ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಭಾರತ ನಡೆಸಿದ ಏರ್ ಸರ್ಜಿಕಲ್ ಸ್ಟ್ರೈಕ್, ಅಂತಾರಾಷ್ಟ್ರೀಯ ಮಟ್ಟದ ಒತ್ತಡ ಹಾಗೂ ರಾಜತಾಂತ್ರಿಕ ಸೋಲಿನ ಸುಳಿಗೆ ಸಿಲುಕಿದ ಪಾಕಿಸ್ತಾನ ಮುಂಬೈ ದಾಳಿಯ ರೂವಾರಿ ಹಫೀಜ್ ಸಯೀದ್ ಗೆ ಸೇರಿದ ಉಗ್ರ ಸಂಘಟನೆಗಳ ನಿಷೇಧ ಹೇರಿದೆ.ಜಮಾತ್-ಉಲ್ -ದವಾ (ಜೆಯುಡಿ) ಹಾಗೂ ಫಲಾ -ಇ-ಇನ್ಸಾನಿಯತ್ ಫೌಂಡೇಷನ್ ಅನ್ನು ನಿಷೇಧಿಸಿದೆ.
ಈ ಹಿಂದೆ ಈ ಭಯೋತ್ಪಾದಕ ಸಂಘಟನೆಗಳನ್ನು ಎರಡು ವಾರಗಳ ಕಾಲ ನಿಗಾದಲ್ಲಿರಿಸಿದ್ದ ಪಾಕ್ ಈಗ ಪಾಕಿಸ್ತಾನ ಭಯೋತ್ಪಾದನಾ ನಿಗ್ರಹ ಕಾಯ್ದೆ 1997ರ ಅಡಿಯಲ್ಲಿ ರಾಷ್ಟ್ರೀಯ ಭಯೋತ್ಪಾದನೆ ನಿಗ್ರಹ ಪ್ರಾಧಿಕಾರ ಸಭೆ ನಡೆಸಿ ನಿಷೇಧ ಹೇರಲು ನಿರ್ಧಾರ ತೆಗೆದುಕೊಂಡಿದೆ.
ಹಫೀಜ್ ಸಯೀದ್ 2001ರ ಭಾರತದ ಸಂಸತ್ತಿನ ಮೇಲಿನ ದಾಳಿ, 2006 ರ ಮುಂಬೈ ಸರಣಿ ಬಾಂಬ್ ಸ್ಫೋಟ ಹಾಗೂ 2008 ರ ಮುಂಬೈ ದಾಳಿಯ ನೇತೃತ್ವ ವಹಿಸಿಕೊಂಡಿದ್ದ.
2008ರ ಮುಂಬೈ ತಾಜ್ ಹೋಟೆಲ್ ಅಟ್ಯಾಕ್ ಗೆ ಸಂಬಂಧಪಟ್ಟಂತೆ ಸಯೀದ್ ವಿರುದ್ಧ ಕ್ರಮಕ್ಕೆ ಭಾರತ ಒತ್ತಾಯಿಸಿತ್ತು. ಭಾರತದ ಮನವಿಗೆ ಸಾಕ್ಷ್ಯಗಳ ಕೊರತೆ ನೆಪ ನೀಡಿ ಪಾಕ್ ನಿರ್ಲಕ್ಷ್ಯ ತೋರುತ್ತಲೇ ಬಂದಿತ್ತು.
ಪಾಕಿಸ್ತಾನದ ಲಾಹೋರ್ ನಲ್ಲಿ ಹಫಿಜ್ ವಾಸವಿದ್ದಾನೆ. ಜಮ್ಮು-ಕಾಶ್ಮೀರದ ಯುವಕರನ್ನು ಭಾರತದ ವಿರುದ್ಧ ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹ ನೀಡ್ತಿದ್ದಾನೆ ಎಂದು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ ಐ ಎ) ತಿಳಿಸಿದೆ.
ಒಂದೆಡೆ ಈ ಎರಡು ಉಗ್ರ ಸಂಘಟನೆಗಳನ್ನು ನಿಷೇಧಿಸಿದ್ದರೆ , ಇನ್ನೊಂದೆಡೆ 44 ಉಗ್ರರನ್ನು ಬಂಧಿಸಿದೆ.
ಮೇಲ್ನೋಟಕ್ಕೆ ಪಾಕ್ ಈ ಕ್ರಮಗಳನ್ನು ಕೈಗೊಂಡಿದೆ ಅಷ್ಟೇ.ಜೈಷ್-ಎ-ಮೊಹಮ್ಮದ್ ಸಂಘಟನೆ ಮತ್ತು ಅದರ ನಾಯಕ ಮಸೂದ್ ಅಜರ್ ಕಥೆ ಏನು? ಪಾಕ್ ನಾಟಕವನ್ನು ಮುಂದುವರೆಸಿದ್ದು,ಜಾಗತಿಕ ಮಟ್ಟದಲ್ಲಿ ಇನ್ನೂ ಬಲವಾದ ಹೊಡೆತ ಆ ದೇಶಕ್ಕೆ ಬೀಳಲೇ ಬೇಕಿದೆ.ಉಗ್ರ ಸಂಘಟನೆಗಳನ್ನು ಬ್ಯಾನ್ ಮಾಡಿರುವ ಬಗ್ಗೆ ಮಾತಾಡಿರುವ ಸಚಿವ ಶೆಹರ್ಯಾರ್ ಖಾನ್ ಉಗ್ರರ ವಿರುದ್ಧ ಪಾಕ್ ನ ಹೋರಾಟದ ಒಂದು ಭಾಗ ಮಾತ್ರ ಇದು ಎಂದಿದ್ದಾರೆ.
ಅಂತಾರಾಷ್ಟ್ರೀಯ ಒತ್ತಡಕ್ಕೆ ಮಣಿದ ಪಾಕಿಸ್ತಾನದಿಂದ ಉಗ್ರ ಸಂಘಟನೆಗಳ ನಿಷೇಧ.!
Date: