ಸಿನಿಮಾ ಮತ್ತು ರಾಜಕೀಯ ಈ ಎರಡು ಕ್ಷೇತ್ರಗಳ ನಡುವೆ ಅದೇನೋ ಒಂಥರಾ ಅವಿನಾಭಾವ ಸಂಬಂಧ. ಸಿನಿ ತಾರೆಗಳು ರಾಜಕೀಯಕ್ಕೆ ಎಂಟ್ರಿ ಕೊಟ್ಟಿರೋದು, ಕೊಡ್ತಾ ಇರೋದು ಹೊಸತೇನಲ್ಲ. ಚುನಾವಣೆ ವೇಳೆ ತಮ್ಮ ಪರ ಪ್ರಚಾರ ಮಾಡಿ ಅಂತ ರಾಜಕಾರಣಿಗಳು ಸೂಪರ್ ಸ್ಟಾರ್‍ಗಳ ಮೊರೆ ಹೋಗೋದು ಸಹ ಕಾಮನ್. ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರದಿ.
ದರ್ಶನ್ ಮತ್ತು ಸುದೀಪ್ ರಿಯಲ್ ಸ್ಟಾರ್ ಉಪೇಂದ್ರ ಅವರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿ (ಕೆಪಿಜೆಪಿ) ಪರ ಪ್ರಚಾರ ಮಾಡಬಹುದು ಅಂತ ಭಾವಿಸಲಾಗಿತ್ತು. ಆದ್ರೆ, ಈಗ ಈ ಇಬ್ಬರು ಸ್ಟಾರ್ ನಟರು ಸಿನಿಮಾ ರಂಗದ ಗೆಳೆಯನ ಪರ ಬಿಟ್ಟು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಬ್ಯಾಟಿಂಗ್ ನಡೆಸುತ್ತಾರೆ ಎಂದು ಹೇಳಲಾಗಿದೆ.
2018ರ ವಿಧಾನಸಭಾ ಚುನಾವಣೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಕ್ಷೇತ್ರಕ್ಕೆ ಗ್ಲಾಮರ್ ಟಚ್ ಕೊಡಲು ಪ್ಲಾನ್ ಮಾಡಿದ್ದಾರೆ. ವರುಣಾ ಮತ್ತು ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಟಾರ್ ನಟ-ನಟಿಯರನ್ನು ಪ್ರಚಾರಕ್ಕಾಗಿ ಕರೆತರ್ತಿದ್ದಾರೆ ಎಂದು ತಿಳಿದುಬಂದಿದೆ.
ನಟಿ ರಮ್ಯಾ ಮತ್ತು ಭಾವನ ಚುನಾಚಣೆ ಕಣದಲ್ಲಿರುತ್ತಾರೆ ಎಂದು ತಿಳಿದುಬಂದಿದೆ. ಹಾಗಾಗಿ ದರ್ಶನ್, ಸುದೀಪ್ ಅವರ ಜೊತೆಗೆ ಈ ಇಬ್ಬರು ನಟಿಯರು ತಮ್ಮ ಪಕ್ಷದ ಪರ ಪ್ರಚಾರ ಮಾಡಿಯೇ ಮಾಡ್ತಾರೆ. ದರ್ಶನ್ ಅವರ ತಾಯಿ ಸಹ ಕಾಂಗ್ರೆಸ್‍ನಲ್ಲಿದ್ದಾರೆ.
ನಿನ್ನೆ ಮುಖ್ಯಮಂತ್ರಿಗಳನ್ನು ಭೇಟಿಯಾಗಿದ್ದ ಕಿಚ್ಚ ಸುದೀಪ್ ಸಾಹಸಸಿಂಹ ವಿಷ್ಣುವರ್ಧನ್ ಅವರ ಸಮಾಧಿ ಸ್ಥಳವನ್ನು ಪುಣ್ಯಭೂಮಿ ಮಾಡುವಂತೆ ಮನವಿ ಮಾಡಿಕೊಂಡಿದ್ದಾರೆ . ಭೇಟಿಯಾದ ಸುದೀಪ್ ಅವರೊಡನೆ ಚರ್ಚಿಸಿದ ಸಿದ್ದರಾಮಯ್ಯ ಚುನಾವಣೆಗೆ ಸಾಥ್ ನೀಡುವಂತೆ, ತಮ್ಮ ಪರ ಪ್ರಚಾರ ಮಾಡುವಂತೆ ಕೇಳಿಕೊಂಡಿದ್ದಾರೆ. ಸುದೀಪ್ ಇದಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಕಿಚ್ಚನ ಜೊತೆ ಗೆಳೆಯ ಚಾಲೆಂಜಿಂಗ್ ಸ್ಟಾರ್ ಕೂಡ ಕೈ ಜೋಡಿಸ್ತಾರೆ ಎನ್ನಲಾಗ್ತಿದೆ.