SSLC ಪೂರ್ವಸಿದ್ಧತಾ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ: ಶಿಕ್ಷಕರು ಸೇರಿ 8 ಮಂದಿ ಬಂಧನ
ಬೆಂಗಳೂರು: ಎಸ್ಎಸ್ಎಲ್ಸಿ ಪೂರ್ವಸಿದ್ಧತಾ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ವಿಭಾಗದ ಸೈಬರ್ ಕ್ರೈಂ ಪೊಲೀಸರು ಶಿಕ್ಷಕರು ಹಾಗೂ ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ.
ಜನವರಿ 9ರಂದು ಹಿಂದಿ ವಿಷಯದ ಪೂರ್ವಸಿದ್ಧತಾ ಪರೀಕ್ಷೆ ನಡೆಯಬೇಕಿತ್ತು. ಆದರೆ ಅದಕ್ಕೂ ಮುನ್ನ ಜನವರಿ 8ರಂದು ‘ನಿರಂಜನ್ ಶೆಟ್ಟಿ’ ಹೆಸರಿನ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿದೆ. ಈ ಬಗ್ಗೆ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಾಜು ಅವರು ನೀಡಿದ ದೂರಿನ ಮೇರೆಗೆ ಉತ್ತರ ವಿಭಾಗದ ಸೈಬರ್ ಸೆನ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ಪ್ರಕರಣದ ತನಿಖೆ ನಡೆಸಿದ ಪೊಲೀಸರು, ವಿವಿಧ ಜಿಲ್ಲೆಗಳ ಮುಖ್ಯೋಪಾಧ್ಯಾಯರು, ಶಿಕ್ಷಕರು ಹಾಗೂ ಇಬ್ಬರು ಅಪ್ರಾಪ್ತ ವಿದ್ಯಾರ್ಥಿಗಳನ್ನು ಸೇರಿ ಒಟ್ಟು 8 ಮಂದಿಯನ್ನು ಬಂಧಿಸಿದ್ದಾರೆ. ತುಮಕೂರು, ರಾಮನಗರ ಹಾಗೂ ಕಲಬುರಗಿ ಜಿಲ್ಲೆಗಳ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರು ಬಂಧಿತರಾಗಿದ್ದಾರೆ.
ಪ್ರಸ್ತುತ ಪೊಲೀಸರು ಪ್ರಶ್ನೆಪತ್ರಿಕೆ ವೈರಲ್ ಮಾಡಿದವರ ವಾಟ್ಸಪ್, ಇನ್‌ಸ್ಟಾಗ್ರಾಂ ಮತ್ತು ಟೆಲಿಗ್ರಾಂ ಖಾತೆಗಳು ಸೇರಿದಂತೆ ಮೊಬೈಲ್‌ಗಳನ್ನು ಪರಿಶೀಲಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಮುಂದಿನ ದಿನಗಳಲ್ಲಿ ಇನ್ನಷ್ಟು ಮಂದಿ ಬಂಧನವಾಗುವ ಸಾಧ್ಯತೆ ಇದೆ.
ಬಂಧಿತರ ವಿವರಗಳು:
ಗಿರೀಶ್ ವಿ.ಡಿ. – ಮುಖ್ಯೋಪಾಧ್ಯಾಯ (ತುಮಕೂರು)
ಅಮ್ಜದ್ ಖಾನ್ – ಸಹ ಶಿಕ್ಷಕ (ರಾಮನಗರ)
ಶಾಹಿದಾ ಬೇಗಂ – ಮುಖ್ಯ ಶಿಕ್ಷಕಿ (ಕಲಬುರಗಿ)
ಫಾಹ್ಮಿದಾ – ಸಹ ಶಿಕ್ಷಕಿ (ಕಲಬುರಗಿ)
ಮೊಹಮ್ಮದ್ ಸಿರಾಜುದ್ದೀನ್ – ಶಿಕ್ಷಕ (ಕಲಬುರಗಿ)
ಫರ್ಜಾನಾ ಬೇಗಂ – ಶಿಕ್ಷಕಿ (ಕಲಬುರಗಿ)
ಪರೀಕ್ಷಾ ವ್ಯವಸ್ಥೆಯ ಪಾರದರ್ಶಕತೆಯನ್ನು ಕಾಪಾಡುವ ದೃಷ್ಟಿಯಿಂದ ತನಿಖೆಯನ್ನು ಇನ್ನಷ್ಟು ತೀವ್ರಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.






