ಭಾರತ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಪ್ರವಾಸಿ ಆಸ್ಟ್ರೇಲಿಯಾ ತಂಡಕ್ಕೆ ಆಘಾತ ಎದುರಾಗಿದ್ದು, ತಂಡದ ಸ್ಟಾರ್ ಆಲ್ರೌಂಡರ್ ನಿರ್ಣಾಯಕ ಏಕದಿನ ಪಂದ್ಯದಿಂದ ಹೊರಗುಳಿಯುವ ಸಾಧ್ಯತೆ ದಟ್ಟವಾಗ ತೊಡಗಿದೆ.
ಯಾರು ಆ ಕ್ರಿಕೆಟಿಗ ಎನ್ನುವ ಕುತೂಹಲಕ್ಕೆ ಇಲ್ಲಿದೆ ಉತ್ತರ. ಬಲಗೈ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿರುವ ಆಸ್ಟ್ರೇಲಿಯಾ ತಂಡದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್ ಭಾರತದ ವಿರುದ್ಧದ ಕೊನೆಯ ಹಾಗೂ ನಿರ್ಣಾಯಕ ಏಕದಿನ ಪಂದ್ಯದಿಂದ ಹೊರಬೀಳುವ ಸಾಧ್ಯತೆ ದಟ್ಟವಾಗಿದೆ. ಮೊಹಾಲಿ ನಡೆದ 4ನೇ ಏಕದಿನ ಪಂದ್ಯಕ್ಕೂ ಮುನ್ನ ಸ್ಟೋನಿಸ್ ಫಿಟ್ನೆಸ್ ಸಾಬೀತು ಪಡಿಸಲು ವಿಫಲರಾಗಿದ್ದರು, ಇದೀಗ 5ನೇ ಏಕದಿನ ಪಂದ್ಯದಿಂದಲೂ ಹೊರಗುಳಿಯುವ ಸಾಧ್ಯತೆಯಿದೆ ಎಂದು ತಂಡದ ಮೂಲಗಳು ತಿಳಿಸಿವೆ.
ರಾಂಚಿಯಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ 32 ರನ್’ಗಳ ಭರ್ಜರಿ ಜಯ ದಾಖಲಿಸಿತ್ತು. ಈ ಪಂದ್ಯದಲ್ಲಿ ಫೀಲ್ಡಿಂಗ್ ಮಾಡುವ ವೇಳೆ ಸ್ಟೋನಿಸ್ ಬಲಗೈ ಹೆಬ್ಬೆರಳಿಗೆ ಗಾಯ ಮಾಡಿಕೊಂಡಿದ್ದರು. ಮೊಹಾಲಿಯಲ್ಲಿ ನಡೆದ ನಾಲ್ಕನೇ ಏಕದಿನ ಪಂದ್ಯದಲ್ಲಿ ಸ್ಟೋನಿಸ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನ ಪಡೆದ ಆಸ್ಟನ್ ಟರ್ನರ್ ಅಜೇಯ 84 ರನ್ ಸಿಡಿಸುವ ಮೂಲಕ ತಂಡಕ್ಕೆ ರೋಚಕ ಜಯ ತಂದಿತ್ತರು. ಈ ಹಿಂದೆ ತಂಡದ ಆಲ್ರೌಂಡರ್ ಮಹತ್ವವನ್ನು ವಿವರಿಸಿದ್ದ ಆಸಿಸ್ ನಾಯಕ ಫಿಂಚ್, ಆಲ್ರೌಂಡರ್’ಗಳು ಯಾವಾಗಲು ತಂಡಗಳಿಗೆ ಅತಿದೊಡ್ಡ ಸಂಪತ್ತು ಇದ್ದ ಹಾಗೆ. ಬೌಲಿಂಗ್-ಬ್ಯಾಟಿಂಗ್ ಮೂಲಕ ತಂಡಕ್ಕೆ ಉಪಯುಕ್ತ ಕಾಣಿಕೆ ನೀಡುವ ಮೂಲಕ ತಂಡದ ಬಲ ಹೆಚ್ಚಿಸುತ್ತಾರೆ. ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ, ಇಂಗ್ಲೆಂಡ್ ಪಡೆಯಲ್ಲಿ ಬೆನ್ ಸ್ಟೋಕ್ಸ್ ತಂಡದ ಸಮತೋಲನ ಹೆಚ್ಚಿಸಲು ಕಾರಣರಾಗಿದ್ದಾರೆ ಎಂದು ಹೇಳಿದ್ದರು.
ಭಾರತ-ಆಸ್ಟ್ರೇಲಿಯಾ ನಡುವಿನ 5ನೇ ಏಕದಿನ ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 2-2 ಸಮಬಲ ಸಾಧಿಸಿದ್ದು ಇದೀಗ ಮಾರ್ಚ್ 13ರಂದು ನವದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯಲಿರುವ ಅಂತಿಮ ಪಂದ್ಯ ಜಯಿಸಿದವರು ಸರಣಿ ಕೈವಶ ಮಾಡಿಕೊಳ್ಳಲಿದ್ದಾರೆ.