ವಲಸೆ ವಿಚಾರದಲ್ಲಿ ಕಠಿಣ ನಿಯಮ ರೂಪಿಸಿದ್ದ ಅಮೆರಿಕಾದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈಗ ಅನಿವಾಸಿ ಭಾರತೀಯರಿಗೆ ಮತ್ತೊಂದು ಶಾಕ್ ನೀಡಲು ಹೊರಟಿದ್ದಾರೆ. ಅಮೆರಿಕದಲ್ಲಿಯೇ ಜನಿಸುವ ಮಕ್ಕಳಿಗೆ ಸ್ವಾಭಾವಿಕವಾಗಿ ಸಿಗುತ್ತಿದ್ದ ಪೌರತ್ವವನ್ನು ರದ್ದುಗೊಳಿಸಲು ಟ್ರಂಪ್ ಚಿಂತನೆ ನಡೆಸಿದ್ದಾರೆ.
ಪ್ರಸ್ತುತ ಅಮೆರಿಕಾ ಕಾನೂನು ಪ್ರಕಾರ, ಯಾವುದೇ ದೇಶದ ದಂಪತಿಗೆ ಅಮೆರಿಕದಲ್ಲೇ ಮಗು ಜನನವಾದರೆ ಆ ಮಗು ಸಹಜವಾಗಿಯೇ ಅಮೆರಿಕದ ಪೌರತ್ವಕ್ಕೆ ಅರ್ಹವಾಗಿರುತ್ತದೆ. ಅಷ್ಟೇ ಅಲ್ಲದೇ ಅಮೆರಿಕದ ಮಕ್ಕಳಿಗೆ ಸಿಗುವ ಎಲ್ಲ ಸೌಲಭ್ಯಗಳು ಆ ಮಗುವಿಗೆ ಸಿಗುತ್ತದೆ. ಈ ಕಾನೂನನ್ನು ರದ್ದು ಪಡಿಸಲು ಟ್ರಂಪ್ ಮುಂದಾಗಿದ್ದಾರೆ.
ಸಂದರ್ಶನಲ್ಲಿ ಟ್ರಂಪ್ ತನ್ನ ಮುಂದಿನ ಈ ನಿರ್ಧಾರ ಬಗ್ಗೆ ತಿಳಿಸಿದ್ದು ವಿಶ್ವದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇಡೀ ವಿಶ್ವದಲ್ಲಿಯೇ ಅಮೆರಿಕ ಮಾತ್ರ ಈ ರೀತಿ ಪೌರತ್ವ ನೀಡುತ್ತದೆ. ಇದು ಹಾಸ್ಯಾಸ್ಪದ ಮತ್ತು ಅಸಂಬದ್ಧ. ಇದು ಕೊನೆಯಾಗಲೇಬೇಕು. ನಾನೇ ಇದಕ್ಕೆ ಇತಿಶ್ರೀ ಹಾಡುತ್ತೇನೆ ಎಂದು ಖಡಕ್ ಆಗಿ ಹೇಳಿದ್ದಾರೆ.