ಸರ್ಕಾರಿ ಸ್ವಾಮ್ಯದ ಬ್ಯಾಕ್ ಗಳಿಗೆ ಸಾವಿರಾರು ಕೋಟಿ ರೂ ವಂಚನೆ ಮಾಡಿ, ಲಂಡನ್ ಗೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ ಭಾರತಕ್ಕೆ ಮರಳುವ ಆಶಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ .
ವಂಚನೆ ಪ್ರಕರಣದಲ್ಲಿ ಗೆಲುವು ಸಿಗಬಹುದೆಂಬ ಕಾರಣದಿಂದ ಅವರು ಬರುತ್ತಿಲ್ಲ.ಬದಲಾಗಿ ಭಾರತ ಸರ್ಕಾರ ಇತ್ತೀಚೆಗೆ ಜಾರಿಗೆ ತಂದ ಕಠಿಣ ಕಾನೂನಿನಿಂದ ಅಷ್ಟೂ ಆಸ್ತಿ ಕೈತಪ್ಪುವ ಭೀತಿಯಿಂದ ಈ ತೀರ್ಮಾನಕ್ಕೆ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಮಲ್ಯ ಮಾಡಿದ್ದ ಸಾಲ ಮತ್ತು ಅದಕ್ಕೆ ಬಡ್ಡಿ ಸೇರಿ 9990 ಕೋಟಿ ರು. ತಲುಪಿದೆ. ಆದರೆ ಭಾರತದಲ್ಲಿ ಮಲ್ಯಗೆ ಸೇರಿದ ಅಂದಾಜು 12500 ಕೋಟಿ ರು.ಮೌಲ್ಯದ ಆಸ್ತಿ ಇದೆ. ಎಲ್ಲಾ ಆಸ್ತಿ ಜಪ್ತಿಯಾದರೆ ಸಾಲಕ್ಕಿಂತ ಹೆಚ್ಚಿನ ಪ್ರಮಾಣದ ಅಂದರೆ ಸುಮಾರು 2500 ಕೋಟಿ ರು. ಆಸ್ತಿ ತಪ್ಪುವ ಭೀತಿ ಮಲ್ಯಗೆ ಎದುರಾಗಿದೆ.
ಹೀಗಾಗಿಯೇ, ಭಾರತಕ್ಕೆ ಆಗಮಿಸಿ ಕಾನೂನು ಹೋರಾಟ ನಡೆಸಲು ತಾವು ಸಿದ್ಧ ಎಂಬ ಸುಳಿವನ್ನು ಭಾರತೀಯ ತನಿಖಾ ಸಂಸ್ಥೆಗಳಿಗೆ ಮಲ್ಯರಿಂದ ರವಾನೆಯಾಗಿದೆ ಯಂತೆ ..
ಮಲ್ಯಗೆ ಆ.27 ರಂದು ತನ್ನ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ.
ಈ ಕಾಯ್ದೆಯ ಅನ್ವಯ, ಒಂದು ವೇಳೆ ಯಾವುದೇ ಆರೋಪಿ ನ್ಯಾಯಾಲಯದ ಮುಂದೆ ಹಾಜರಾಗದೇ ಇದ್ದಲ್ಲಿ ಅಥವಾ ಸಮನ್ಸ್‌ಗೆ ಉತ್ತರಿಸದೇ ಹೋದಲ್ಲಿ ಅಂಥವರನ್ನು ದೇಶಭ್ರಷ್ಟ ಆರ್ಥಿಕ ಅಪರಾಧಿ ಎಂದು ಘೋಷಿಸಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಬಹುದಾಗಿದೆ. ಒಂದು ವೇಳೆ ತಾನೇನಾದರೂ ಮುಂಬೈ ಕೋರ್ಟ್ ಮುಂದೆ ಹಾಜರಾಗದೇ ಹೋದಲ್ಲಿ, 12500 ಕೋಟಿ ರು. ಮೌಲ್ಯದ ತನ್ನ ಅಷ್ಟೂ ಆಸ್ತಿ ಸರ್ಕಾರ ಮುಟ್ಟು ಗೋಲುಹಾಕಿಕೊಳ್ಳಲಿದೆ ಎಂಬ ಭೀತಿ ಮಲ್ಯರನ್ನು ಕಾಡತೊಡಗಿದೆ. ಹಾಗಾಗಿ ಭಾರತಕ್ಕೆ ಬರಲಿದ್ದಾರಂತೆ.