ದೃಶ್ಯ ಮಾಧ್ಯಮ ಲೋಕದ ಹೆಸರಾಂತ ಹೆಸರಿದು. ಖಡಕ್ ಮಾತು, ನಿಷ್ಠುರ ನುಡಿ, ಸಾಮಾಜಿಕ ಸಮಸ್ಯೆಗಳ ವಿರುದ್ಧದ ಗಟ್ಟಿ ಧ್ವನಿ. ಮನಸ್ಸಲ್ಲಿ ಸದಾ ಸ್ವಚ್ಛಂದ ಸಮಾಜದ ಕನಸು.! ಅದೆಂಥಾ ಘಟಾನುಘಟಿಗಳ ಎದೆಯಲ್ಲಿ ಇವೆರೆಂದರೆ ಢವಢವ.! ಇವರೇ ಜನಪ್ರಿಯ, ಜನಪರ ಪತ್ರಕರ್ತ, ನಿರೂಪಕ ರಂಗನಾಥ ಭಾರಧ್ವಜ್.
ಯೆಸ್… ಟಿವಿ9ನ ರಂಗನಾಥ್ ಭಾರಧ್ವಜ್. ಇವರ ಹಿರಿಮೆಗೆ ಮತ್ತೊಂದು ಗರಿ ಒಲಿದಿದೆ..! ಅದುವೇ ಡಾ.ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿ.
ಆಟ ಆಡುವ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಚಿರಪರಿಚಿತವಾಗಿರುವ ನಿರೂಪಕರಲ್ಲಿ ಪ್ರಮುಖರು ನೇರ ನುಡಿಯ, ಹರಿತ ಮಾತುಗಳ ನಿರೂಪಕ ರಂಗನಾಥ್ ಭಾರದ್ವಜ್ ಕನ್ನಡ ಮಾಧ್ಯಮ ಲೋಕದ ಸ್ಟಾರ್ ಆ್ಯಂಕರ್. ಜನಪ್ರಿಯತೆ, ಕೀರ್ತಿ, ಹೆಸರು ಹೀಗೆ ಬೇಕಾದದ್ದೆಲ್ಲಾ ಒಲಿದುಬಂದಿದ್ದರೂ ಯಾವ್ದೇ ಅಹಂ, ಹಮ್ಮು-ಬಿಮ್ಮು ಇವರಲಿಲ್ಲ.
ಸದಾ ನ್ಯಾಯದ ಪರ ಧ್ವನಿಯಾಗಿರುವ ಇವರು ಅನ್ಯಾಯ, ಅಕ್ರಮದ ವಿರುದ್ಧ ಗುಡುಗುವಾಗ ಅದೆಂಥಾ ಪ್ರಭಾವಿಗಳೇ ಇರಲಿ…ಕಟುವಾದ ನೇರಾನೇರ ನಿಷ್ಠುರ, ನಿರ್ಭೀತ ಮಾತುಗಳಿಂದ ತಿವಿಯುತ್ತಾರೆ.. ಕಾರ್ಪೋರೇಟರ್ ಆಗಿರಲಿ, ಮೇಯರ್ ಆಗಿರಲಿ, ಶಾಸಕರಾಗಿರಲಿ, ಸಚಿವರಾಗಿರಲಿ, ಮುಖ್ಯಮಂತ್ರಿಗಳೇ ಆಗಿರಲಿ ತಪ್ಪಿದ್ದಲ್ಲಿ, ಸಮಾಜಕ್ಕಾಗಿ ಒಳ್ಳೆಯ ಕೆಲಸ ಆಗ್ಬೇಕಾಗಿದ್ದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಳ್ತಾರೆ.
ಚಿತ್ರದುರ್ಗದ ಚಿಕ್ಕ ಎಮ್ಮಿಗನೂರಲ್ಲಿ ಹುಟ್ಟಿ ಬೆಳೆದ ರಂಗನಾಥ್ ಭಾರಧ್ವಜ್ರವರ ತಂದೆ ಶೇಷಾದ್ರಿ, ಶಿಕ್ಷಕರು. ತಾಯಿ ಯಶೋಧ. ರಂಗನಾಥ್ ಕೆಲಸದ ಜೊತೆ ಓದನ್ನು ಮುಂದುವರೆಸಿದವರು. ಮನೆ ಮನೆಗೆ ಹಾಲು, ಪೇಪರ್ ಹಾಕುತ್ತಾ, ಕಾಫಿ ಶಾಪ್, ಬಟ್ಟೆ ಅಂಗಡಿಯಲ್ಲೆಲ್ಲಾ ಕೆಲಸ ಮಾಡುತ್ತಾ ವಿದ್ಯಾಭ್ಯಾಸ ಮಾಡಿದವರು. ಡಿ.ಪಾರ್ಮೆಸಿ ಓದಿದ್ದ ಇವರು ತನ್ನ ಬದುಕು ಕಟ್ಟಿಕೊಂಡಿದ್ದು ಮಾಧ್ಯಮ ಕ್ಷೇತ್ರದಲ್ಲಿ. ಈ.ಟಿವಿಯಲ್ಲಿ ವೃತ್ತಿ ಬದುಕು ಆರಂಭಿಸಿ, ಅಲ್ಲಿ ಕೆಲಸ ಮಾಡುತ್ತ ಮಾಡುತ್ತಲೇ ಪತ್ರಿಕೋದ್ಯಮ ಮತ್ತು ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದರು.
ಈ.ಟಿವಿ, ಸಮಯ ಸುದ್ದಿವಾಹಿನಿ ಮೊದಲಾದ ಕಡೆಗಳಲ್ಲಿ ಸೇವೆ ಸಲ್ಲಿದ್ದ ಇವರು ಪ್ರಸ್ತುತ ಟಿವಿ9ನಲ್ಲಿದ್ದಾರೆ. 2014ರ ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಸತತ 15 ಗಂಟೆ ನ್ಯೂಸ್, ಡಿಸ್ಕಷನ್ ನಡೆಸಿಕೊಟ್ಟು ದಾಖಲೆ ಬರೆದಿರುವ ಇವರು ನಿರ್ಗಳವಾಗಿ ಎಷ್ಟುಹೊತ್ತು ಬೇಕಾದರೂ ನಿರೂಪಣೆ ಮಾಡಬಲ್ಲ ಜ್ಞಾನಭಂಡಾರ.
ಇವರು ಮಾಧ್ಯಮ ಲೋಕಕ್ಕೆ ಸಲ್ಲಿಸುತ್ತಿರುವ ಅಪಾರ ಸೇವೆಗೆ ಅನೇಕ ಪ್ರಶಸ್ತಿಗಳು ಲಭಿಸಿವೆ.
ಈಗ ಡಾ.ನಾಗರಾಜ ಜಮಖಂಡಿ ಸ್ಮಾರಕ ಮಾಧ್ಯಮ ಪ್ರಶಸ್ತಿಯ ಗೌರವವೂ ಸಿಕ್ಕಿದೆ. ಅಭಿನಂದನೆಗಳು ರಂಗನಾಥ್ ಭಾರಶಧ್ವಜ್ರವರೇ…