ಆಕೆ ನಮ್ಮೆಲ್ಲರ ಅಚ್ಚುಮೆಚ್ಚಿನ ಯಶೋದತ್ತೆ. ಹೆಸರಿಗೆ ಮಾತ್ರ ಅತ್ತೆ, ಆದ್ರೆ ನಮಗೆಲ್ಲಾ ಅವರು ಅಕ್ಕನೆಂದೇ ಪ್ರತೀತಿ. ಹುಟ್ಟಿನಿಂದಲೇ ತುಂಬು ಕುಟುಂಬದಲ್ಲಿ ಚಿಕ್ಕಪ್ಪ ಚಿಕ್ಕಮ್ಮ, ಅತ್ತೆ ಮಾವಂದಿರ ಒಡನಾಟದಲ್ಲಿ ಬೆಳೆದ ನಮಗೆ ಅವರೆಲ್ಲ ಇವರನ್ನು ಸಂಬೋಧಿಸುತ್ತಿದ್ದ ರೀತಿಯಲ್ಲೇ ನಾವು ಅಕ್ಕ ಯಶೋದಕ್ಕ ಎಂದೇ ಇವರನ್ನು ಸಂಬೋಧಿಸಲು ಕಲಿತದ್ದುಂಟು.
ಮನೆಯ ಪ್ರತೀ ಕೆಲಸಕ್ಕೂ ಅಕ್ಕ, ಇತ್ತ ಬಾ, ಅಕ್ಕ ಅದೆಲ್ಲಿ? ಅಕ್ಕ ಇದೆಲ್ಲಿ? ಎಂದು ಬೆಳಗ್ಗಿನ ಸುಪ್ರಭಾತದೊಂದಿಗೆ ಇವರನ್ನು ನಾವು ಕರೆಯಲು ಆರಂಭಿಸಿದರೆ ರಾತ್ರಿ ಮಲಗುವ ತನಕವೂ ನಮ್ಮೊಂದಿಗೆ ಇವರು ಹಾಜರಿರುತ್ತಿದ್ದರು.
ವ್ಯಾವಹಾರಿಕವಾಗಿ ತೀರಾ ಜಾಣ್ಮೆಯಲ್ಲದ ಈಕೆಯ ವೈಯಕ್ತಿಕ ಬದುಕು ದುರಂತ, ಆ ಬಳಿಕ ಅಪ್ಪ ಅಮ್ಮನ ಆಶ್ರಯದಲ್ಲಿ ಬಾಳುತ್ತಿದ್ದ ಈಕೆ ಮನೆಯವರೆಲ್ಲರ ಬೇಕು ಬೇಡಗಳಿಗೆ ಸ್ಪಂದಿಸುವತ್ತ ತನ್ನ ಜೀವನವನ್ನು ತೇಯ್ದರು.
ಈಕೆ ಕೇವಲ ಅಕ್ಕನಾಗಿರದೇ, ನಮಗೆ ಎರಡನೇಯ ಅಮ್ಮನಾಗಿ, ಮನೆಯವರಲ್ಲಿ ಸೇವೆ ಮಾಡುವ ಸೇವಕಿಯಂತೆ, ಮಕ್ಕಳ ಜೊತೆ ಮಗುವಾಗಿ ಮೊಮ್ಮಕ್ಕಳೊಂದಿಗೆ ಅಜ್ಜಿಯಾಗಿ, ಇಡೀ ಮನೆಯ ಅಚ್ಚುಮೆಚ್ಚಿನ ವ್ಯಕ್ತಿಯಾಗಿ ಬೆಳೆಯುತ್ತಲೇ ಹೋದರು. ಎಲ್ಲಿಯವರೆಗೆ ಅಂದರೆ ಇವರಿಲ್ಲದೆ ಮನೆಯಲ್ಲಿ ಏನು ನಡೆಯದು ಅನ್ನೋಷ್ಟರ ಮಟ್ಟಿಗೆ ನಮ್ಮ ಜೀವನದಲ್ಲಿ ಇವರು ಬೆರೆಯುತ್ತಾ ಹೋದರು.
ಈಕೆಯ ಕಂಠ ಮಾಧುರ್ಯ ಅದ್ಭುತ. ಅದೆಷ್ಟೋ ಬಾರಿ ನಿದ್ದೆ ಬಾರದಿದ್ದಾಗ ಅಕ್ಕ ಬಾನ ದಾರಿ ಹಾಡು ಹಾಡಕ್ಕ ಎಂದಾಗ ಈಕೆ ಹಾಡು ಆರಂಭಿಸುತ್ತಿದ್ದಂತೆ ನಿದ್ದೆ ಮಾಡುತ್ತಿದ್ದ ನಾವು. ಕರೆಂಟು ಹೋದಾಗ ಪಕ್ಕದ ರೂಮಿಗೆ ಹೋಗಲು ಹೆದರಿ ಅಕ್ಕ ಬಾ ಅಕ್ಕ ಎಂದಾಗ ನಮ್ಮ ಬೆನ್ನ ಹಿಂದೆ ಬಂದು ನಿಲ್ಲುತ್ತಿದ್ದ ಈಕೆ, ಅಮ್ಮನ ಮನೆಗೆ ಹೋದಾಗ ರಾತ್ರಿ ಕುಡಿಯಲು ಒತ್ತಾಯ ಮಾಡಿ ಹಾಲು ಕುಡಿಸುತ್ತಿದ್ದ ರೀತಿ ಈಗಲೂ ಮನದುಂಬಿ ಬರುತ್ತಿದೆ.
ನೀವೇನೇ ಅನ್ರಿ…ಆದ್ರೆ ಅದೇನೋ ಜಾದು ಇತ್ತು ಕಣ್ರಿ ನಮ್ಮಕ್ಕನಲ್ಲಿ, ಯಾಕೆಂದರೆ ವಿದ್ಯೆ ಬುದ್ದಿ ಹೆಚ್ಚಿಗೆ ಇರದ ವ್ಯಕ್ತಿ ಹಲವು ಕಡೆ ಜನರ ತಿರಸ್ಕಾರಕ್ಕೊಳಗಾಗೋದೇ ಹೆಚ್ಚು! ಆದ್ರೆ ಅಂತಹದ್ದರಲ್ಲಿ ನಮ್ಮನ್ನೆಲ್ಲಾ ಮೋಡಿ ಮಾಡಿ ನಮ್ಮ ಜೀವನದಲ್ಲಿ ಬೆಸೆದು ಹೋಗಿದ್ದ ಈಕೆ ನಿಜಕ್ಕೂ ಒಳ್ಳೆ ಮಾಯಗಾತಿ. ಯಾವುದಕ್ಕೂ ಈಕೆ ಆಸೆ ಪಟ್ಟಿಲ್ಲ ಕಣ್ರಿ ಆದ್ರೆ ಮೊನ್ನೆ ಊರಿಗೆ ಹೋಗಿದ್ದಾಗ ಅಮ್ಮಿ ಒಮ್ಮೆ ನನ್ನ ಫ್ಲೈಟ್ ನಲ್ಲಿ ಕರ್ಕೊಂಡು ಹೋಗ್ತೀಯಾ ಅಂದಾಗ ಮನ ತುಂಬಿ ಬಂದು ಅಕ್ಕ ಮುಂದಿನ ಸಾರಿ ಬಂದಾಗ ಖಂಡಿತ ಕರ್ಕೊಡು ಹೋಗ್ತೇನೆ ಎಂದು ಅಂದಿನ ಆಕೆಯ ಆಸೆಗೆ ತಣ್ಣಿರೆರೆಚಿದೆನೆ ಎಂಬ ವ್ಯಥೆ ನನಗೆ ಕಾಡುತ್ತಿದೆ. ಯಾಕೆಂದರೆ ಆ ಮುಂದಿನ ಸಾರಿ ಆಕೆಯ ಜೀವನದಲ್ಲಿ ಬರಲೇ ಇಲ್ಲ ಕಣ್ರಿ?? ನಿಜ! ಆರೋಗ್ಯಕರವಾಗಿ ಯಾವುದೇ ಕಾಯಿಲೆಯಿಲ್ಲದೆ ಇದ್ದ ಈಕೆಗೆ ಹಠಾತ್ತಾಗಿ ವಾರದ ಹಿಂದೆ ತೀವ್ರ ಉಸಿರಾಟದ ಸಮಸ್ಯೆ ಬಾಧಿಸಿತ್ತು, ಮುಂಬಯಿಯಲ್ಲಿ ಎಂದೂ ಕೇಳದ ಕುಪ್ಪುಳು ಹಕ್ಕಿಯ ಕೀ ಕೀ ಶಬ್ದ ಮುಂಜಾನೆ ನನ್ನ ಕಿವಿಗಪ್ಪಳಿಸುತ್ತಿದ್ದಂತೆ ಅತ್ತ ಕಡೆಯಿಂದ ಅಮ್ಮನ ಕರೆ, ನಡುವ ಕೈಗಳಿಂದ ಫೋನ್ ಕೈಗೆತ್ತಿದ ನನಗೆ ಆ ಕುಪ್ಪುಳಿನ ಕರ್ಕಶ ಶಬ್ದ ಕೇಳುತ್ತಲೇ ಇತ್ತು, ಅಕ್ಕ ನಮ್ಮನ್ನ ಬಿಟ್ಟು ಬಾರದ ಜಗತ್ತಿಗೆ ಹೊರಟೇ ಹೋದಳು ಕಣ್ರಿ! ಎಂತಹ ಹೃದಯ ವಿದ್ರಾವಕ ದಿನವದು..ಯಾರಿಗೂ ಬೇಡ ಇಂತಹ ಶಿಕ್ಷೆ..ಈಕೆಯನ್ನು ಪರೀಕ್ಷಿಸಿದ ಡಾಕ್ಟರ್ ಈಕೆಯ ಶ್ವಾಸ ಕೋಶ ಹರಿದ ಬಟ್ಟೆಯಂತಾಗಿದೆ, ಬದುಕುವ ಛಾನ್ಸಸ್ ಕಡಿಮೆ ಎಂದಿದ್ದರಂತೆ. ಅಂತು ಅಕ್ಕ ಈಗ ಕೇವಲ ಒಂದು ನೆನೆಪು ಮಾತ್ರ.
ಹೌದು ನಮ್ಮೆಲ್ಲರ ಅಕ್ಕ ನಮ್ಮನ್ನಗಲಿ ಆಗಲೇ ಮೂರು ದಿನಗಳೇ ಕಳೆದು ಹೋಯಿತು..ಈ ಮೂರು ದಿನಗಳಲ್ಲಿ ಆಕೆಯನ್ನು ನೆನೆಯದ ದಿನಗಳಿಲ್ಲ. ಇಂದೂ ಆಕೆಯ ನಗು ಮುಖ ನನ್ನ ಕಾಡುತ್ತಿದೆ, ಯಾಕೆಂದರೆ ಎಷ್ಟೇ ಕೆಲಸ ಮಾಡಲೀ ಎಂದೂ ಆಕೆ ಬೇಜಾರು ಪಟ್ಟಿದ್ದಿಲ್ಲ, ಅತಿ ಮೀರಿ ಹೇಳಿದ್ದಂದರೆ ಎಂತ ಮಾರಾಯ್ತಿ ನಿಂದೊಂದು ಉಪದ್ರ ಅಂತಷ್ಟೇ ಹೇಳಿದ್ದೋಂದು ಗೊತ್ತು, ಆಕೆಯ ಆ ಶಬ್ದಗಳು ನಮಗೆ ಮಜವನ್ನು ನೀಡುತ್ತಿತ್ತು. ಮತ್ತೊಮ್ಮೆ ಆಕೆಯ ಆ ಮಾತು ಕೇಳಲು ಆಕೆಯನ್ನು ಒತ್ತಾಯಿಸಿದಾಗ ಆಕೆ ನಕ್ಕು ಹೋಗಮ್ಮಿ ನಿಂಗೆ ಬೇರೆ ಕೆಲ್ಸ ಇಲ್ಲ ಎಂದು ಸುಮ್ಮನಾಗುತ್ತಿದ್ದಳು. ಆಕೆಯ ಕೋಪ ಮಂಗ ಮಾಯ.
ಆದ್ರೆ ಒಂದು ಮಾತು ನಿಜ ನೋಡಿ ಪ್ರತೀಯೊಬ್ಬ ವ್ಯಕ್ತಿಯಲ್ಲೂ ಒಬ್ಬ ಅಸಾಮಾನ್ಯ ವ್ಯಕ್ತಿ ಇದ್ದೇ ಇರ್ತಾನೆ. ಯಾವತ್ತೂ ಯಾರನ್ನೂ ಎಂದಿಗೂ ತಿರಸ್ಕಾರದಿಂದ ನೋಡ್ಬೇಡಿ, ಎಲ್ಲರನ್ನೂ ಪ್ರೀತಿಸಿ, ಗೌರವಿಸಿ, ಯಾಕೆಂದ್ರೆ ಇಂದು ತಿರಸ್ಕರಿಸಲ್ಪಟ್ಟವನೇ ನಾಳೆ ಪುರಸ್ಕರಿಸಲ್ಪಡುತ್ತಾನೆ…ಇನ್ನೊಮ್ಮೆ ಇಂತಹ ವ್ಯಕ್ತಿ ನಮ್ಮ ಜೀವನದಲ್ಲಿ ಬರುವುದು ಅಸಾಧ್ಯ. ದೇವರು ಆಕೆಯನ್ನು ನಮ್ಮಿಂದ ಕಿತ್ತುಕೊಂಡು ನಮಗೆಲ್ಲಾ ಅನ್ಯಾಯ ಮಾಡಿದನೇ ಅಥವಾ ಆಕೆಗೆ ಈ ದುರಂತ ಜನುಮದಿಂದ ಮುಕ್ತಿ ಕೊಟ್ಟು ಮುಂದಿನ ಅದ್ಭುತ ಜನುಮಕ್ಕೆ ಅವಕಾಶ ನೀಡಿದನೇ? ಫ್ರೆಂಡ್ಸ್ !!! ಏನೆಂದು ಸಂಭಾಳಿಸಲಿ ನನ್ನ ಈ ಮನಸ್ಸನ್ನ ನೀವೇ ಹೇಳಿ? ವೀ ಆಲ್ ಮಿಸ್ ಯೂ ಫಾರೆವರ್ ಅಕ್ಕ ಎಂದು ಕಂಬನಿ ದುಂಬಿ……
- ಸ್ವರ್ಣಲತ ಭಟ್
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ
25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?
ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?
ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!
ಆವಲಬೆಟ್ಟ ಫೇಮಸ್ ಸ್ಪಾಟ್‍ಗೆ ಭೇಟಿ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ಮೋದಿಗೆ ಪತ್ರ ಬರೆದು ಜಿಲ್ಲಾಡಳಿತಕ್ಕೆ ಶಾಕ್ ಕೊಟ್ಟ ನಮನ.! ಪತ್ರದಲ್ಲೇನಿತ್ತು.?