ರಿಯಲ್ ಸ್ಟಾರ್ ಉಪೇಂದ್ರ ಅವರು ಪ್ರಜಾಕೀಯ ಕಲ್ಪನೆಯಲ್ಲಿ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಯನ್ನು (ಕೆಪಿಜೆಪಿ) ಸ್ಥಾಪಿಸಿರೋದು ನಿಮಗೆ ಗೊತ್ತೇ ಇದೆ. ಮೊನ್ನೆಯಷ್ಟೇ ಈ ಕೆಪಿಜೆಪಿಯ ವೆಬ್ ಸೈಟ್ ಕೂಡ ಲಾಂಚ್ ಮಾಡಿದ್ದಾರೆ. ರಾಜಕೀಯ ಮತ್ತು ಪ್ರಜಾಕೀಯ ನಡುವಿನ ವ್ಯತ್ಯಾಸವನ್ನು ತಿಳಿಸಿ ಬದಲಾವಣೆಗೆ ಜೊತೆಯಾಗಿರುವಂತೆ ಮನವಿ ಮಾಡಿದ್ದಾರೆ.
ಕೆಪಿಜೆಪಿ ವೆಬ್‍ಸೈಟ್‍ನಲ್ಲಿರೋ ಉಪ್ಪಿಯ ಒಂದು ವೀಡಿಯೋದ ಪೂರ್ಣ ಪಾಠ ಇಲ್ಲಿದೆ.
“ ನಾವು ಕರ್ನಾಟಕದ ಜನ ಎಷ್ಟು ಶ್ರೀಮಂತರೆನ್ನೋದು ನಿಮಗೇನಾದ್ರು ಗೊತ್ತಿದ್ಯಾ..? ನಮ್ಮಲ್ಲರ ಸಂಪಾದನೆ ಎಷ್ಟು..? ನಾವು ಎಷ್ಟು ಜನನ್ನ ಕೆಲ್ಸಕ್ಕೆ ಇಟ್ಕೊಂಡಿದ್ದೀವಿ ಅಂತ ನಿಮಗೇನಾದ್ರು ಅಂದಾಜಿದ್ಯಾ..? ಇರಲಿಕ್ಕಿಲ್ಲ..!
ನೀವು ಪ್ರತಿವರ್ಷ ಸಂಪಾದನೆ ಮಾಡ್ತಿರೋದು 2ಲಕ್ಷ ಕೋಟಿಗಿಂತಲೂ ಹೆಚ್ಚು..! ನೀವು ಕೆಲಸಕೊಟ್ಟಿರೋದು ಸಾವಿರಾರು ಜನಕ್ಕೆ..! ಇಲ್ನೋಡಿ ನಿಮಗೆ ಗೊತ್ತಿದ್ದೂ ಗೊತ್ತಿಲ್ದೇ ಇರೋ ಸತ್ಯ…ನಮ್ಮ ಕರ್ನಾಟಕದ ಬಜೆಟ್ ಹತ್‍ಹತ್ರ 2 ಲಕ್ಷ ಕೋಟಿ…! ಇದೆಲ್ಲಾ ನಾವು ಕೊಡ್ತಿರೋ ಡೆರೆಕ್ಟ್ ಅಂಡ್ ಇನ್‍ಡೆರೆಕ್ಟ್ ಟ್ಯಾಕ್ಸ್. ಅಂದ್ರೆ ತೆರಿಗೆಯಿಂದ ಬರೋದು. ನೀವು ಕೆಲಸ ಕೊಟ್ಟಿರೋದು ಸಾವಿರಾರು ಜನಕ್ಕೆ..! ನಿಮ್ಮ ಮನೆಮುಂದೆ ಸ್ವಚ್ಛ ಮಾಡೋ ಪೌರಕಾರ್ಮಿಕರಿಂದ ಹಿಡಿದು, ಕಾರ್ಪೋರೇಟರ್, ಎಂಎಲ್‍ಎ, ಚೀಫ್ ಮಿನಿಸ್ಟರ್ ಎಲ್ಲರಿಗೂ, ಅಡ್ಮಿನಿಸ್ಟ್ರೇಷನ್, ಗೌರ್ನಮೆಂಟ್ ಅಡ್ಮಿನಿಸ್ಟ್ರೇಷನ್ ಕೊಡೊ ಪತ್ರಿಯೊಬ್ಬ ಬ್ಯೂರೋಕ್ರಾಟ್ಸ್, ಐಎಎಸ್, ಕೆಎಎಸ್, ಐಪಿಎಸ್ ಎಲ್ರಿಗೂ ಸಂಬಳ ಕೊಡೋದು ನೀವೇ…! ನಿಮ್ಮ ಟ್ಯಾಕ್ಸ್ ಮನಿ ಅಂದ್ರೆ ಈ ತೆರಿಗೆ ಹಣ…!
ಹೌದು, ಅಂದ್ರೆ ಇವರೆಲ್ಲರೂ ನಮಗೋಸ್ಕರ ಕೆಲಸ ಮಾಡೋಕೆ ಇರುವಂತಹ ಎಂಪ್ಲಾಯಿಸ್, ವರ್ಕರ್ಸ್. ಹೌದು, ಕಾರ್ಮಿಕರು. ಆದ್ರೆ, ಈಗ ಆಗ್ತಿರೋದು ಮಾತ್ರ ವಿಪರ್ಯಾಸ…!
ಪ್ರಜಾಪ್ರಭುತ್ವದಲ್ಲಿ ಈ ಸತ್ಯ ನಿಮಗೆ ಕಾಣಿಸ್ದೇ ಇರುವಂತಹ ಪರಿಸ್ಥಿತಿಗೆ ತಂದಿರೋದಕ್ಕೆ ಕಾರಣನೂ ನಾವೇ, ಬಲಿಪಶುಗಳೂ ನಾವೇ…! ಹೇಗೆ ಅಂತೀರಾ..? ಈ ಲಕ್ಷಾಂತರ ಕೋಟಿ ಸಂಪಾದನೆ ಮಾಡಿ ಅದನ್ನು ನಮಗೆ, ನಮ್ ನೀಡ್ಸ್‍ಗೆ, ಸಮಾಜದ ಅನಿವಾರ್ಯತೆಗಳಿಗೆ ವಾಪಸ್ಸು ಕೊಡೋದಕ್ಕೆ ಸೆಲೆಕ್ಟ್ ಮಾಡಿ, ಎಲೆಕ್ಟ್ ಮಾಡ್ತಿರುವಂತಹ ನಾಯಕರ ಅರ್ಹತೆಯನ್ನು ನಾವು ಜಾತಿ, ಮತ, ದುಡ್ಡು, ಹೆಸರು ಇದರಿಂದ ಅಳೆದು ಅಂತವರನ್ನ ಇಂಥಾ ಒಂದ್ ದೊಡ್ಡ ಸ್ಥಳಕ್ಕೆ, ದೊಡ್ಡ ಕೆಲಸಕ್ಕೆ ಅಂದ್ರೆ ಎಂಎಲ್‍ಎ, ಎಂಪಿ, ಮಿನಿಸ್ಟರ್‍ಗಳನ್ನು ಆಯ್ಕೆ ಮಾಡಿ ಕಳುಹಿಸ್ತೀವಿ. ನಮ್ ಮನೇಲಿ 5ಸಾವಿರ ರೂಪಾಯಿ ಕೊಟ್ಟು ಕೆಲಸಕ್ಕೆ ಇಟ್ಕೊಳ್ಳೋ ಜನಗಳನ್ನೇ ನಾವು ತಳ-ಬುಡ ಎಲ್ಲಾ ಚೆಕ್ ಮಾಡಿ, ಟೆಸ್ಟ್ ಮಾಡಿ ಇಟ್ಕೊತ್ತೀವಿ. ಅಂತದ್ರಲ್ಲಿ ನಮ್ಮ ಲಕ್ಷಾಂತರ ಕೋಟಿ ದುಡ್ಡನ್ನು ನಮಗೆ ಸೂಕ್ತ ರೀತಿಯಲಿ ಹಿಂತಿರಿಗಿಸುವಂತಹ ವ್ಯಕ್ತಿಗಳನ್ನು, ಅಂದ್ರೆ ವರ್ಕರ್ಸ್ನ, ಎಂಪ್ಲಾಯ್ಸ್‍ನ ನಾವು ಯಾವುದಾದ್ರು ಸಿಲ್ಲಿ ಕಾರಣಕ್ಕೆ, ಎಮೋಶನಲ್ ಆಗಿ, ಜಾತಿ, ಮತ, ಅವನೊಬ್ಬ ದೊಡ್ ವ್ಯಕ್ತಿ, ದುಡ್ ಇರೋನು, ಅವನ ಹಿಂದೆ ತುಂಬಾ ಜನಗಳಿದ್ದಾರೆ, ತುಂಬಾ ಫೇಮಸ್ ವ್ಯಕ್ತಿ ಅಂತ ಎಲೆಕ್ಟ್ ಮಾಡ್ತೀವಿ…!
ನಾವು ಮಾಡ್ತಿದ್ದಿವೋ ಅಥವಾ ಅಂತ ಪರಿಸ್ಥಿತಿಯನ್ನು ಕ್ರಿಯೇಟ್ ಮಾಡಿ, ನಮ್ ಕೈಲೀ ಇವರುಗಳೆಲ್ಲ ಮಾಡಿಸ್ತಿದ್ದಾರೋ ಅರ್ಥ ಆಗ್ತಿಲ್ಲ. ಏನ್ ಮಾಡೋದು ಇಲ್ಲಿ ಇರೋರೆಲ್ಲಾ ಇಂತವರೇ…! ನಮಗೆ ಬೇರೆ ಆಪ್ಷನ್ ಇಲ್ಲ, ಚಾಯ್ಸ್ ಇಲ್ಲ…! ಇರೋ ಮೂರರಲ್ಲಿ ಇವ್ರು ಸ್ವಲ್ಪ ಬೆಟರ್ ಅನ್ಕೊಂಡು ಎಲೆಕ್ಟ್ ಮಾಡ್ತೀವಿ. ಇದು ನಿಮಗೆ ಮಾತ್ರವಲ್ಲ. ನನಗನಿಸಿರೋದು ಇದೇನೇ..? ಹಾಗಾದ್ರೆ ಇದಕ್ಕೆ ಬೇರೆ ದಾರೀನೇ ಇಲ್ವಾ..?
ದೊಡ್ಡವರೊಬ್ಬರು ಹೇಳಿದ್ದಾರೆ, ಆಶಾವಾದಿಗಳಾಗಿದ್ರೆ ನೂರ್ ಐಡಿಯಾಗಳನ್ನು ಕೊಡ್ತೀನಿ ನಾನು. ಬಟ್, ನಿರಾಶವಾದಿಗಳಾಗಿದ್ರೆ ನನ್ನತ್ರ ಯಾವ್ ಐಡಿಯಾನೂ ಇಲ್ಲ ಅಂತ. ಆ ಥರ ಆಶಾವಾದಿಗಳಿಗೆ ನನ್ನತ್ರ ಒಂದ್ ಐಡಿಯಾ ಇದೆ ಕೇಳಿ. ಛೇ, ಛೇ ಇದು ನನ್ ಐಡಿಯಾ ಅಲ್ಲ. ಸತ್ಯ, ಎಲ್ಲರಿಗೂ ಗೊತ್ತಿರೋದೇ…! ಅದನ್ನು ನಾನ್ ಹೇಳ್ತಾ ಇದ್ದೀನಷ್ಟೇ…! ಕೇಳಿ…
ಚಿಕ್ಕಮಕ್ಕಳಿಗೆ ಸ್ಕೂಲ್‍ಗೆ ಸೇರಿಸೋದಕ್ಕೆ ಇಂಟರ್ ವ್ಯೂ ಅಂತಾರೆ..! ಇನ್ನು ಲಕ್ಷಾಂತರ ಕೋಟಿ ದುಡ್ಡನ್ನು ಮ್ಯಾನೇಜ್ ಮಾಡಿ, ರಾಜ್ಯದ ಪ್ರಾಬ್ಲಂ ಸಾಲೋ ಮಾಡುವಂತ ಒಂದು ದೊಡ್ಡ ಜಾಬ್‍ಗೆ, ಹುದ್ದೆಗೆ ಒಂದ್ ಸಣ್ ಟೆಸ್ಟ್ ಇಲ್ವಾ…? ಎಕ್ಸಾಮ್ ಇಲ್ವಾ..? ಹೌದು, ಇರಲೇ ಬೇಕಲ್ವಾ..? ಆ ಎಕ್ಸಾಮ್ ಯಾವ್ ಥರ..? ಗ್ರಾಜುಯೇಟಾ..? ಮಾಸ್ಟರ್ಸಾ..? ಪಿಎಚ್‍ಡಿನಾ..? ಇಲ್ಲ, ಇಲ್ಲ…! ಆ ಥರ ಇರ್ಲೇಬೇಕು ಅಂತಿದ್ರೆ ಕಾನ್ಸಿಟ್ಯೂಶನ್ ಬರೆದಂತಹ ದೊಡ್ ದೊಡ್ಡವರು ಅದರ ಬಗ್ಗೆ ಯೋಚ್ನೆ ಮಾಡ್ತಿದ್ರು.
ಹೌದು, ಆಡಳಿತ ನಡೆಸೋಕೆ ಐಎಎಸ್, ಐಪಿಎಸ್ ಆಫೀಸರ್‍ಗಳಿಗೆ ಆ ರೀತಿ ಕ್ವಾಲಿಫಿಕೇಶನ್‍ಗಳು ಬೇಕು. ಎಂಎಲ್‍ಎ, ಎಂಪಿ, ಮಿನಿಸ್ಟರ್‍ಗಳಿಗೆ ಏತಕ್ಕೆ…? ಅವರು ಜನಗಳನ್ನು ರೆಪ್ರಸೆಂಟ್ ಮಾಡೋದ್…! ಅಂದ್ರೆ, ಜನಪ್ರತಿನಿಧಿಗಳು. ಅವರಿಗೆ ಯಾವ ಕ್ವಾಲಿಫಿಕೇಶನ್ ಕೂಡ ಇರಬೇಕಾಗಿಲ್ಲ. ಕರೆಕ್ಟು…ಆದ್ರೆ, ಒಂದು ಕ್ಷೇತ್ರದಲ್ಲಿ ಎಂಎಲ್‍ಎ, ಕಾರ್ಪೋರೇಟರ್ ಆಗಲು ನಿಲ್ಲುವಂತಹ ಅಭ್ಯರ್ಥಿಗೆ ಆ ಏರಿಯಾದಲ್ಲಿ ಏನ್ ಏನ್ ಸಮಸ್ಯೆಗಳಿವೆ. ಅದಕ್ಕೆ ತಾನೇನು ಪರಿಹಾರ ಕೊಡಬಹುದು ಎಂಬ ಸಾಮಾನ್ಯ ಕಲ್ಪನೆ ಆದ್ರೂ ಇರಬೇಕಲ್ವಾ..? ಒಂದ್ ಐಡಿಯಾನಾದ್ರು ಇರಬೇಕಲ್ವಾ..? ಹಾಗಾದ್ರೆ ಅಭ್ಯರ್ಥಿಗಳನ್ನು ಸೆಲೆಕ್ಟ್ ಮಾಡೋಕೆ ಮುಂಚೆ ಸಣ್ಣದೊಂದು ಎಕ್ಸಾಮ್, ಪರೀಕ್ಷೆ ನಡೀಲೇ ಬೇಕು…!
ಹೌದು, ಈ ರೀತಿಯ ಐಡಿಯಾಗಳಿರೋ ಜನ ಮುಂದೆ ಬರಬೇಕು. ಒಂದೊಂದು ಚುನಾವಣಾ ಕ್ಷೇತ್ರದಿಂದಲೂ ಕೂಡ 5-10 ಜನ ಆ ಇಡೀ ಕ್ಷೇತ್ರನ ಓಡಾಡಿ, ಅಲ್ಲಿರೋ ಪ್ರಾಬ್ಲಂಗಳನ್ನು ತಿಳ್ಕೊಂಡು, ಅವರೇ ಒಂದ್ ಎಕ್ಸಾಮ್ ಥರ ಬರೆದು, ಅದನ್ನು ಪಾರ್ಟಿಲಿರೋ ಮೈನ್ ಲೀಡರ್ಸ್ ನೋಡ್ಬೇಕು…! ಈ ಥರ ಬರೋ ಸಾವಿರಾರು ಅಪ್ಲಿಕೇಶನ್‍ನ ಸ್ಟಡಿ ಮಾಡಿ, ಅದರಲ್ಲಿ ಯಾರ್ ಬೆಸ್ಟ್ ಅಂತ ಡಿಸೈಡ್ ಮಾಡಿ, ಅಂತವರನ್ನು ಒಂದ್ ಒಂದು ಕ್ಷೇತ್ರದ ಅಭ್ಯರ್ಥಿ ಅಂತ ಅನೌನ್ಸ್ ಮಾಡಿ, ಅವರಿಗೆ ಟಿಕೇಟ್ ಕೊಡಬೇಕು. ಅವರು ಎಕ್ಸಾಮ್ ಬರೆದು ಪಾಸಾಗಿರುವಂತಹ ಪೇಪರನ್ನೇ ಜನಗಳ ಮುಂದಿಡಬೇಕು. ಅಂದ್ರೆ ಈ ಏರಿಯಾದಲ್ಲಿ ಈ ಪ್ರಾಬ್ಲಂಗಳಿವೆ. ಇದಕ್ಕೆ ನನ್ನದೇ ಆದಂತಹ ಪರಿಹಾರ ಈ ರೀತಿ ಇದೆ. ಅದು ಇಷ್ಟು ದಿನದಲ್ಲಿ ನಾನ್ ಪರಿಹಾರ ಮಾಡ್ತೀನಿ ಅನ್ನೋದನ್ನ ಜನಗಳಿಗೆ ಮುಟ್ಟಿಸಬೇಕು. ಈ ಅರ್ಹತೆ ನೋಡಿ, ಜನಗಳು ಅವರಿಗೆ ವೋಟ್ ಹಾಕ್ಬೇಕು ಅಲ್ವಾ..? ಎಲೆಕ್ಷನ್ ಗೆದ್ದ ಮೇಲೆ ಅವರಿಗೆ ಲಕ್ಷಾಂತರ ರೂಪಾಯಿ ಸಂಬಳ ಕೊಡ್ತೀವಿ. ಆದ್ದರಿಂದ ಅವರು 9 ಟು 6 (9ರಿಂದ 6ಗಂಟೆ) ಆ ಏರಿಯಾದಲ್ಲಿ ಓಡಾಡಿ, ಕೆಲಸ ಮಾಡ್ಬೇಕು. ಆ ಕೆಲಸದ ಪ್ರತಿಯೊಂದು ವೀಡಿಯೋ, ಫೋಟೋಗ್ರಾಫ್ ತೆಗೆದು ಅದನ್ನು ವೆಬ್ ಸೈಟ್‍ನಲ್ಲಿ ಹಾಕಿ, ಫೇಸ್‍ಬುಕ್ ಲಿ ಹಾಕಿ ಜನಗಳಿಗೆ ಅವಾಗವಾಗ ತಲುಪಿಸುತ್ತಾನೇ ಇರ್ಬೇಕು.
ಇದನ್ನು ಕೇಳ್ ನೋಡಿ, ಏನಂತಾರೆ…? ಜನಗಳಿಗೆ ನಾವೆಂಗೆ ತಲುಪಿಸೋಕೆ ಆಗುತ್ತೆ…? ಜನನೇ ಬಂದು ಆರ್‍ಟಿಐಗೆ ಹಾಕ್ಕೊಂಡು ತಿಳ್ಕೊಳ್ಳಿ. ಜನನೇ ಅಲ್ ಹೋಗಿ ತಿಳ್ಕೊಳ್ಳಿ, ಇಲ್ಲೋಗ್ ತಿಳ್ಕೊಳ್ಳಿ ಅನ್ನೋದಲ್ಲ…! ನಮಗೆಲ್ಲಾ ಬೇರೆ ಕೆಲಸಗಳಿವೆ. ಅದು ನಮ್ ಕೆಲಸ ಅಲ್ಲ. ನಿಮಗೆ ಆ ಕೆಲಸ ಕೊಟ್ಟಿದ್ದೀವಿ. ಇದು ನಿಮ್ ಕೆಲಸ. ನಿಮಗೆ ಅದಕ್ಕೋಸ್ಕಾರ ಸಂಬಳ ಕೊಡ್ತಿದ್ದೇವೆ. ನಾವು ನಿಮ್ಮತ್ರ ಬರಲ್ಲ. ನೀವೇ ನಮ್ಮತ್ರ ಬಂದು, ಯು ಆರ್ ಅಕೌಂಟಬಲ್, ನೀವು ಆ ಕೆಲಸ ಮಾಡಬೇಕು. ನಮ್ಮ ದುಡ್ಡನ್ನು ಎಲ್ಲಿ ಖರ್ಚು ಮಾಡ್ತಿದ್ದೀರಿ..? ಹೇಗೆ ಖರ್ಚು ಮಾಡ್ತಿದ್ದೀರಿ..? ಎಷ್ಟು ದಿನದಲ್ಲಿ ಈ ಎಲ್ಲಾ ಸಮಸ್ಯೆಗಳು ಪರಿಹಾರ ಆಗುತ್ತೆ ಅನ್ನೋದು ನೀವು ನಮ್ಗೆ ವರದಿ ಕೊಡಬೇಕು. ಅದು ಕಷ್ಟವಾಗಿರಬಹುದು..! ಎಷ್ಟ್ ಜನ ಬರ್ತಾರೋ, ಎಷ್ಟು ಜನ ನೋಡ್ತಾರೋ ಅದು ಮುಖ್ಯವಲ್ಲ. ನೀವು ಟಿವಿಲಿ ಕೂತ್ಕೊಂಡು, ಅಟ್ಲೀಸ್ಟ್ 15ದಿನ ತಿಂಗಳಿಗೆ ಒಂದ್ಸತಿ. ಲೈವ್ ಶೋ ಮಾಡಿ ಪ್ರತಿಯೊಬ್ಬ ಜನರ ಫೋನ್ ಕಾಂಟ್ಯಾಕ್ಟ್ ತಗೊಂಡು ವಿತ್ ವೀಡಿಯೋ, ಫೋಟೋಗ್ರಾಫ್ ತೋರಿಸಬೇಕು ನೀವ್ ಮಾಡಿರೋ ಕೆಲಸ ಏನು ಅಂತ. ಇದನ್ನು ಪ್ರಜಾಪ್ರಭುತ್ವ ಅನ್ನೋದು.
ಈ ಥರ ಕೆಲಸ ಮಾಡೋ ಎಲ್ಲಾ ಎಂಎಲ್‍ಎಗಳು ವಿತ್ ಆಡಿಯೋ ವಿಶಲ್ ವಿಧಾನಸೌದಕ್ಕೆ ಕನೆಕ್ಟ್ ಆಗಿರಬೇಕು…! ಟಿವಿ ಚಾನಲ್ ಇರುತ್ತಲ್ಲಾ..? ಆ ಥರ. ನೀವೇ ಇಮೇಜಿನ್ ಮಾಡ್ಕೊಂಡು ನೋಡಿ. ಹೀಗ್ ನೋಡ್ತೀರ ನೀವು, ರಾಜ್ಯಸಭಾ, ಲೋಕಸಭಾ ಅಂತ ಟಿವಿಲಿ ನೋಡ್ತಾ ಇರ್ತೀರ…ಅಲ್ಲಿ ಯಾರೋ ಒಬ್ಬರು ಪೇಪರ್ ಇಟ್ಕೊಂಡು ಓದ್ತಾ ಇರ್ತಾರೆ. ಕ್ವಶನ್ ಅಂಡ್ ಆನ್ಸರ್ ಅವರ್ ಅಂತಾರೆ, ಸೆಷನ್ ಅಂತಾರೆ, ಅಲ್ಲಿ ಏನೋ ಒಂದ್ ಹೇಳ್ತಿರ್ತಾರೆ, ಯಾರೋ ಕೂಗ್ತಾ ಇರ್ತಾರೆ. ನೀವು ಆಲ್ ರೆಡಿ ಕೇಳಿರ್ತೀರ…ಮೊಬೈಲ್ ಲಿ ಏನೋ ನೋಡ್ಕೊಂಡು ಕೂತಿರ್ತಾರೆ. ಯಾರಿಗೂ ಏನೂ ಇಂಟ್ರೆಸ್ಟ್ ಇರಲ್ಲ, ನಿದ್ರೆ ಹೊಡೀತಾ ಇರ್ತಾರೆ ಅಂತ. ಇದಾ ನಮಗೆ ಬೇಕಾಗಿರೋದು..?
ಒಂದು ಟಿವಿ ಚಾನಲ್ ಅವರು ಆಡಿಯೋ, ವಿಶಲ್ ಲಿ ಇಡೀ ಕರ್ನಾಟಕದ ರಾಜ್ಯಕ್ಕೆ ಕನೆಕ್ಟ್ ಆಗಿರ್ತಾರೆ. ಅವರ ರಿಪೋರ್ಟರ್‍ಗಳು ಎಲ್ಲಂದಿರಲ್ಲಿ, ಯಾವಾಗ ಬೇಕಂದರಲ್ಲಿ ಕನೆಕ್ಟ್ ಮಾಡಿ, ಆ ಹಾಸ್ಪಿಟಲ್ ಲಿ ಏನ್ ಆಗ್ತಾ ಇದೆ ರೀ… ಈ ಏರಿಯಾದಲ್ಲಿ ಏನ್ ಆಗ್ತಾ ಇದೆ ರೀ ಅಂತ ಎಡಿಟರ್ ಕೂತ್ಕೊಂಡು ಕೇಳಿದಾಗ ನಾವೇ ನೋಡಿದ್ದೀವಿ. ಅದರ ಬಗ್ಗೆ ರಿಪೋರ್ಟರ್‍ಗಳು ಮಾತಾಡೋದನ್ನು ನೋಡಿದ್ದೀವಿ. ಹಾಗಾದ್ರೆ ವಿಧಾನ ಸೌದ ಯಾಕ್ ಹಾಗೆ ಆಗಬಾರದು..? 225 ಕಾನ್ಸ್ಟಿವೆನ್ಸಿ ಕೂಡ, ಕ್ಷೇತ್ರಗಳು ಪ್ರತಿಯೊಂದಕ್ಕೂ ದೊಡ್ಡ ಎಲ್‍ಇಡಿ ಡಿಸ್ಪ್ಲೇಗಳು ವಿಧಾನ ಸೌದದಲ್ಲಿ ಇತ್ತು ಅನ್ಕೊಳ್ಳಿ. ಅಲ್ಲಿ ಮಿನಿಸ್ಟರ್‍ಗಳು ಕೂತಿದ್ರು ಅನ್ಕೊಳ್ಳಿ, ಎಂಎಲ್‍ಎಗಳು ರಿಪೋರ್ಟರ್‍ಗಳ ಥರ ಕೆಲಸ ಮಾಡ್ತಿದ್ರು ಅನ್ಕೊಳ್ಳಿ. ಮಿನಿಸ್ಟ್ರುಗಳು ನೀವು ಯಾವ್ ಏರಿಯಾದಲ್ಲಿ ಬೇಕಾದ್ರು ಕನೆಕ್ಟ್ ಮಾಡಿ ಅಲ್ಲಿ ಏನ್ ನಡೀತಾ ಇದೆ ಅನ್ನೋದು ಡೆರೆಕ್ಟ್ ಆಗಿ ವಿತ್‍ವಿಶಲ್ ರಿಪೋರ್ಟ್ ತಗೋಬಹುದು…! ಅದನ್ನ ಜನ ನೋಡ್ಬಹುದು…! ಜನನ್ನ ಡೆರೆಕ್ಟ್ ಲೈವಲಿ ತಗೊಂಡು ಡಿಸ್ಕಸ್ ಮಾಡಬಹುದು. ಪ್ರತಿಯೊಂದು ಸಮಸ್ಯೆಗೂ ಪರಿಹಾರ ಕಂಡು ಹಿಡಿಯಬಹುದು, ಮಾಡಬಹುದು, ಎಲ್ಲವನ್ನೂ ಮಾಡಬಹುದು. ನಾವ್ ಎಕ್ಸಾಮ್ ನಡೆಸಿ ಸೆಲೆಕ್ಟ್ ಆದಂತಹ ಎಂಎಲ್‍ಎಗಳಲ್ಲಿ ಅತ್ಯುತ್ತಮವಾದವರು, ತುಂಬಾ ಬ್ರಿಲಿಯಂಟ್ಸ್, ಇಡೀ ರಾಜ್ಯದ ಅಗ್ರಿಕಲ್ಚರ್, ವಾಟರ್, ಎಲೆಕ್ಟ್ರಿಸಿಟಿ, ಈ ರೀತಿ ಒಟ್ಟಾರೆಯಾಗಿ ರಾಜ್ಯಕ್ಕೆ ಸಂಬಂಧಪಟ್ಟ ಕೆಲವೊಂದು ಪ್ರಾಬ್ಲಂಗಳಿಗೆ ಪರಿಹಾರ ಕೊಡುವಂತಹವರು. ಅದರ ಬಗ್ಗೆ ತಿಳ್ಕೊಂಡಿರೋರು, ಬೇರೆ ಬೇರೆ ದೇಶಗಳಲ್ಲಿ ಆ ಪ್ರಾಬ್ಲಂಗೆ ಏನ್ ಮಾಡ್ತಿದ್ದಾರೆ. ಅಂತದನ್ನು ನಾವು ಯಾವುದನ್ನು ಅಡಪ್ಟ್ ಮಾಡ್ಕೊಳ್ಳಬಹುದು. ಯಾವುದರಿಂದ ಈ ಪ್ರಾಬ್ಲಂಗಳಿಗೆ ಪರಿಹಾರ ಸಿಗುತ್ತೆ ಅಂತ ಗೊತ್ತಿರುವಂತಹ ಮೇದಾವಿಗಳನ್ನು ನಾವು ಮಿನಿಸ್ಟ್ರು ಮಾಡ್ಬೇಕು.
ಆದ್ರೆ, ಇಲ್ಲಿ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾನೆ. ಅವರಿಗೆ ಏನಾದ್ರು ಪರಿಹಾರ ಕೊಡಿ, ನೀರಿನ ಪ್ರಾಬ್ಲಂ ಇದೆ ಬರ ಪರಿಹಾರ ಕೊಡಿ. ಕಾವೇರಿ, ಕಳಸ-ಬಂಡೂರಿ ಎಲ್ಲಾ ನದಿಗಳ ಪ್ರಾಬ್ಲಂ ಇದೆ, ಅದು ಅಂತರರಾಜ್ಯ ಪ್ರಾಬ್ಲಂ, ಅದಕ್ಕೆ ಪ್ರೈಂ ಮಿನಿಸ್ಟರ್ ಬರಬೇಕು, ಕೋರ್ಟಲಿದೆ. ಬರೀ ಈ ಥರ ಸಮಸ್ಯೆ ಹೇಳೋರೇ ನಮ್ ಲೀಡರ್ಸ್. ಅಲ್ಲ, ಸಮಸ್ಯೆಗಳಿಗೆ ಪರಿಹಾರ ಕೊಡೋ ಅಂತವರು. ಕಾವೇರಿ ಸಮಸ್ಯೆ ಇರಬಹುದು, ನೀರಿನ ಸಮಸ್ಯೆ ಇರಬಹುದು. ಯಾವತ್ತೂ ಇರಬಾರದಲ್ವಾ…? ಗಲಾಟೆ ಮಾಡ್ಕೊಂಡು, ಒಬ್ಬರಿಗೊಬ್ಬರು ಹೊಡ್ಕೊಂಡು, ನಾಳೆ ನಮ್ ಮಕ್ಕಳಿಗೇ ಅಲ್ವಾ ತೊಂದರೆ..?
ಇಷ್ಟೊಂದು ಲಕ್ಷಾಂತರ ಕೋಟಿ ನಮ್ ಬಜೆಟ್ ಇರಬೇಕಾದ್ರೆ, ಇದಕ್ಕೊಂದು ಶಾಶ್ವತ ಪರಿಹಾರ ಕಂಡುಹಿಡಿಯಲು ಸಾಧ್ಯನೇ ಇಲ್ವಾ..? ಇದಕ್ಕೆ ನಮಗೆ ಅಂತ ಅಭ್ಯರ್ಥಿಗಳು ಬೇಕು.
ಇದೆಲ್ಲಾ ಸರೀನೇ.. ಎಕ್ಸಾಮ್ ಮಾಡ್ತೀವಿ, ಅಭ್ಯರ್ಥಿಗಳನ್ನು ತಗೋತೀವಿ, ಅವರನ್ನು ನಿಮ್ಮ ಮುಂದೆ ಇಡ್ತೀವಿ. ಆದ್ರೂ ಅವರು ಯಾರಿಗೂ ಗೊತ್ತಿರಲ್ಲ. ಇವರನ್ನು ನಾವು ಜನಗಳಿಗೆ ತಲುಪಿಸೋದು ಹೇಗೆ..? ನಮಗೆ ದುಡ್ಡು ಬೇಕು…! ದೊಡ್ಡ ಮಟ್ಟದಲ್ಲಿ ಪ್ರಚಾರ ಮಾಡಬೇಕು. ಆ ಜಾತಿ, ಈ ಜಾತಿ ಅಂತ ಸುದ್ದಿ ಮಾಡ್ಬೇಕು. ಇಲ್ಲ ಧರ್ಮದ ಏನಾದ್ರು ಒಂದ್ ವಿಷಯ ಇಟ್ಕೊಳ್ಳಬೇಕು. ಇದೆಲ್ಲಾ ಮಾಡಿದ್ರೆ, ನಾನ್ ಹೇಳಿದ್ದೆಲ್ಲಾ ಮಾಡಕ್ಕಾಗುತ್ತಾ..? ಇಲ್ಲ.
ದುಡ್ಡು, ಜಾತಿ, ದೊಡ್ಡ ಪ್ರಚಾರ. ಇದೆಲ್ಲ ಇಲ್ಲದೆ ನಿಮ್ಮನ್ನು ಮುಟ್ಟೋಕೆ ಹೇಗೆ ಸಾಧ್ಯ..? ಇಲ್ಲೇ ನೋಡಿ ಇರೋದ್ ಪ್ರಾಬ್ಲಂ. ಸಲ್ಯೂಷನ್ನೂ ಇಲ್ಲೇ ಇದೆ. ಪ್ರಾಬ್ಲಮ್ಮೂ ಇಲ್ಲೇ ಇದೆ. ನಾವು ದುಡ್ಡಿಲ್ಲದೇ ಎಲೆಕ್ಷನ್ ಗೆಲ್ಲೋಕೆ ಆಗಲ್ಲ. ಅದಕ್ಕೇನು ಮಾಡೋದು? ದುಡ್ ಬೇಕು, ಪಾರ್ಟಿ ಫಂಡ್ ಬೇಕು. ಅದಕ್ಕೆ ಜನ ಬೇಕು ಎಲ್ಲರತ್ರ ದುಡ್ ಕಲೆಕ್ಟ್ ಮಾಡ್ತೀವಿ. ಲಕ್ಷಾಂತರ, ಕೋಟ್ಯಾಂತರ ರೂಪಾಯಿ ಪಾರ್ಟಿ ಫಂಡಲಿಡ್ತೀವಿ. ಆಗ್ ಏನಾಗುತ್ತೇ..? ನಮ್ ಜೊತೆ ಒಂದಿಷ್ಟು ಜನ ದುಡ್ಡು ಹಾಕಿರೋರು ಬರ್ತಾರೆ. ಇಲ್ಲಿಂದಲೇ ಸ್ಟಾರ್ಟ್ ಆಗುತ್ತೆ ಕರಪ್ಷನ್ನು..! ಆ ದುಡ್ಡು ಹಾಕಿರೋರಿಗೆ ನಾವು ಏನಾದ್ರು ಒಂದ್ ಮಾಡ್ಲೇಬೇಕು. ಅವರಿಗೆ ಕೆಲವೊಂದು ಸ್ಥಾನಗಳನ್ನು ಕೊಡ್ಲೇಬೇಕು. ದುಡ್ಡು ಹಾಕೋದೇ, ದುಡ್ಡು ತೆಗೆಯೋದಕ್ಕೋಸ್ಕರ. ಮತ್ತೆ ನಾವು ಅನ್ಕೊಂಡಿದ್ದ ಈ ಡ್ರೀಂ ಎಲ್ಲಾ ಏನಾಯ್ತು..?
ರೀ ಅಧಿಕಾರ ಸಿಗೋವರಿಗೂ ಏನ್ ಬೇಕಾದ್ರೂ ಮಾಡ್ಬಹುದ್ರೀ.. ಒಂದ್ಸತಿ ಅಧಿಕಾರ ಸಿಕ್ ಮೇಲೆ ನಾವೇನಾದ್ರು ಒಳ್ಳೇದ್ ಮಾಡಣ. ಮೊದಲು ನಾನೇ ಕರೆಪ್ಟ್ ಆಗಿ, ನಾನೇ ತಪ್ ಮಾಡಿ, ನಾನೇ ಅಸತ್ಯದ ಮಾರ್ಗದಲ್ಲಿ ನಡೆದು, ಮುಂದೆ ನಾನ್ ಸತ್ಯ ಹೆಂಗ್ ನಡೆಯಲಿಕ್ಕೆ ಸಾಧ್ಯ? ಮೊದಲ ಹೆಜ್ಜೆಯನ್ನೇ ನಾವು ಸತ್ಯದಲ್ಲಿ ನಡೆಯಬೇಕು. ಸತ್ಯದಿಂದಡಬೇಕು. ಅದಕ್ಕೆ ಪಾರ್ಟಿ ಫಂಡ್ ಅಂತ ಕಾನ್ಸೆಪ್ಟೇ ಇಲ್ದೇ ಇರುವಂತಹ, ದುಡ್ಡು ಅನ್ನೋದು ನಾನು 1ರೂಪಾಯಿ ಹಾಕಲ್ಲ, 1ರೂಪಾಯಿ ತೆಗೆಯಲ್ಲ..! ನಾವ್ ಇಲ್ಲೆಲ್ಲಾ ಕೆಲಸಗಾರರು. ಇದು ರಾಜಕೀಯ ಅಲ್ಲ. ಪ್ರಜಾಕೀಯ ಅನ್ನೋ ವ್ಯವಸ್ಥೆಯನ್ನು ನಾವ್ ಮಾಡಲೇ ಬೇಕಾಗುತ್ತೆ…!
ನಾನ್ ದುಡ್ಡು ಹಾಕದೇ ನಿಮ್ಮನ್ನು ತಲುಪಬೇಕು. ಹೇಗೆ? ಸಾಧ್ಯ ಇದೆ. ಈಗ ಟಿವಿ ಚಾನಲ್‍ಗಳಿದ್ದಾವೆ, ಸೋಶಿಯಲ್ ಮೀಡಿಯಾ ಇದೆ…! ಒಬ್ಬೊಬ್ಬರ ಕೈಯಲ್ಲಿರೋ ಮೊಬೈಲ್ ಈಗ ಒಂದೊಂದು ನ್ಯೂಸ್ ಪೇಪರ್ ಆಗಿದೆ. ಪ್ರತಿಯೊಂದು ವಿಷಯವನ್ನು ನೀವು ಮೊಬೈಲ್ ಲಿ ತಿಳ್ಕೊಳ್ಳಬಹುದು. ಇದೊಂದು ಪ್ರಯತ್ನ ಅಷ್ಟೇ. ಸತ್ಯ ಅನ್ನೋದು ಒಬ್ಬರಿಂದ ಒಬ್ಬರಿಗೆ ಮುಟ್ಟೇ ಮುಟ್ಟುತ್ತೆ…! ಒಬ್ರು ಇನ್ನೊಬ್ಬರಿಗೆ,ಇನ್ನೊಬ್ಬರು ಮತ್ತೊಬ್ಬರಿಗೆ ಹೇಳಿದ್ರೆ ಸಾಕು, ಇದು ಸಕ್ಸಸ್ ಆಗುತ್ತೆ. ದುಡ್ ಹಾಕದೇ ಬಂದವರು ದುಡ್ಡು ತೆಗೆಯಲ್ಲ ಅನ್ನೋದು ? ಇಷ್ಟೆಲ್ಲಾ ಆದ್ಮೇಲೂ ಅವರು ಹಾನೆಸ್ಟಾಗಿ ಕೆಲಸ ಮಾಡ್ತಾರ ಅನ್ನೋದು ನಿಮಗೆಂಗೆ ಡೌಟ್ ಇದೆಯಾ..? ನಗಗೂ ಹಾಗೇ ಇದೆ. ಇದಕ್ಕೇನು ಪರಿಹಾರ..? ಏನಂದ್ರೆ ಯಾರೋ ಒಬ್ರು ಇದರ ರೆಸ್ಪಾನ್ಸಿಬಿಲಿಟಿ ತಗೊಳ್ಲೇಬೇಕು…! ಅದು ನಾನೇ ತಗೊಳ್ತೀನಿ ಅನ್ಕೊಳ್ಳಿ…ನೀವು ನನ್ನ ನಂಬ್ ಬೇಕು. ನಿಮ್ಮನ್ನ ಹೇಗೆ ನಂಬೋದು ಅಂತ ಕೇಳಿದ್ರೆ ನನ್ನ ಎದೆ ಅಂತೂ ಸೀಳಿ ತೋರಿಸಕ್ಕಾಗಲ್ಲ…! ಅದಕ್ಕೆ ಮೊದಲ ಹೆಜ್ಜೆ ಇಡಬೇಕಾದ್ರೆ ಸತ್ಯವಾಗಿ ಇಟ್ಕೊಳ್ಳಣ.
ಇದು ಇಂಪಾಸಿಬಲ್ ಟಾಸ್ಕ್ ಆದ್ರೂ ಕೂಡ ಟ್ರೈ ಮಾಡಣ ಅಂದ್‍ಬಿಟ್ಟು, ದುಡ್ಡೇ ಇಲ್ದೆ ಇರೋ ಪಾರ್ಟಿ ಮಾಡಣ ಅನ್ಕೊಂಡಿದ್ದೀವಿ. ಇದೊಂದು ಚಾಲೆಂಜಿಂಗ್ ಟಾಸ್ಕೇ.. ಯಾಕಂದ್ರೆ ಒಂದ್ ಕಲ್ಪನೆ ಮಾಡ್ಕೊಳ್ಳಿ. ಎಲ್ಲರ ಅಬ್ಬರ ಪ್ರಚಾರದ ಮುಂದೆ, ಇನ್ನೊಬ್ರು ಯಾರದ್ದೋ ಪ್ರಚಾರನೇ ಇರಲ್ಲ…! ಬರೀ ನಿಮಗೆ ಸೋಶಿಯಲ್ ಮೀಡಿಯಾ ಇರಬಹುದು ಅಥವಾ ಕೆಲವೊಂದೆರಡು ಟಿವಿ ಚಾನಲ್ ಇಂಟರ್ ವ್ಯೂ ಬರಬಹುದು. ದೊಡ್ಡ ಬ್ಯಾನರ್‍ಗಳು, ಫ್ಲೆಕ್ಸ್‍ಗಳು, ಸಭೆ-ಸಮಾರಂಭಗಳಿರಲ್ಲ. ಜನಗಳ ದಂಡನ್ನೇ ಕಟ್ಕೊಂಡು ಅಲ್ಲಲ್ಲಿ ಟ್ರಾಫಿಕ್ ಜಾಮ್ ಮಾಡ್ಕೊಂಡು, ದೊಡ್ ದೊಡ್ ಪ್ರೊಸಿಷನ್‍ಗಳೂ ಮಾಡ್ತಿಲ್ಲ…! ಅವರು ಆ ಜಾತಿ- ಈ ಧರ್ಮ.. ಈ ರೀತಿ ಕೆಲಸ ಮಾಡಿಲ್ಲ ಅನ್ನೋದು ಯಾವುದೂ ಇರಲ್ಲ ಇಲ್ಲಿ. ಹಾಗಾದ್ರೆ ನಿಮ್ಮನ್ನು ಹೇಗೆ ತಲುಪೋದು ನಾವು? ಸತ್ಯ, ಟ್ರೂತ್…! ಸತ್ಯ ಮೇವ ಜಯತೆ ಎನ್ನೋ ಒಂದೇ ಒಂದು ನಂಬಿಕೇಲಿ ಹೆಜ್ಜೆ ಇಡ್ತಾ ಇದ್ದೀವಿ. ಗೆಲ್ಲಲೇಬೇಕು ಅನ್ನೋ ಅಹಂಕಾರ, ಸೋತ್ ಹೋಕ್ತೀವಿ ಅನ್ನೋ ಭಯ ಎರಡಿದ್ರೂ ಕೂಡ ಈ ಹೆಜ್ಜೆ ಇಡೋಕೆ ಸಾಧ್ಯನೇ ಇಲ್ಲ. ನಾನು ಕರಪ್ಟ್ ಆಗ್ಲೇಬೇಕು. ಭಗವದ್ಗೀತೆಯಲ್ಲಿ ಹೇಳಿದ್ದಾರಲ್ಲ? ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಶು ಕದಾಚನ. ನಿನ್ನ ಕೆಲಸ ನೀನು ಮಾಡು, ಫಲಾಫಲಗಳನ್ನು ಬಿಡು. ಇಲ್ಲಿ ನಾನ್ ಅನ್ಕೊಂಡಿರೋದು ಏನಂದ್ರೆ, ಇದು ನನ್ನ ಪ್ರಯತ್ನ ಅಷ್ಟೇ. ನಾನು ನಿಮ್ಮವನಾಗಿ, ನಾನೊಬ್ಬ ಪ್ರಜೆಯಾಗಿ ನನಗನಿಸಿದ್ದು ನಾನ್ ಹೇಳ್ತಾ ಇದ್ದೀನಿ. ಇರಲ್ಲೂ ಕೆಲವು ತಪ್ಪು-ಒಪ್ಪುಗಳಿರಬಹುದು. ಅದಕ್ಕೆ ನೀವೆಲ್ಲಾ ನನ್ ಜೊತೆ ಕೈಜೋಡಿಸಿದ್ರೆ ನಾವೆಲ್ಲಾ ಚರ್ಚೆ ಮಾಡಿ ಮುಂದುವರೆಯಬಹುದು…
ಹಾಗ್ ಅನ್ಕೂಡ್ಲೇ ನೀವು, 500-1000 ಜನ ಬಂದು ನನ್ ಮನೆ ಮುಂದೆ ನಿತ್ಕೊಳೋದ್ ಬೇಕಾಗಿಲ್ಲ. ನನಗೆ ಬೇಕಾಗಿರೋದು ನಿಮ್ಮ ಹಾನೆಸ್ಟ್ ಆನ್ಸರ್ ಪೇಪರ್. ನೀವು ನಿಮ್ಮ ಏರಿಯಾನ ಸ್ಟಡಿ ಮಾಡಿ, ಅದರಲ್ಲಿರೋ ಪ್ರಾಬ್ಲಂಗಳು, ಈ ರೀತಿ ಪರಿಹಾರ ಕೊಡಬಹುದೆನ್ನುವ ಪೇಪರ್ಸ್‍ನ ನೀವು ನನಗೆ ಕೊರಿಯರ್ ಮಾಡಬಹುದು ಅಥವಾ ನನ್ನ ಮೇಲ್ ಐಡಿಕೊಡ್ತೀವಿ ಅದಕ್ಕೆ ನೀವು ಮೇಲ್ ಮಾಡಬಹುದು.
ಹ್ಞಾಂ, ಇನ್ನೊಂದು ವಿಷ್ಯಾ..ಇದನ್ನು ನಾನೇ ಮಾಡಬೇಕೆಂದೇನೂ ಇಲ್ಲ. ಯಾರ್ ಬೇಕಾದ್ರು ಇದನ್ನು ಮಾಡಬಹುದು. ಈಗಿನ ರಾಜಕೀಯ ವ್ಯವಸ್ಥೆ ಕೂಡ ಪ್ರಜಾಕೀಯ ವ್ಯವಸ್ಥೆಗೆ ಈ ರೀತಿ ಮಾಡಬಹುದು..! ಇದೊಂದು ಮೆಸೇಜ್ ಅಷ್ಟೇ. ನಾನೂ ಒಬ್ಬ ಈ ದೇಶದ ಪ್ರಜೆಯಾಗಿ ನನ್ನ ಕಳಕಳಿಯ ಪ್ರಾರ್ಥನೆ ಅಷ್ಟೇ. ನೀವ್ ಯಾರಾದ್ರೂ ಮಾಡಿ, ಇಲ್ಲ ನಾನಂತೂ ಮಾಡೇ ಮಾಡ್ತೀನಿ. ನನ್ ಜೊತೆ ನೀವು ಬಂದೇ ಬರ್ತೀರ ಎಂಬ ನಂಬಿಕೆಯಿಂದ ಈ ಮೆಸೇಜ್‍ನ ನಿಮಗೆ ತಲುಪಿಸ್ತಾ ಇದ್ದೀನಿ.
–ಥ್ಯಾಂಕ್ಯೂ, ನಿಮ್ಮ ಉಪ್ಪಿ…