ಸಿಂಗಾಪುರದಲ್ಲಿ ಹೆಮ್ಮೆಯ ಕನ್ನಡಿಗ…!

Date:

ಅಂದುಕೊಂಡಿದ್ದನ್ನು ಸಾಧಿಸ ಹೊರಟವರಿಗೆಲ್ಲಾ ಈ ಸಮಾಜದಲ್ಲಿ ಪ್ರೋತ್ಸಾಹ ಸಿಗುತ್ತೆ ಅಂತ ಹೇಳೋಕೆ ಆಗಲ್ಲ..! ಕೆಲವೊಮ್ಮೆ ಅಡ್ಡಗಾಲು ಹಾಕುವವರೇ ಹೆಚ್ಚು…! ನಮ್ಮ ಮೇಲೆ ನಮಗಿರೋ ನಂಬಿಕೆಯೇ ಯಶಸ್ಸಿನ ಮೊದಲ ಗುಟ್ಟು…! ನನ್ನಿಂದ ಸಾಧ್ಯ ಎಂದು ಮುನ್ನುಗ್ಗಿದರೆ ಯಶಸ್ಸು ಖಂಡಿತಾ ನಮ್ಮದಾಗುತ್ತೆ ಎನ್ನೋದಕ್ಕೆ ಸುಬ್ರಹ್ಮಣ್ಯ ಭಟ್ ಶಾನೇಪಾಲ ಉದಾಹರಣೆಯಾಗುತ್ತಾರೆ.

ಎದುರಾದ ಅನೇಕ ಸವಾಲುಗಳು, ಸೋಲುಗಳನ್ನು ಗೆಲುವಾಗಿ ಪರಿವರ್ತಿಸಿಕೊಂಡವರು ಸುಬ್ರಹ್ಮಣ್ಯ ಭಟ್. ಮೂಲತಃ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದ ಇಡಗುಂದಿಯವರಾದ ಇವರ ತಂದೆ ವೆಂಕಟರಮಣ ಭಟ್, ತಾಯಿ ಸಾವಿತ್ರಿ ಭಟ್, ಪತ್ನಿ ನಯನಾ ಹಾಗೂ ಪುಟ್ಟ ಮಗ ಆತ್ರೇಯ ಭಟ್. ಇವರದ್ದು ಮಧ್ಯಮ ವರ್ಗದ ಕುಟುಂಬ.


ಇಡಗುಂದಿ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ, ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಪ್ರೌಢಶಾಲಾ ಶಿಕ್ಷಣ ಪಡೆದರು. ನಂತರ ಮನೆಯವರು, ಸಂಬಂಧಿಕರ ಒತ್ತಾಯಕ್ಕೆ ಮಣಿದು ಪಿಯುಸಿಯಲ್ಲಿ ವಿಜ್ಞಾನ ವಿಷಯವನ್ನು ಆಯ್ಕೆ ಮಾಡಿಕೊಂಡ್ರು. ಆದರೆ, ಅದರಲ್ಲಿ ಮುಂದುವರೆಯಲು ಕಷ್ಟವಾಯ್ತು. ಅರ್ಧಕ್ಕೆ ಪ್ರಥಮ ವರ್ಷದ ಪಿಯು ಶಿಕ್ಷಣವನ್ನು ಕೈಬಿಟ್ಟರು. ಇನ್ನುಳಿದ ಅರ್ಧ ವರ್ಷದಲ್ಲಿ ತಂದೆ ವೆಂಕಟರಮಣ ಭಟ್ಟರಿಂದ ಜ್ಯೋತಿಷ್ಯ ಹೇಳಿಸಿಕೊಂಡ್ರು. ಬಳಿಕ ಮುಂದಿನ ಶೈಕ್ಷಣಿಕ ಸಾಲಿನಲ್ಲಿ ಮೇಧಾ ದಕ್ಷಿಣಾ ಮೂರ್ತಿ ಪಾಠ ಶಾಲೆ ಸೇರಿಕೊಂಡು ಸಂಸ್ಕೃತ ಪ್ರಾಥಮಿಕ ಶಿಕ್ಷಣ ಹಾಗೂ ಜೊತೆ ಜೊತೆಗೆ ವೇದ ಹಾಗೂ ಕಲಾವಿಭಾಗದಲ್ಲಿ ಪಿಯು ಶಿಕ್ಷಣವನ್ನೂ ಪಡೆದರು.


ಬಳಿಕ ಮೈಸೂರು ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ಮೂರು ವರ್ಷ ಕಲಿತು, ವೇದದಲ್ಲಿ ಪ್ರವೇಶ ಪರೀಕ್ಷೆ ಹಾಗೂ ಸಂಸ್ಕೃತದಲ್ಲಿ ಸಾಹಿತ್ಯ ಪರೀಕ್ಷೆ ಉತ್ತೀರ್ಣರಾದರು. ಇದರೊಡನೆಯೇ ಮಹಾರಾಜ ಸಂಜೆ ಕಾಲೇಜಿನಲ್ಲಿ ಓದಿ ಬಿಎ ಪದವಿಯನ್ನೂ ಪಡೆದರು. ಇಲ್ಲಿ ಸಂಸ್ಕೃತದಲ್ಲಿ ವಿಶ್ವವಿದ್ಯಾಲಯ ಮಟ್ಟದಲ್ಲಿ ಎರಡು ಚಿನ್ನದ ಪದಕ ತಮ್ಮದಾಗಿಸಿಕೊಂಡು, ಅಂದಿನ ರಾಜ್ಯಪಾಲ ಹಂಸರಾಜ ಭಾರದ್ವಾಜ್ ಅವರಿಂದ ಪುರಸ್ಕರಿಸಲ್ಪಟ್ಟರು.


ನಂತರ ಈಗಾಗಲೇ ತಂದೆಯಿಂದ ಜ್ಯೋತಿಷ್ಯಶಾಸ್ತ್ರದ ಅ, ಆ, ಇ, ಈ ಕಲಿತಿದ್ದ ಸುಬ್ರಹ್ಮಣ್ಯ ಅವರು ಶೃಂಗೇರಿಯತ್ತ ಪಯಣ ಬೆಳೆಸಿದ್ರು. ರಾಷ್ಟ್ರೀಯ ಸಂಸ್ಕೃತ ಸಂಸ್ಥಾನದವರು ಆ ವರ್ಷ ಜ್ಯೋತಿಷ್ಯ ಆಚಾರ್ಯ ವಿಭಾಗವನ್ನು ಆರಂಭಿಸಿದಾಗ, ಆ ವಿಭಾಗದ ಮೊದಲ ವಿದ್ಯಾರ್ಥಿ ಇವರು ಮತ್ತು ಇವರ ಗೆಳೆಯ. ಶೃಂಗೇರಿಯಲ್ಲಿ ಜ್ಯೋತಿಷ್ಯ ಶಾಸ್ತ್ರದಲ್ಲಿ ಶಿಕ್ಷಣ ಪಡೆಯುವುದರ ಜೊತೆ ಜೊತೆಗೇ ಮೈಸೂರು ಮುಕ್ತ ವಿವಿಯಿಂದ ಕನ್ನಡ ಸ್ನಾತಕೋತ್ತರ ಪದವಿ ಪಡೆದರು.
ಹೀಗೆ ಕೇವಲ ಒಂದರ ಮೇಲೊಂದರಂತೆ ಪದವಿ, ಸ್ನಾತಕೋತ್ತರ ಪದವಿ ಪಡೆಯುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ತನ್ನ ಪ್ರತಿಭೆಯನ್ನು ಸಾಭೀತುಪಡಿಸಿದರು. ಭಾಷಣ, ಶ್ಲೋಕ, ಅಂತ್ಯಾಕ್ಷರಿ ಸ್ಪರ್ಧೆ ಸೇರಿದಂತೆ ನಾನಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ಬಹುಮಾನಗಳನ್ನು ತನ್ನದಾಗಿಸಿಕೊಂಡ ಇವರು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ಆಲ್ ರೌಂಡರ್ ಆಗಿ ಹೊರಹೊಮ್ಮಿದರು.


ಹೀಗೆ ವಿದ್ಯಾಭ್ಯಾಸ ಮಾಡುತ್ತಾ ,ಯೋಗ ಶಿಕ್ಷಣದ ಕಡೆಗೆ ಒಲವು ಮೂಡಿತು. ಗೆಳೆಯ ಜಯಕೃಷ್ಣ ಎಂಬುವವರ ಜೊತೆ ಬೆಳಕು ಬಿಡುವ ಮುನ್ನ ಯೋಗಾಭ್ಯಾಸದಲ್ಲಿ ತೊಡಗಿದರು. ಆಗಷ್ಟೇ ಬಾಬಾ ರಾಮ್‍ದೇವ್ ಅವರು ಪ್ರಚಾರದಲ್ಲಿದ್ದರು. ಯೋಗದ ಕಡೆ ಆಸಕ್ತಿ ಹೆಚ್ಚಿತು.


ಅಷ್ಟೊತ್ತಿಗೆ ಜ್ಯೋತಿಷ್ಯ ಶಿಕ್ಷಣವೂ ಮುಗಿದಿತ್ತು. ಇನ್ನು ಜ್ಯೋತಿಷ್ಯ ಪ್ರಾದ್ಯಾಪಕರಾಗಿ ವೃತ್ತಿ ಆರಂಭಿಸ್ತಾರೆ ಎಂದು ಗೆಳೆಯರು ಹಾಗೂ ಕುಟುಂಬದವರು ಅಂದುಕೊಂಡಿದ್ರು. ಆದರೆ, ಜ್ಯೋತಿಷ್ಯ ಶಿಕ್ಷಣವನ್ನು ಪಡೆದರೂ ಜ್ಯೋತಿಷ್ಯ ಹೇಳಲಾಗಲಿ ಅಥವಾ ಪ್ರಾದ್ಯಾಪಕ ವೃತ್ತಿ ಆರಂಭಿಸಲಾಗಲಿ ಇವರ ಮನಸ್ಸು ಒಪ್ಪಲಿಲ್ಲ. ಬೂಟಾಟಿಕೆಯ, ಕಳ್ಳ ಜ್ಯೋತಿಷಿಗಳನ್ನು ನೋಡಿ… ಇದರ ಸಹವಾಸಬೇಡ ಎಂದು ದೂರ ಉಳಿದರು. ಯಾರಿಗೂ ಮೋಸ ಮಾಡದೇ ಒಳ್ಳೆಯದನ್ನು ಮಾಡುವ ವೃತ್ತಿ ಆಯ್ಕೆಮಾಡಿಕೊಳ್ಳಬೇಕೆಂದು ಮನಸ್ಸು ತುಡಿಯಿತು. ಆಗ ಅವರೆದರು ಬಂದಿದ್ದೇ ‘ಯೋಗ’…!


ಯೋಗವನ್ನು ವೃತ್ತಿಯಾಗಿ ಆಯ್ಕೆಮಾಡಿಕೊಂಡಲ್ಲಿ ಮಾನಸಿಕ ಹಾಗೂ ದೈಹಿಕ ನೆಮ್ಮದಿ ಎರಡೂ ಸಿಗುತ್ತೆ ಎನ್ನೋದನ್ನು ಮನಗಂಡು ಬಾಬಾ ರಾಮದೇವ್ ಆಶ್ರಮದಲ್ಲಿ ಯೋಗ ವಿಜ್ಞಾನದಲ್ಲಿ ಪದವಿ ಪಡೆಯುವ ನಿರ್ಧಾರ ಮಾಡಿದ್ರು. ಆದರೆ ಆ ಅವಕಾಶ ಸ್ವಲ್ಪದರಲ್ಲೇ ತಪ್ಪಿ ಹೋಯ್ತು. ಆ ವೇಳೆ ಅಧ್ಯಾಪಕರೊಬ್ಬರಿಂದ ಮಂಗಳೂರು ವಿವಿಯಲ್ಲಿ ಯೋಗ ವಿಜ್ಞಾನ ಕೋರ್ಸ್ ಇರೋ ಬಗ್ಗೆ ತಿಳಿಯಿತು. ಅಲ್ಲಿಗೆ ಹೋಗಲು ತೀರ್ಮಾನಿಸಿದಾಗ ಯಾರೊಬ್ಬರೂ ಪ್ರೋತ್ಸಾಹ ನೀಡಲಿಲ್ಲ. ಆಗಿದ್ದಾಗಲಿ, ನನ್ನ ಮೇಲೆ ನನಗೆ ನಂಬಿಕೆ ಇದೆ ಅಂತ ಡಿಸೈಡ್ ಮಾಡಿ ಎರಡು ವರ್ಷದ ಯೋಗ ಪದವಿಗೆ ಸೇರಿದರು. ಎರಡನೇ ವರ್ಷದ ಪದವಿ ಸಂದರ್ಭದಲ್ಲಿ ಗುಜರಾತಿನ ಭಾವನಗರದಲ್ಲಿ ನಡೆದ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗುವ ಮೂಲಕ ತಾನೊಬ್ಬ ಅತ್ಯುತ್ತಮ ಯೋಗಪಟು ಆಗಬಲ್ಲೇ ಎಂಬುದನ್ನು ಸಾಭೀತು ಪಡಿಸಿದ್ರು. ಅದಾಗಲೇ ಸುಬ್ರಹ್ಮಣ್ಯ ಪರಿಣಿತ ಯೋಗಪಟು ಆಗಿಬಿಟ್ಟಿದ್ರು.


ಯೋಗ ವಿಜ್ಞಾನದಲ್ಲಿ ಮೂರನೇ ರ್ಯಾಂಕ್ ನೊಂದಿಗೆ ತೇರ್ಗಡೆಯಾದ ಇವರು ಉದ್ಯೋಗ ಅರಸಿ ರಾಜಧಾನಿ ಬೆಂಗಳೂರಿನತ್ತ ಮುಖಮಾಡಿದ್ರು. ತುಂಬಾ ಕಡಿಮೆ ಸಂಬಳದೊಂದಿಗೆ ಕೆಲಸ ಆರಂಭಿಸಿದರು.
ಹೀಗಿರುವಾಗ ಒಂದು ದಿನ ಇವರಿಂದ ಯೋಗ ಕಲಿಯುತ್ತಿದ್ದ ವ್ಯಕ್ತಿಗೆ ಇವರು (ಸುಬ್ರಹ್ಮಣ್ಯ) ಯೋಗ ಮಾತ್ರವಲ್ಲ ಸಂಸ್ಕೃತವನ್ನೂ ಕಲಿತಿದ್ದಾರೆ ಎನ್ನೋದು ತಿಳಿಯುತ್ತೆ. ಆಗ ಅವರು ತಮ್ಮ ಮಗಳಿಗೆ ಟ್ಯೂಷನ್ ಮಾಡುವಂತೆ ಒತ್ತಾಯ ಮಾಡಿದರು. ಒಂದೆಡೆ ಸಂಸ್ಥೆಯೊಂದರಲ್ಲಿ ಯೋಗ ಹೇಳಿಕೊಡುತ್ತಾ, ಇನ್ನೊಂದೆಡೆ ಒಬ್ಬರಿಗೆ ಸಂಸ್ಕೃತ ಪಾಠ ಮಾಡುತ್ತಾ ಇದ್ದ ಸುಬ್ರಹ್ಮಣ್ಯ ಅವರಿಗೆ ಕಾಲೇಜೊಂದು ಕೈಬೀಸಿ ಕರೆಯಿತು. ಪಾರ್ಟ್ ಟೈಮ್ ಸಂಸ್ಕೃತ ಅಧ್ಯಾಪಕನಾಗಿ ಕೆಲಸ ಮಾಡಲು ಶುರುಮಾಡಿದ್ರು. ಅಷ್ಟೇಅಲ್ಲದೆ ನಾನಾ ಟೆಲಿವಿಷನ್ ವಾಹಿನಿಗಳಲ್ಲಿ ಯೋಗ ಕಾರ್ಯಕ್ರಮಗಳನ್ನು ನಡೆಸಿಕೊಡಲಾರಂಭಿಸಿದರು.


ಹೀಗೆ ಬಿಡುವಿಲ್ಲದೆ ಯೋಗ, ಸಂಸ್ಕೃತ ಬೋಧನೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಸುಂದರ ಬದುಕನ್ನು ಕಟ್ಟಿಕೊಳ್ಳುತ್ತಿರುವ ಮತ್ತೊಂದು ಒಳ್ಳೆಯ ಅವಕಾಶ ಬಂದೊದಗಿತು…!
ಬೆಂಗಳೂರಿನ ಸದಾಶಿವ ನಗರದಲ್ಲಿ ವ್ಯಕ್ತಿಯೊಬ್ಬರಿಗೆ ಯೋಗ ಹೇಳಿಕೊಡುವಾಗ, ‘ನೀವು ಸಿಂಗಾಪುರದಲ್ಲಿ ಅವಕಾಶ ಸಿಕ್ಕೆರೆ ಹೋಗ್ತೀರಾ’? ಎಂದು ಕೇಳಿದ್ರು. ಜೀವನದಲ್ಲಿ ಒಮ್ಮೆಯಾದ್ರು ಸಿಂಗಾಪುರಕ್ಕೆ ಹೋಗಬೇಕು ಎಂಬ ಕನಸುಕಂಡಿದ್ದ ಸುಬ್ರಹ್ಮಣ್ಯ ಕೂಡಲೇ ಅದಕ್ಕೆ ಒಪ್ಪಿ ಸಿಂಗಾಪುರಕ್ಕೆ ಹಾರಿದರು. ಸಿಂಗಾಪುರದಲ್ಲಿ ಈ ನಮ್ಮ ಹೆಮ್ಮೆಯ ಕನ್ನಡಿಗ ಭಾರತೀಯ ಸಂಸ್ಕೃತಿಯ ಭಾಗವಾಗಿರೋ ಯೋಗವನ್ನು ಹೇಳಿಕೊಡ್ತಿದ್ದಾರೆ…! ಸಿಂಗಾಪುರದಲ್ಲಿ ನಮ್ಮ ಉತ್ತರ ಕನ್ನಡದ ಹೆಮ್ಮೆಯ ಕನ್ನಡಿಗ ಯೋಗ ಗುರು ಎಂಬುದು ನಿಜಕ್ಕೂ ಖುಷಿಯ ವಿಚಾರ ಅಲ್ವೇ…?
-ಶಶಿಧರ್ ಎಸ್ ದೋಣಿಹಕ್ಲು

 

Share post:

Subscribe

spot_imgspot_img

Popular

More like this
Related

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ

ಉರುಸ್ ಮೆರವಣಿಯಲ್ಲಿ ಐ ಲವ್ ಮೊಹಮ್ಮದ್ ಘೋಷಣೆ: ಆಕ್ಷೇಪಿಸಿದ್ದಕ್ಕೆ ಕಲ್ಲುತೂರಾಟ ಬೆಳಗಾವಿ: ಪ್ರತಿವರ್ಷದಂತೆ...

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...