ಆರೋಗ್ಯ ಸಚಿವ ರಮೇಶ್ ಕುಮಾರ್ ಅವರಿಗೆ ಕೆಪಿಎಂಇ ಆ್ಯಕ್ಟ್ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯಿದೆ) ಜಾರಿಗೆ ತರುವ ಬಗ್ಗೆ ಎಷ್ಟರ ಮಟ್ಟಿಗೆ ಬದ್ಧತೆ ಇತ್ತು ಗೊತ್ತಾ..? ತನ್ನ ಆರೋಗ್ಯದ ಬಗ್ಗೆ ಒಂಚೂರು ಕಾಳಜಿವಹಿಸದೇ ಕೆಪಿಎಂಇ ಆ್ಯಕ್ಟ್ ಜಾರಿಗೆ ತರಲು ತಲೆಕೆಡಿಸಿಕೊಂಡಿದ್ದರು.
ಮಸೂದೆ ವಿರೋಧಿಸಿ ಮುಷ್ಕರ ಕೈಗೊಂಡಿದ್ದ ಖಾಸಗಿ ವೈದ್ಯರು ರಾಜ್ಯದಲ್ಲಿ 66 ಬಲಿ ಪಡೆದ ಬಳಿಕ ಮುಷ್ಕರ ವಾಪಸ್ಸು ಪಡೆದಿರೋದು ಸಹ ಗೊತ್ತೇ ಇದೆ. ಎಷ್ಟೇ ವಿರೋಧವಿದ್ದರೂ ಈ ಮಸೂದೆಯಿಂದ ಖಂಡಿತಾ ಜನರಿಗೆ ಒಳ್ಳೆಯದಾಗುತ್ತೆ, ಇದನ್ನು ಜಾರಿಗೆ ತರಲೇ ಬೇಕು ಎಂದು ಹಠ ಹಿಡಿದಿದ್ದ ರಮೇಶ್ ಕುಮಾರ್ ಆರೋಗ್ಯದಲ್ಲಿ ಏರುಪೇರಾಗಿದೆ.
ಕೆಪಿಎಂಇ ಜಾರಿ ಬಗ್ಗೆ ಚಿಂತಿಸುತ್ತಾ ಸರಿಯಾಗಿ ಊಟ-ತಿಂಡಿ, ನಿದ್ರೆ ಮಾಡದ ಹಿನ್ನೆಲೆಯಲ್ಲಿ ಆರೋಗ್ಯ ಸಚಿವರ ಆರೋಗ್ಯ ಹದಗೆಟ್ಟಿದೆ. ಇಂದು ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಹೈದರಾಲಿ ಮೊಹಲ್ಲಾ ಬಳಿ ಡಿಸಿಸಿ ಬ್ಯಾಂಕ್‍ನಿಂದ ನಡೆದ ಮಹಿಳಾ ಸಂಘಗಳಿಗೆ ಸಾಲ ವಿತರಣಾ ಸಮಾರಂಭದಲ್ಲಿ ಪಾಲ್ಗೊಂಡಿದ್ದ ರಮೇಶ್ ಕುಮಾರ್ ಅವರು ಅಸ್ವಸ್ಥಗೊಂಡಿದ್ದಾರೆ. ಕಾರ್ಯಕ್ರಮದ ಬಳಿಕ ರಸ್ತೆಯಲ್ಲೇ ವಾಂತಿ ಮಾಡಿಕೊಂಡ ರಮೇಶ್ ಕುಮಾರ್ ಅವರನ್ನು ಅವರ ವಾಹನದಲ್ಲೇ ಬೆಂಗಳೂರು ಆಸ್ಪತ್ರೆಗೆ ಕರೆತರಲಾಗಿದೆ.