ಈ ಶಾಲೆಯ ಈ ಶಾಲೆಯ ಹೆಸರು ಆಜಿಬಾಯಿಚಿ ಶಾಲಾ. ಇಲ್ಲಿನ ವಿದ್ಯಾರ್ಥಿಗಳ ವಯಸ್ಸು 60 ರಿಂದ 90..! ಅಂದಹಾಗೇ ಇದನ್ನು ನಡೆಸುತ್ತಿರುವುದು ಯೋಗೇಂದ್ರ ಬಂಗಾರ್ ಮತ್ತು ಮೊತಿರಾಮ್ ದಲಾಲ್ ಚಾರಿಟೇಬಲ್ ಟ್ರಸ್ಟ್. ಈ ವಯಸ್ಕರ ಶಾಲೆ ಈಗ ಎಲ್ಲೆಲ್ಲೂ ಪ್ರಸಿದ್ಧಿ.
ಅಂದಹಾಗೇ ಈ ಶಾಲೆ ಪ್ರತಿದಿನ ಒಂದೆರಡು ಗಂಟೆಗಳ ಕಾಲ ಮಾತ್ರ ತೆರೆದಿರುತ್ತದೆ. ಇಲ್ಲಿಗೆ ಬರುವ ವಿದ್ಯಾರ್ಥಿನಿಯರು ಪಿಂಕ್ ಸೀರೆ ಉಟ್ಟುಕೊಂಡು ಬರಬೇಕು. ವಯಸ್ಸಾದವರಿಗೆ ಪ್ರೀತಿ ಮತ್ತು ಗೌರವ ತೋರಿಸುವ ಉದ್ದೇಶದಿಂದ ಈ ಶಾಲೆಯನ್ನು ಆರಂಭಿಸಲಾಗಿದೆ . ವಯಸ್ಸಾದವರು ಸಮಾಜಕ್ಕೆ ತುಂಬಾ ಹತ್ತಿರದವರಾಗಿದ್ದಾರೆ ಅನ್ನೋ ಸಂದೇಶ ಸಾರುವ ಉದ್ದೇಶ ಈ ಶಾಲೆಯದ್ದಾಗಿದೆ.
ಈ ಶಾಲೆ 2016ರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ದಿನವಾದ ಮಾರ್ಚ್ 8 ರಂದು ಆರಂಭವಾಗಿತ್ತು. ಈ ಶಾಲೆಯಲ್ಲಿ ಸುಮಾರು 27 ವಿದ್ಯಾರ್ಥಿನಿಯರಿದ್ದು ಎಲ್ಲರೂ ಒಟ್ಟಾಗಿ ಓದು, ಬರವಣಿಗೆಯ ಕಾರ್ಯಗಳನ್ನು ಮಾಡುತ್ತಿದ್ದಾರೆ. ಈ ಶಾಲೆಯಲ್ಲಿ ಮರಾಠಿಯಲ್ಲಿ ಶಿಕ್ಷಣ ನೀಡುತ್ತಿದೆ. 90 ವರ್ಷ ವಯಸ್ಸಿನ ಸೀತಾಬಾಯಿ ದೇಶ್ಮುಖ್ ಈ ಶಾಲೆಯ ಹಿರಿಯ ವಿದ್ಯಾರ್ಥಿನಿ.
ಹಿರಿಯ ವಿದ್ಯಾರ್ಥಿನಿ ಸೀತಾಬಾಯಿ ದೇಶ್ ಮುಖ್ ಅವರಿಗೆ 8 ವರ್ಷದ ಮೊಮ್ಮಗಳು ಶಾಲೆಗೆ ಬರುವುದಕ್ಕೆ ಸಹಾಯ ಮಾಡುತ್ತಿದ್ದಾಳೆ. ಕೆಲವೊಮ್ಮೆ ಮೊಮ್ಮಗಳು ಅನುಷ್ಕಾ ಸೀತಾಬಾಯಿ ಅವರಿಗೆ ಹೋಮ್ ವರ್ಕ್ ಕೂಡ ಮಾಡಿಕೊಡುತ್ತಾಳೆ. ಇದು ಅನುಷ್ಕಾಗೆ ಹೆಚ್ಚು ಖುಷಿ ನೀಡುತ್ತಿದೆಯಂತೆ.
ಇನ್ನು ಆರಂಭದಲ್ಲಿ ಚಿಕ್ಕ ಸ್ಥಳದಲ್ಲಿ ಶಾಲೆ ಆರಂಭವಾಗಿತ್ತು. ಆದ್ರೆ ಕಳೆದ ಗಣರಾಜ್ಯೋತ್ಸವದ ವೇಳೆಯಲ್ಲಿ ಹೆಚ್ಚು ಸ್ಥಳಾವಕಾಶ ಇರುವ ಜಾಗಕ್ಕೆ ಶಾಲೆ ಸ್ಥಳಾಂತರವಾಗಿದೆ. ಸ್ಥಳೀಯ ವಿದ್ಯಾರ್ಥಿಗಳ ಜೊತೆ ಈ ಅಜ್ಜಿಯರು ಗಣರಾಜ್ಯೋತ್ಸವವನ್ನು ಆಚರಿಸಿಕೊಂಡಿದ್ದು ವಿಶೇಷ.
ಅಂದಹಾಗೇ, ಈ ಶಾಲೆಯಲ್ಲಿ ಅಕ್ಷರಗಳ ಜೊತೆಗೆ ಆಟಪಾಠವನ್ನು ಹೇಳಿಕೊಡಲಾಗುತ್ತದೆ. ಪೇಪರ್ ಬ್ಯಾಗ್ ತಯಾರಿಕೆ, ಇನ್ನಿತರ ಕುಶಲ ಕಲೆಗಳನ್ನು ಕೂಡ ಕಲಿಸಿಕೊಡಲಾಗುತ್ತಿದೆ. ಮನಸ್ಸಿಗೆ ಮುದ ನೀಡುವ ಸಂಗೀತ ಪಾಠ ಹೇಳಿಕೊಡುತ್ತಿದೆ. ಮನೆಗೆಲಸ ಮಾಡಿಕೊಂಡು ಓದುವುದಕ್ಕೂ ಇಲ್ಲಿನ ವಿದ್ಯಾರ್ಥಿಗಳು ಶಾಲೆಗೆ ಬರುತ್ತಿರುವುದು ವಿಶೇಷವೇ ಸರಿ.
ಇಲ್ಲಿನ ಶಾಲೆಯ ವಿದ್ಯಾರ್ಥಿನಿಯರನ್ನು ಪಿಕ್ನಿಕ್ ಕರೆದುಕೊಂಡು ಹೋಗುವ ಪರಿಪಾಠ ಇದೆ. ಅಂದರೆ, ಮೂರು ತಿಂಗಳಿಗೊಮ್ಮೆ ಐತಿಹಾಸಿಕ ಸ್ಥಳಗಳಿಗೆ, ದೇವಸ್ಥಾನಗಳಿಗೆ, ಕರೆದೊಯ್ಯಲಾಗುತ್ತಿದೆ. ಕಲಿಕೆಯಲ್ಲೂ ಕೂಡ ಇಲ್ಲಿನ ವಿದ್ಯಾರ್ಥಿನಿಯವರು ಮುಂದಿದ್ದಾರೆ.
ಈ ಶಾಲೆ ದೇಶದಲ್ಲೇ ಹೆಸರುವಾಸಿಯಾಗಿದೆ. ಅಂದ್ರೆ, 60ರಿಂದ 90 ವರ್ಷ ವಯಸ್ಸಿನವರಿಗೆ ಆರಂಭಿಸಿರುವ ಶಾಲೆಗಳಲ್ಲಿ ಇದೇ ಮೊದಲು. ಮಾದರಿ ಶಾಲೆ ಎಂಬ ಹೆಗ್ಗಳಿಕೆ ಹೊಂದಿರುವ ಈ ಶಾಲೆಯೀಗ ಹಿರಿಯ ಜೀವಿಗಳ ಸ್ಫೂರ್ತಿಯ ಸೆಲೆಯಾಗಿದೆ.