ಅಪಘಾತಕ್ಕೀಡಾದ ವಾಹನಕ್ಕೆ ಪರ್ಮಿಟ್ ಇಲ್ದೇ ಇದ್ರೂ ವಿಮಾ ಸಂಸ್ಥೆಯೇ ಪರಿಹಾರದ ಮೊತ್ತವನ್ನು ಪಾವತಿಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ರಲ್ಲಿ ಬೆಂಗಳೂರಲ್ಲಿ ನಡೆದ ಲಾರಿ ಮತ್ತು ಬೈಕ್ ಅಪಘಾತವೊಂದರ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಮಾ ಕಂಪನಿಯೇ ಪರಿಹಾರ ನೀಡಬೇಕೆಂದು ಸ್ಥಳೀಯ ನ್ಯಾಯಾಲಯ ತೀರ್ಪು ನೀಡಿತ್ತು. ಇದನ್ನು ಪ್ರಶ್ನಿಸಿ ವಿಮಾ ಕಂಪನಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.
ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ, ಎ. ಎಂ ಖಾನ್ವಿಲ್ಕರ್ ಹಾಗೂ ಡಿ.ವೈ ಚಂದ್ರಚೂಡ ನೇತೃತ್ವದ ತ್ರಿ ಸದಸ್ಯ ಪೀಠ ಪರ್ಮಿಟ್ ಇಲ್ಲದೆ ಸಂಚರಿಸುತ್ತಿರುವ ವಾಹನಗಳಿಂದ ಅಪಘಾತ ಸಂಭವಿಸಿದಾಗ ಅಪಘಾತದಿಂದ ವ್ಯಕ್ತಿ ಸಾವನ್ನಪ್ಪಿದಲ್ಲಿ ಅಥವಾ ಗಾಯಗೊಂಡವರಿಗೆ ವಿಮಾ ಕಂಪನಿಗಳೇ ಪರಿಹಾರ ನೀಡಬೇಕು ಮತ್ತು ಪರಿಹಾರ ಮೊತ್ತವನ್ನು ಅವುಗಳೇ ಬರಿಸಬೇಕು. ಪರಿಹಾರದ ಮೊತ್ತವನ್ನು ವಾಹನದ ಮಾಲೀಕರಿಂದ ಕಂಪನಿಗಳು ವಸೂಲಿ ಮಾಡಬೇಕು ಎಂದು ವಿಮಾ ಸಂಸ್ಥೆಗೆ ಆದೇಶ ನೀಡಿದೆ.
2009ರ ಮಾರ್ಚ್ 17 ರಂದು ಬೆಂಗಳೂರು ಹೊರವಲಯದ ತುಮಕೂರು ರಸ್ತೆಯಲ್ಲಿ ಬೈಕ್ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿತ್ತು. ಬೈಕ್ ಚಲಾಯಿಸುತ್ತಿದ್ದ ಸವಾರ ಸತೀಶ್ ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದರು. ಹಿಂಬದಿ ಸವಾರ ಆನಂದ್ ಎಂಬವರಿಗೆ ಗಂಭೀರ ಗಾಯಗಳಾಗಿದ್ದವು. ಪ್ರಕರಣ ವಿಚಾರಣೆ ನಡೆಸಿದ ಸ್ಥಳೀಯ ನ್ಯಾಯಾಲಯವು ಮೃತರ ಕುಟುಂಬಕ್ಕೆ 4.53 ಲಕ್ಷ ಮತ್ತು ಗಾಯಾಳುವಿಗೆ 1.72 ಲಕ್ಷ ಪರಿಹಾರ ನೀಡಬೇಕು ಎಂದು ತೀರ್ಪು ನೀಡಿತ್ತು.
ಸ್ಥಳೀಯ ನ್ಯಾಯಾಲಯದ ತೀರ್ಪಿಗೆ ನ್ಯಾಷನಲ್ ಇನ್ಸೂರೆನ್ಸ್ ಕಂಪೆನಿ ಆಕ್ಷೇಪ ವ್ಯಕ್ತಪಡಿಸಿ, ಲಾರಿಗೆ ರಹದಾರಿ ಇಲ್ಲದ ಕಾರಣ ನಾವು ಪರಿಹಾರ ಕೊಡುವುದಿಲ್ಲ ಎಂದು ಹೈಕೋರ್ಟ್ ಮೊರೆ ಹೋಗಿತ್ತು. ಹೈಕೋರ್ಟ್ ನಲ್ಲಿ ತನ್ನ ವಾದ ಮಂಡಿಸಿದ್ದ ವಿಮಾ ಕಂಪೆನಿ, ಸಂತ್ರಸ್ತರಿಗೆ ನಾವು ಪರಿಹಾರ ನೀಡಿ, ನಂತರ ಅದನ್ನು ಲಾರಿ ಮಾಲೀಕರಿಂದ ವಸೂಲಿ ಮಾಡಲು ಸಾಧ್ಯವಿಲ್ಲ. ರಹದಾರಿ ಇಲ್ಲದ ಕಾರಣ ಲಾರಿ ಮತ್ತು ಅದರ ಮಾಲೀಕರನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಪರಿಹಾರವನ್ನು ಲಾರಿ ಮಾಲೀಕರೇ ಪಾವತಿ ಮಾಡಬೇಕು ಎಂದು ಕಂಪೆನಿ ವಾದಿಸಿತ್ತು. ವಿಮಾ ಕಂಪೆನಿಯ ವಾದವನ್ನು ಹೈಕೋರ್ಟ್ ಮಾನ್ಯ ಮಾಡಿ, ಮೃತ ವ್ಯಕ್ತಿಯ ಕುಟುಂಬಕ್ಕೆ ನೀಡಬೇಕಿದ್ದ ಪರಿಹಾರ ಮೊತ್ತವನ್ನು 16 ಲಕ್ಷ ರೂ.ಗೆ ಏರಿಸಿ ತೀರ್ಪು ನೀಡಿತ್ತು.
ಮೃತ ಕುಟುಂಬದವರು ಲಾರಿ ಮಾಲೀಕರಿಂದ ಪರಿಹಾರ ಪಡೆದುಕೊಳ್ಳಲು ಸಾಧ್ಯವಿಲ್ಲ. ವಿಮಾ ಕಂಪೆನಿಯಿಂದಲೇ ಅದನ್ನು ಕೊಡಿಸಿ ಎಂದು ಸುಪ್ರೀಂ ಕೋರ್ಟ್‍ಗೆ ಮೊರೆ ಹೊಗಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಅರ್ಜಿದಾರರ ಮನವಿಯನ್ನು ಮಾನ್ಯ ಮಾಡಿದೆ.