸ್ತಾರೆ..! ಒಂದು ಧರ್ಮದ ಹಬ್ಬವನ್ನು ಇನ್ನೊಂದು ಧರ್ಮೀಯರು ಯಾವತ್ತಿಗೂ ಟೀಕಿಸಿಲ್ಲ, ವಿರೋಧಿಸಿಲ್ಲ..! ಪರಸ್ಪರ ಶುಭಹಾರೈಸಿ ಒಂದು ಧರ್ಮದ ಹಬ್ಬದ ಆಚರಣೆಯಲ್ಲಿ ಇನ್ನೊಂದು ಧರ್ಮದವರು ಪಾಲ್ಗೊಳ್ಳುವುದು ನಮ್ಮ ನಾಡಿನ ಸಂಸ್ಕೃತಿಯ ಶ್ರೇಷ್ಠತೆ..!
ಸರ್ವಧರ್ಮೀಯರೂ ಅಣ್ತಮ್ಮಂದಿರಂತೆ ಸಹಬಾಳ್ವೆ ನಡೆಸ್ತಾ ಇರೋ ನಮ್ಮಲ್ಲಿ ಅನೇಕ ಹಬ್ಬಗಳನ್ನು ಜಾತಿ, ಧರ್ಮ ಬೇಧವಿಲ್ದೆ ಒಟ್ಟಾಗಿ ಆಚರಸ್ತೀವಿ..! ಇಂತಹ ಕೆಲವು ಹಬ್ಬಗಳಲ್ಲಿ ಕನ್ನಡ ರಾಜ್ಯೋತ್ಸವ ಕೂಡ ಒಂದು..!
ಹ್ಞಾಂ.. ಇನ್ನೇನು 8-10 ದಿನ ಕನ್ನಡ ರಾಜ್ಯೋತ್ಸವ ಬಂದೇ ಬಿಟ್ಟಿತು..! ನವೆಂಬರ್ 1ರಂದು ನಾಡಿನೆಲ್ಲೆಡೆ ರಾಜ್ಯೋತ್ಸವದ ಸಡಗರ. ಅವತ್ತು ಒಂದು ದಿನ ಮಾತ್ರವಲ್ಲ ನವೆಂಬರ್ ತಿಂಗಳಾದ್ಯಂತ ರಾಜ್ಯೋತ್ಸವ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಆದರೆ, ನಮ್ಮ ರಾಜ್ಯ ಸರ್ಕಾರಕ್ಕೆ ಮಾತ್ರ ರಾಜ್ಯೋತ್ಸವ ಅಷ್ಟೊಂದು ಮುಖ್ಯವಲ್ಲ ಅನಿಸುತ್ತೆ..!
ಕಳೆದ ಎರಡು ವರ್ಷಗಳಿಂದ ಕನ್ನಡ ಮಂತ್ರ ಪಠಿಸೋಕ್ಕಿಂತ ಜೋರಾಗಿ ಟಿಪ್ಪು ಜಪವನ್ನು ಜಪಿಸ್ತಾ ಇದ್ದಾರೆ ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವ್ರು ಹಾಗೂ ಅವರ ಘನ ಸರ್ಕಾರ..!
ನವೆಂಬರ್ ಸಮೀಪಿಸ್ತಾ ಇದ್ದಂತೆ ಕನ್ನಡ ರಾಜ್ಯೋತ್ಸವದ ಸಿದ್ಧತೆಗಳು, ಅದರ ಸಡಗರ, ಸಂಭ್ರಮ ಮನೆ ಮಾಡ್ತಾ ಇದ್ದ ದಿನಗಳು ಈಗ ಮರೆಯಾಗ್ತಿವೆ ಎಂದೆನಿಸುತ್ತೆ. ಟಿಪ್ಪು ಜಯಂತಿ ಗುಂಗಿನಲ್ಲಿ ಭಾಷೆ, ನಾಡು-ನುಡಿಗಳನ್ನು ನಿರ್ಲಕ್ಷಿಸ್ತಿದ್ದಾರೆ.
ಹಬ್ಬ, ಆಚರಣೆಗಳು ಎಲ್ಲರನ್ನೂ ಒಗ್ಗೂಡಿಸಬೇಕೇ ವಿನಃ ಯಾರನ್ನೂ, ಯಾವ ಸಮುದಾಯದವರನ್ನೂ ಬೇರ್ಪಡಿಸಬಾರದು. ಎಲ್ಲರೂ ಒಗ್ಗೂಡಿ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳಬೇಕು. ಆಗ ಸಮಾಜದಲ್ಲಿ ಸಾಮರಸ್ಯ ಮೂಡುತ್ತದೆ. ಆದರೆ, ಟಿಪ್ಪು ಜಯಂತಿ ಆಚರಣೆ ನಾಡಿನಲ್ಲಿ ಎಂಥಾ ಸಾಮರಸ್ಯ ಮೂಡಿಸಿದೆ ಎನ್ನುವುದು ‘ಟಿಪ್ಪು ಜಯಂತಿ’ಗೆ ಅಪಾರ ಬೆಂಬಲ ನೀಡ್ತಾ ಇರೋರಿಗೂ ಮತ್ತು ಟಿಪ್ಪು ಅಭಿಮಾನಿಗಳಿಗೂ ಚೆನ್ನಾಗಿ ಗೊತ್ತಿದೆ..!
ಟಿಪ್ಪು ವಿಚಾರದಲ್ಲಿ ಹಾಗೂ ಟಿಪ್ಪು ಜಯಂತಿ ವಿಚಾರದಲ್ಲಿಯೂ ಅನೇಕ ವಾದ-ವಿವಾದಗಳಿವೆ. ಜಯಂತಿ ಆಚರಣೆ ಸಮಯದಲ್ಲಿ ನಡೆದ ಅಹಿತಕರ ಘಟನೆಗಳು ಇನ್ನೂ ಕಣ್ಣೆದುರಿವೆ..! ಆಚರಣೆಗೆ ಮುನ್ನವೇ ತೀವ್ರ ವೀರೋಧವಿದ್ದರೂ ಮೊಂಡು ಹಠ ಹಿಡಿದು ಮಹತ್ತರ ಸಾಧನೆ ಎಂಬಂತೆ ಸರ್ಕಾರ ಟಿಪ್ಪು ಜಯಂತಿ ಆಚರಣೆ ಮಾಡಿದ್ದಾದರೂ ಏಕೆ..? ಹ್ಞಾಂ, ಅಂತೂ ಹಠ ಸಾಧಿಸಿ, ತಮ್ಮ ರಾಜಕೀಯ ಬೇಳೆ-ಬೇಯಿಸಿಕೊಳ್ಳಲು ಟಿಪ್ಪು ಜಯಂತಿ ಆಚರಣೆಯೂ ಆಯಿತು..! ಆಮೇಲೆ ಆಗಿದ್ದೇನು..?
ನಡೆಯಬಾರದ ಘಟನೆಗಳು ನಡೆದ ಬಳಿಕವೂ ಸರ್ಕಾರ ಮಾನವೀಯ ನೆಲೆಗಟ್ಟಿನಲ್ಲಿ ಯೋಚನೆ ಮಾಡ್ಬೇಕಿತ್ತು. ಆದರೂ ಟಿಪ್ಪು ಜಯಂತಿ ಆಚರಿಸದೇ ಇದ್ರೆ ನಾಡಿಗೆ ಭಾರಿ ಗಂಡಾಂತರ ಕಾದಿದೆ, ಜನರ ಉಸಿರೇ ನಿಂತು ಹೋಗುತ್ತೆ ಎಂಬಂತೆ ಟಿಪ್ಪು ಪೂಜೆಯನ್ನು ಮುಂದಿವರೆಸಿದ್ದಾರೆ.
ಆಡಳಿತದಲ್ಲಿರೋದ್ ಕಾಂಗ್ರೆಸ್ ಸರ್ಕಾರವೇ.. ಮುಖ್ಯಮಂತ್ರಿಗಳು ಕಾಂಗ್ರೆಸ್ ಪಕ್ಷದವರೇ..ಆದ್ರೆ, ಇವರ ಜವಬ್ದಾರಿ ಕೇವಲ ಒಂದು ಸಿದ್ಧಾಂತವಾದಿಗಳ ಅಥವಾ ಒಂದು ಪಕ್ಷದ ಹಿತ ಕಾಯೋದಲ್ಲ..! ನಾಡಿನ ಸಮಸ್ತ ಜನರ ಹಿತಕಾಯಬೇಕು. ಅಹಿತಕರ ಬೆಳವಣಿಗೆಗಳು ನಡೆಯಲು ಅವಕಾಶ ನೀಡಬಾರದು. ಅಕಸ್ಮಾತ್ ಅಂತಹ ಘಟನೆಗಳು ನಡೆದಾಗ ಮತ್ತೆ ಮರುಕಳಿಸದಂತೆ ಗಮನಹರಿಸಬೇಕು. ಜನರ ಹಿತಕಾಯಬೇಕೆ ವಿನಃ ತಾನು ಹೇಳಿದ್ದೇ ನಡೆಯಬೇಕು, ತಮ್ಮ ತೀರ್ಮಾನವೇ ಅಂತಿಮ ಎನ್ನುವುದು ಶೋಭೆಯಲ್ಲ..
ನೆನಪಿರಲಿ, ನವೆಂಬರ್‍ನಲ್ಲಿ ಕನ್ನಡ ರಾಜ್ಯೋತ್ಸವವೂ ಇದೆ..! ಕೇವಲ ಟಿಪ್ಪು ಜಯಂತಿಮಾತ್ರವಲ್ಲ..! ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸೋಣ..! ಟಿಪ್ಪು ಜಪ ಬಿಟ್ಟು ಸ್ವಲ್ಪ ಈ ಬಗ್ಗೆ ಯೂ ಯೋಚಿಸಿ..
-ಶಶಿಧರ್ ಎಸ್ ದೋಣಿಹಕ್ಲು