ದಿ ನ್ಯೂ ಇಂಡಿಯನ್ ಟೈಮ್ಸ್ ದಕ್ಷಿಣ ಭಾರತದ ಪ್ರಶಸ್ತಿ ಪ್ರದಾನ ಸಮಾರಂಭ 2025 ಅದ್ದೂರಿಯಾಗಿ ನೆರವೇರಿತು. ಅರಮನೆ ಮೈದಾನದ ಶೃಂಗಾರ ಪ್ಯಾಲೇಸ್‌ನಲ್ಲಿ ಸಂಜೆ 4 ಗಂಟೆಗೆ ಆರಂಭವಾದ ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಸಾಕ್ಷಿಯಾಗಿದ್ದರು. ಮಾಧ್ಯಮ ಕ್ಷೇತ್ರದ ಸಾಧಕರಿಗೆ ಗಣ್ಯರಿಂದ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ದಿ ನ್ಯೂ ಇಂಡಿಯನ್ ಟೈಮ್ಸ್ ಸಂಸ್ಥೆಯು ಸತತ 7 ವರ್ಷಗಳಿಂದ ಮಾಧ್ಯಮದ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡುತ್ತಾ ಬಂದಿದೆ. ಕಳೆದ ವರ್ಷದಿಂದ ದಕ್ಷಿಣ ಭಾರತದ ಮಾಧ್ಯಮಗಳಿಗೆ ಸೇರಿದಂತೆ 40ಕ್ಕೂ ಹೆಚ್ಚು ಸುದ್ದಿ ಮಾಧ್ಯಮಗಳ ಸಾಧಕರನ್ನು ಗೌರವಿಸಲಾಗುತ್ತಿದೆ. ನಟ ಹಾಗೂ TNIT ಸಂಸ್ಥೆಯ ಸಿಇಒ ರಘು ಭಟ್ ಅವರ ಮಾಧ್ಯಮದ ಮೇಲಿನ ಗೌರವ ಮತ್ತು ಪ್ರೀತಿಯಿಂದ ಆರಂಭವಾದ ಈ ಸಂಸ್ಥೆ ಈಗ ಎಂಟನೇ ವರ್ಷಕ್ಕೆ ಕಾಲಿಟ್ಟಿದೆ. ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕಿ ಸುಗುಣಾ ರಘು, ಪ್ರಧಾನ ಸಂಪಾದಕಿ ಮೀರಾ, ಪ್ರಾಜೆಕ್ಟ್ ಹೆಡ್ ಮಧುಕಾಂತಿ, ಮಾರ್ಕೆಟಿಂಗ್ ಹೆಡ್ ಖುಷಿ, ಆಪರೇಷನ್ ಹೆಡ್ ಭಾರ್ಗವ್, ತಾಂತ್ರಿಕ ತಂಡದ ದೊರೆ ಅರಸ್ ಸೇರಿದಂತೆ ಹಲವು ಸದಸ್ಯರು ಈ ಕಾರ್ಯಕ್ರಮಕ್ಕಾಗಿ ಹಗಲಿರುಳು ಶ್ರಮಿಸಿದ್ದಾರೆ.
TNIT ಕಾರ್ಯಕ್ರಮದ ಮುಖ್ಯ ಉದ್ದೇಶ ಮಾಧ್ಯಮ ಕ್ಷೇತ್ರದಲ್ಲಿ ಸಾಧನೆ ಮಾಡಿದ್ದರೂ ಬೆಳಕಿಗೆ ಬಾರದೆ ಉಳಿದಿರುವ ಸಾಧಕರನ್ನು ಗುರುತಿಸಿ ಸನ್ಮಾನಿಸುವುದು. ಈ ಕಾರ್ಯಕ್ರಮದಲ್ಲಿ ಉತ್ತಮ ನಿರೂಪಕರು, ಉತ್ತಮ ವರದಿಗಾರರು, ವಿಡಿಯೋ ಎಡಿಟರ್, ವಾಯ್ಸ್ ಓವರ್ ಕಲಾವಿದರು, ಕ್ಯಾಮೆರಾಮ್ಯಾನ್ ಸೇರಿದಂತೆ ಹಲವು ವಿಭಾಗಗಳಿಗೆ ಪ್ರಶಸ್ತಿಗಳನ್ನು ನೀಡಲಾಯಿತು.
ಇಡೀ ಭಾರತದಲ್ಲಿ ಈ ರೀತಿ ಸತತವಾಗಿ ಹಲವು ವರ್ಷಗಳಿಂದ ಯಶಸ್ವಿಯಾಗಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ನಡೆಸಿಕೊಂಡು ಬರುತ್ತಿರುವ ಏಕೈಕ ಸಂಸ್ಥೆ ನಮ್ಮ TNIT ಎಂಬುದು ಹೆಮ್ಮೆಯ ವಿಷಯ. ಕಳೆದ ಬಾರಿಯೂ ಕರ್ನಾಟಕ, ತಮಿಳುನಾಡು, ಆಂಧ್ರ ಮತ್ತು ಕೇರಳದ ಸುದ್ದಿ ಮಾಧ್ಯಮಗಳ ಸಾಧಕರಿಗೆ ಪ್ರಶಸ್ತಿ ನೀಡಿ ಯಶಸ್ವಿಗೊಂಡಿತ್ತು.
ಈ ಬಾರಿಯೂ ದಕ್ಷಿಣ ಭಾರತದ ಮಾಧ್ಯಮ ಮಿತ್ರರನ್ನು ಸನ್ಮಾನಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. 40ಕ್ಕೂ ಹೆಚ್ಚು ಚಾನೆಲ್‌ಗಳಿಗೆ ಸೇರಿ 85ಕ್ಕೂ ಹೆಚ್ಚು ಪ್ರಶಸ್ತಿಗಳನ್ನು ಈ ಬಾರಿ ನೀಡಲಾಗಿದ್ದು, ವಿವಿಧ ಕ್ಷೇತ್ರಗಳ ತಾರೆಯರು ಕಾರ್ಯಕ್ರಮಕ್ಕೆ ಮತ್ತಷ್ಟು ಮೆರಗು ನೀಡಿದರು.
ಇನ್ನೊಂದು ವಿಶೇಷವೆಂದರೆ, ಈ ಬಾರಿ 2 ಗಂಟೆಗಳ ಕಾಲ ಸಂವಾದ ಕಾರ್ಯಕ್ರಮ ನಡೆಯಿತು.
ಈ ಸಂವಾದದಲ್ಲಿ ಏಷ್ಯಾನೆಟ್ ಸುವರ್ಣ ನ್ಯೂಸ್ ಮುಖ್ಯಸ್ಥ ರವಿ ಹೆಗಡೆ ಹಾಗೂ ಹಿರಿಯ ಪತ್ರಕರ್ತ ರಂಗನಾಥ್ ಭರದ್ವಾಜ್ ಅವರು ಭಾಗವಹಿಸಿದ್ದರು. ಪತ್ರಿಕೋದ್ಯಮದ ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಉತ್ತರಿಸಿ, ಮಾಧ್ಯಮದ ಈಗಿನ ಸ್ಥಿತಿ-ಗತಿಗಳ ಬಗ್ಗೆ ಚರ್ಚೆ ನಡೆಸಲಾಯಿತು.
ಈ ಕಾರ್ಯಕ್ರಮಕ್ಕೆ ನಟ ಜಗ್ಗೇಶ್, ಅರವಿಂದ ವೆಂಕಟೇಶ ರೆಡ್ಡಿ, ಶ್ರೀ ವಚನಾನಂದ ಸ್ವಾಮಿಗಳು, ಪೇಜಾವರ ಶ್ರೀಗಳು, ನಟಿ ಸುಧಾರಾಣಿ, ಹಿರಿಯ ನಟಿ ಗಿರಿಜಾ ಲೋಕೇಶ್, ನಿರ್ದೇಶಕ-ನಟ ನಾಗಾಭರಣ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ನಟ ನೆನಪಿರಲಿ ಪ್ರೇಮ್, ನಟಿ ರಾಗಿಣಿ, ನಟಿ-ನಿರ್ದೇಶಕಿ ರೂಪಾ ಅಯ್ಯರ್, ನಟ ಸುಚೇಂದ್ರ ಪ್ರಸಾದ್, ಮುಖ್ಯಮಂತ್ರಿ ಚಂದ್ರು, ಗಾಯಕಿ ಶಮಿತಾ ಮಲ್ನಾಡ್, ನಟ ತಿಲಕ್, ನಟ ಶ್ರೀನಗರ ಕಿಟ್ಟಿ, ನಟಿ ಖುಷಿ, ಪರಭಾಷಾ ನಟ ರವಿ ಕಾಳೆ, ನಿರ್ದೇಶಕ ಶ್ರೀನಂದನ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಈ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಥಮ ಪ್ರಸಾದ್, ಸೂರ್ಯ ರಾವ್ ಅವರ ನೃತ್ಯ, ವಿಭಾ ರಾಘವೇಂದ್ರ, ಶ್ರೀ ಪಾರ್ಶ್ವನಾಥ್ ಉಪಾಧ್ಯಯ ತಂಡ, ಹಾಗೂ ಮೀಫಾ ನೃತ್ಯ ತಂಡದವರು ಮನೋರಂಜನೆ ನೀಡಿ ಎಲ್ಲರ ಗಮನ ಸೆಳೆದರು.
ಸಂಜೆ 4 ಗಂಟೆಗೆ ಆರಂಭವಾದ ಈ ಕಾರ್ಯಕ್ರಮ ಕಳೆದ ವರ್ಷಕ್ಕಿಂತ ಇನ್ನಷ್ಟು ಅದ್ದೂರಿಯಾಗಿ ನೆರವೇರಿತು.