ತೀವ್ರ ಕುತೂಹಲ ಕೆರಳಿಸಿರುವ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ನಾಳೆ ನಡೆಯಲಿದ್ದು, ಇಂದು ಮನೆಮನೆ ಪ್ರಚಾರಕ್ಕೆ ಕೊನೆಯ ದಿನವಾಗಿದೆ.
ಮತದಾರರ ಗುರುತಿನ ಚೀಟಿ ಅವ್ಯವಹಾರ ವಿವಾದದಲ್ಲಿ ಸಿಲುಕಿ ಮುಂದೂಡಲ್ಪಟ್ಟಿರುವ ಆರ್ ಆರ್ ನಗರ ಕ್ಷೇತ್ರದ ಚುನಾವಣೆ ಸಧ್ಯ ಎಲ್ಲರ ಚಿತ್ರವನ್ನು ತನ್ನತ್ತ ಹೊರಳಿಸಿದೆ.
ರಾಜಕೀಯ ಹಗ್ಗಜಗ್ಗಾಟದ ನಂತರ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್ ಡಿ ಕುಮಾರ ಸ್ವಾಮಿ ಕಾಂಗ್ರೆಸ್ ನ ಬೆಂಬಲದೊಂದಿಗೆ ಮುಖ್ಯಮಂತ್ರಿ ಗದ್ದುಗೆ ಏರಿದ ಬಳಿಕ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.
ತಮ್ಮ ಮೈತ್ರಿ ಏನಿದ್ದರೂ ಸರ್ಕಾರ ಮತ್ತು ಆಡಳಿತಕ್ಕೆ ಸೀಮಿತ ಎಂಬ ಜೆಡಿಎಸ್ ವರಿಷ್ಠ , ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಮಾತು ಕಾಂಗ್ರೆಸ್ ಲೆಕ್ಕಾಚಾರವನ್ನು ತಲೆಕೆಳಗೆ ಮಾಡಿದೆ.
ದೇವೇಗೌಡರ ಈನಿಲುವಿನಿಂದ ಜೆಡಿಎಸ್ ಜೊತೆ ಸೇರಿ ಆರ್ ಆರ್ ನಗರ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಿ ಜಯದ ಕನಸು ಕಾಣುತ್ತಿದ್ದ ಕಾಂಗ್ರೆಸ್ ಗೆ ಆಘಾತ ಉಂಟಾಗಿದೆ.
ಪ್ರತಿಪಕ್ಷದಲ್ಲಿರುವ ಬಿಜೆಪಿ ತನ್ನ ಪರ ಜನಾದೇಶ ಸಾಬೀತುಪಡಿಸಲು ಉತ್ಸುಕವಾಗಿದೆ. ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರೇ ಸ್ವತಃ ತಮ್ಮ ಅಭ್ಯರ್ಥಿ ತುಳಸಿ ಮುನಿರಾಜುಗೌಡ ಪರ ಪ್ರಚಾರಕ್ಕೆ ಇಳಿದಿದ್ದಾರೆ.
ಇನ್ನು ಜೆಡಿಎಸ್ ಅಭ್ಯರ್ಥಿ ರಾಮಚಂದ್ರ ಪರ ಎಚ್ ಡಿ ದೇವೇಗೌಡರು ಪ್ರಚಾರ ನಡೆಸುತ್ತಿದ್ದಾರೆ. ಇತ್ತ ಕಾಂಗ್ರೆಸ್ ಪರ ಕಾಂಗ್ರೆಸ್ ನಾಯಕ, ಸಮ್ಮಿಶ್ರ ಸರ್ಕಾರದ ರುವಾರಿ ಡಿ ಕೆ ಶಿವಕುಮಾರ್ ರೋಡ್ ಶೋ ನಡೆಸಿ ಅಭ್ಯರ್ಥಿ ಮುನಿರತ್ನ ಪರ ಪ್ರಚಾರ ನಡೆಸಿದ್ದಾರೆ.