ಕೊರೊನಾ ಸಾಂಕ್ರಾಮಿಕದ ನಡುವೆ ಬ್ಯಾಂಕುಗಳ ವ್ಯವಹಾರ ಎಂದಿನಂತೆ ಸಾಗಿದೆ. ಗ್ರಾಹಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಳ್ಳಲು ಮತ್ತು ಚೆಕ್ ಪಾವತಿಗೆ ಸಂಬಂಧಿಸಿದಂತೆ ವಂಚನೆ ಮತ್ತು ದುರುಪಯೋಗದ ಪ್ರಕರಣಗಳನ್ನು ಕಡಿಮೆ ಮಾಡಲು ಆರ್‌ಬಿಐ ಹಲವು ಕ್ರಮಗಳನ್ನು ವರ್ಷದ ಆರಂಭದಲ್ಲೇ ಸೂಚಿಸಿತ್ತು. ಅದರಂತೆ, ಅನೇಕ ಬ್ಯಾಂಕುಗಳು ಚೆಕ್ ಪಾವತಿ ಕುರಿತಂತೆ ಬದಲಾವಣೆ ಮಾಡಿಕೊಂಡಿವೆ.
ಏಪ್ರಿಲ್ 1, 2021ರಿಂದ ಮೊದಲುಗೊಂಡು ಎಂಟು ಬ್ಯಾಂಕುಗಳ ಚೆಕ್ ಬುಕ್, ಪಾಸ್ ಬುಕ್ ಬದಲಾವಣೆಗೊಳಪಟ್ಟಿತ್ತು. ಚೆಕ್ ಬುಕ್, ಪಾಸ್ ಬುಕ್ ವಿಲೀನಗೊಂಡ ಬ್ಯಾಂಕಿನಿಂದಲೇ ಪಡೆದುಕೊಳ್ಳಬೇಕು. ಹೊಸ ಪಾಸ್ ಬುಕ್‌ನಲ್ಲಿ ಅಪ್ಡೇಟ್ ಮಾಹಿತಿಯನ್ನು ದಾಖಲಿಸಿ, ಇತ್ತೀಚಿನ ವ್ಯವಹಾರಗಳನ್ನು ಪ್ರಿಂಟ್ ಮಾಡಿಸಬೇಕು ಎಂದು ಆರ್ ಬಿ ಐ ಪ್ರಕಟಣೆ ಹೊರಡಿಸಿತ್ತು.
ದೇನಾ ಬ್ಯಾಂಕ್, ವಿಜಯ ಬ್ಯಾಂಕ್, ಕಾರ್ಪೊರೇಷನ್ ಬ್ಯಾಂಕ್, ಆಂಧ್ರಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್, ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಅಲಹಾಬಾದ್ ಬ್ಯಾಂಕ್ ಈ ಬಗ್ಗೆ ಪ್ರಕಟಣೆ ಹೊರಡಿಸಿದ್ದವು. ಈಗ ಅಕ್ಟೋಬರ್ 1, 2021ರಿಂದ ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್, ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾದ ಹಳೆ ಚೆಕ್ ಬುಕ್ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪ್ರಕಟಣೆ ಬಂದಿದೆ.
ಒರಿಯೆಂಟಲ್ ಬ್ಯಾಂಕ್ ಆಫ್ ಕಾಮರ್ಸ್(OBC) ಹಾಗೂ ಯುನೈಟೆಡ್ ಬ್ಯಾಂಕ್ ಆಫ್ ಇಂಡಿಯಾ(ಯುಬಿಐ) ಈ ಎರಡು ಬ್ಯಾಂಕಿನ ಗ್ರಾಹಕರ ಬಳಿ ಇರುವ ಹಳೆ ಚೆಕ್ ಕಾರ್ಯನಿರ್ವಹಿಸುವುದಿಲ್ಲ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB) ಟ್ವೀಟ್ ಮಾಡಿ ಮಾಹಿತಿ ಹಂಚಿಕೊಂಡಿದೆ. ಶೀಘ್ರದಲ್ಲೇ ಎರಡು ಬ್ಯಾಂಕ್ ಗ್ರಾಹಕರು ಹೊಸ ಚೆಕ್ ಪಡೆದುಕೊಳ್ಳಬಹುದು ಜೊತೆಗೆ PNBಯ ಹೊಸ IFSC and MICR ಕೂಡಾ ಗುರುತು ಹಾಕಿಕೊಳ್ಳಿ ಎಂದು ತಿಳಿಸಿದೆ.
ಆಂಧ್ರ ಬ್ಯಾಂಕ್ ಹಾಗೂ ಕಾರ್ಪೋರೇಷನ್ ಬ್ಯಾಂಕ್ ಅನ್ನು ಕೆನರಾ ಬ್ಯಾಂಕಿನೊಂದಿಗೆ ಭಾರತೀಯ ರಿಸರ್ವ್ ಬ್ಯಾಂಕ್ ವಿಲೀನಗೊಳಿಸಿದೆ. ಈ ಹಿನ್ನೆಲೆ ಜುಲೈ 1ರಿಂದ ಎರಡೂ ಬ್ಯಾಂಕಿನ ಗ್ರಾಹಕರಿಗೆ ಹೊಸ ಚೆಕ್ ಬುಕ್ ಅನ್ನು ವಿತರಿಸಲಾಗುತ್ತಿದೆ.
ಭಾರತದ ಐಡಿಬಿಐ ಬ್ಯಾಂಕ್ ಜುಲೈ 1ರಿಂದ ಕೇವಲ 20 ಚೆಕ್ ಅನ್ನು ಮಾತ್ರ ಉಚಿತವಾಗಿ ನೀಡುತ್ತದೆ. ತದನಂತರದಲ್ಲಿ ಪ್ರತಿಯೊಂದು ಚೆಕ್ ಲೀಫ್ ಗೆ 5 ರೂಪಾಯಿ ಶುಲ್ಕ ವಿಧಿಸಲಾಗುತ್ತದೆ. ಇದರ ಮಧ್ಯೆ ಐಡಿಬಿಐ ಬ್ಯಾಂಕಿನಲ್ಲಿ ‘ಸಬ್ ಕಾ ಸೇವಿಂಗ್ಸ್ ಅಕೌಂಟ್’ ಖಾತೆದಾರರು ಈ ನಿಯಮದಿಂದ ಹೊರತಾಗಿದ್ದಾರೆ.
ಎಸ್‌ಬಿಐ ಬ್ಯಾಂಕಿನ ಚೆಕ್ ಬುಕ್ ದರವನ್ನು ಕೂಡ ಪರಿಷ್ಕರಿಸಲಾಗಿದೆ. ಸಾಮಾನ್ಯ ಉಳಿತಾಯ ಖಾತೆ ಹಣ ಪಾವತಿಸುವ ಗ್ರಾಹಕರು 10 ಚೆಕ್ ವುಳ್ಳ ಒಂದು ಬುಕ್ಕಿಗೆ 40 ರೂಪಾಯಿ ಹಾಗೂ ಜಿಎಸ್ ಟಿ ಹಣ ಪಾವತಿಸಬೇಕಿದೆ. 25 ಚೆಕ್‌ವುಳ್ಳ ಬುಕ್ಕಿಗೆ 75 ರೂಪಾಯಿ ಜೊತೆಗೆ ಜಿಎಸ್‌ಟಿ ಹಣವನ್ನು ನೀಡಬೇಕಾಗುತ್ತದೆ