ಶಿವಮೊಗ್ಗ ಹಾಲು ಒಕ್ಕೂಟ (ಶಿಮುಲ್)ದ ನೂತನ ಅಧ್ಯಕ್ಷರಾಗಿ ವಿದ್ಯಾಧರ ಕಾರ್ಗಡಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.
ಹೊಸನಗರ ತಾಲೂಕಿನ ಕಾರ್ಗಡಿಯವರಾದ ವಿದ್ಯಾಧರ್ ಡಿಸೆಂಬರ್ 7ರಂದು ನಡೆದ ಶಿಮುಲ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ್ದರು. ಇವರನ್ನು ಹೊರತು ಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸಿರಲಿಲ್ಲ. ಚುನಾವಣೆ ವೇಳೆಯಲ್ಲಿ ಚುನಾಯಿತ 14 ನಿರ್ದೇಶಕರಲ್ಲಿ 12 ನಿರ್ದೇಶಕರು ಹಾಜರಿದ್ದರು. ಮಾಜಿ ನಿರ್ದೇಶಕ ಜಗದೀಶ್ ಬಣಕಾರ್ ಹಾಗೂ ಆರ್ ಹನುಮಪ್ಪ ಗೈರಾಗಿದ್ದರು.
ಜಗದೀಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಚುನಾವಣೆ ಇದಾಗಿತ್ತು. ಚುನಾವಣೆಗೆ ಅಧಿಸೂಚನೆ ಪ್ರಕಟಿಸಿದ ಬಳಿಕ ಜಗದೀಶ್ ಬಣಕಾರ್ ಅವರು ರಾಜೀನಾಮೆ ಪತ್ರದಲ್ಲಿನ ಸಹಿ ನನ್ನದಲ್ಲ ಎಂದು ವಾದಿಸಿ, ಚುನಾವಣೆಗೆ ತಡೆಯಾಜ್ಞೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಷ್ಟರಲ್ಲಾಗಲೇ ಚುನಾವಣೆ ಘೋಷಣೆಯಾಗಿದ್ದರಿಂದ ಈಗ ತಡೆಯಾಜ್ಞೆ ನೀಡಲು ಕೋರ್ಟ್ ಹೇಳಿತ್ತು. ತದನಂತರ ಬಣಕಾರ್ ದ್ವಿಸದಸ್ಯ ಪೀಠದ ಮೊರೆ ಹೋಗಿದ್ದರು. ಚುನಾವಣೆ ನಡೆದ ಬಳಿಕ ಫಲಿತಾಂಶ ಪ್ರಕಟಕ್ಕೆ ನ್ಯಾಯಾಲಯ ತಡೆಯಾಜ್ಞೆ ವಿಧಿಸಿತ್ತು. ಡಿಸೆಂಬರ್ 15ರಂದು ಪ್ರಕರಣವನ್ನು ವಿಚಾರಣೆಗೆತ್ತಿಕೊಂಡ ದ್ವಿಸದಸ್ಯ ಪೀಠ ಬಣಕಾರ್ ಸಲ್ಲಿಸಿದ್ದ ರಿಟ್ ಅಪೀಲು ಹಾಗೂ ಮಧ್ಯಂತರ ತಡೆಯಾಜ್ಞೆಯನ್ನು ವಜಾ ಮಾಡಿತ್ತು.
ನೂತನ ಅಧ್ಯಕ್ಷರಾಗಿ ಅಧಿಕಾರವಹಿಸಿಕೊಂಡಿರುವ ವಿದ್ಯಾಧರ್ ಅವರ ಆಡಳಿತಾವಧಿಯಲ್ಲಿ ಶಿಮುಲ್ ನಲ್ಲಿ ಖಂಡಿತಾ ಸಾಕಷ್ಟು ಧನಾತ್ಮಕ ಬದಲಾವಣೆಗಳನ್ನು ನಿರೀಕ್ಷಿಸಬಹುದು.