ಅನ್ನ ತಿಂದ್ರೆ ತೂಕ ಹೆಚ್ಚಾಗುತ್ತಾ!? ಈ ತಪ್ಪು ಕಲ್ಪನೆ ಇಂದೇ ಬಿಟ್ಟುಬಿಡಿ!
ಅನ್ನ ನಮ್ಮ ಜೀವನದ ಅತಿ ಮುಖ್ಯ ಆಹಾರದಲ್ಲಿ ಒಂದಾಗಿದೆ. ನಾವು ಅಕ್ಕಿಯಿಂದ ಅನೇಕ ವಿಧದ ಖಾದ್ಯಗಳನ್ನು ತಯಾರಿಸುತ್ತೇವೆ. ರೈಸ್ ಬಾತ್, ಬಿಳಿ ಅನ್ನ, ಪುಲಾವ್ ಸೇರಿದಂತೆ ಅನೇಕ ಆಹಾರದ ಜೊತೆ ಸಿಹಿ ತಿಂಡಿಗಳನ್ನು ಕೂಡ ನಾವು ತಯಾರಿಸುತ್ತೇವೆ. ಅನ್ನ ಪ್ರೇಮಿಗಳ ಸಂಖ್ಯೆ, ಭಾರತದಲ್ಲಿ ಅತಿ ಹೆಚ್ಚಿದೆ. ಪ್ರತಿ ದಿನ ಮೂರು ಹೊತ್ತು ಅನ್ನ ಸೇವನೆ ಮಾಡುವವರಿದ್ದಾರೆ. ಏನೇ ಆಹಾರ ತಿನ್ನಲಿ ಅನ್ನ ಸೇವನೆ ಮಾಡಿದ ಸಂತೋಷ ಸಿಗುವುದಿಲ್ಲ ಎನ್ನುವವರಿದ್ದಾರೆ. ಬೆಳಿಗ್ಗೆ ರೈಸ್ ಬಾತ್ ನಿಂದ ಶುರುವಾಗುವ ದಿನಚರಿ ರಾತ್ರಿ ಅನ್ನದಲ್ಲಿ ಮುಕ್ತಾಯವಾಗುತ್ತದೆ.
ಅನೇಕರ ಮನದಲ್ಲಿ ಒಂದು ತಪ್ಪು ಕಲ್ಪನೆ ಮೂಡಿದೆ. ತೂಕ ಏರಿಕೆಯಾಗುತ್ತಿದೆ. ಇನ್ಮುಂದೆ ತೂಕ ಇಳಿಕೆ ಮಾಡಬೇಕು ಎಂದು ಯೋಚನೆ ಮಾಡುತ್ತಿದ್ದಂತೆಯೇ ಮೊದಲು ಮಾಡುವ ಕೆಲಸವೇ ಅನ್ನ ಸೇವನೆ ತ್ಯಜಿಸಿಬಿಡುವುದು. ನಾವು ದಪ್ಪವಾಗುತ್ತಿರುವುದಕ್ಕೆ ಅನ್ನದಲ್ಲಿರುವ ಕಾರ್ಬೋಹೈಡ್ರೇಟ್ಗಳೇ ಕಾರಣ. ಇದರಿಂದಲೇ ನಾನು ದಪ್ಪವಾಗುತ್ತಿದ್ದೇನೆ ಎಂದು ಯೋಚಿಸುವವರಿಗೆ ನಮ್ಮಲ್ಲಿ ಕಡಿಮೆಯೇ ಇಲ್ಲ. ಹಾಗಾದರೆ ನಾವು ದಪ್ಪವಾಗಲು ನಿಜಕ್ಕೂ ಅನ್ನ ಸೇವನೆ ಕಾರಣವಾ ? ಅಥವಾ ಅನ್ನದಿಂದ ತೂಕ ಏರಿಕೆಯಾಗುತ್ತದೆ ಎನ್ನುವುದು ಸುಳ್ಳಾ ? ಈ ಎಲ್ಲದರ ಬಗ್ಗೆ ತಿಳಿದುಕೊಳ್ಳೋಣ.
ತೂಕ ಇಳಿಕೆ ಎಂದಾಕ್ಷಣ ಅನ್ನ ಸೇವನೆ ತ್ಯಜಿಸುವವರಿಗೆ ಖ್ಯಾತ ವೈದ್ಯೆ ಡಾ. ರಮಿತಾ ಕೌರ್ ಕೆಲವು ಕಿವಿಮಾತನ್ನು ಹೇಳಿದ್ದಾರೆ. ನಾವು ನಮ್ಮ ತೂಕ ಇಳಿಕೆಯ ಶತ್ರು ಎಂದು ಭಾವಿಸುವ ಅನ್ನ ಸೇವನೆಯಿಂದ ಎಷ್ಟು ಲಾಭವಿದೆ ? ಉತ್ತಮ ಆರೋಗ್ಯ ಹಾಗೂ ಅನ್ನ ಸೇವನೆಯ ಹಿಂದಿನ ನಂಟೇನು ಈ ಎಲ್ಲದರ ಬಗ್ಗೆ ಸಂಕ್ಷಿಪ್ತ ಮಾಹಿತಿ ನೀಡಿದ್ದಾರೆ.
ಸಾಮಾನ್ಯವಾಗಿ ಊಟಕ್ಕೆ ನಾವು ಒಂದು ಕಪ್ ಅನ್ನವನ್ನು ಸೇವಿಸುತ್ತೇವೆ ಎಂದುಕೊಳ್ಳೋಣ. ತೂಕ ಇಳಿಕೆ ಮಾಡಬೇಕು ಎನ್ನುವವರು ಈ ಒಂದು ಕಪ್ ಅನ್ನದ ಜಾಗದಲ್ಲಿ ಚಪಾತಿಯನ್ನೋ ಅಥವಾ ಇನ್ನೇನ್ನನ್ನೋ ಸೇರಿಸಲು ನೋಡುತ್ತಾರೆ. ಆದರೆ ಅಸಲಿಗೆ ಒಂದು ಕಪ್ ಅನ್ನದಲ್ಲಿ ಇರುವ ಕ್ಯಾಲೋರಿ 200, ಕೊಬ್ಬ 1 ಗ್ರಾಂಗೂ ಕಡಿಮೆ ಹಾಗೂ ಪ್ರೊಟೀನ್ 4 ಗ್ರಾಂನಷ್ಟು ಇರುತ್ತದೆ.
ಇದೇ ನೀವು ಒಂದು ಕಪ್ ಅನ್ನದ ಜಾಗದಲ್ಲಿ 2 ಚಪಾತಿಯನ್ನು ಸೇವಿಸುತ್ತೀರಿ ಎಂದುಕೊಳ್ಳೋಣ. ಈ 2 ಚಪಾತಿಯಲ್ಲಿ 1 ಕಪ್ ಅನ್ನಕ್ಕಿಂತಲೂ ಜಾಸ್ತಿ ಕ್ಯಾಲೋರಿ ಅಡಗಿದೆ ಎಂದರೆ ನೀವು ನಂಬಲೇಬೇಕು. ಒಂದು ಕಪ್ ಅನ್ನದಿಂದ 200 ಕ್ಯಾಲೋರಿ ನಿಮ್ಮದಾದರೆ 2 ಚಪಾತಿ ಸೇವನೆಯಿಂದ 240 ಕ್ಯಾಲೋರಿಯನ್ನು ನೀವು ಸೇರಿಸಿದಂತೆ ಆಗುತ್ತದೆ. ಹಾಗಾದರೆ ಅನ್ನ ನಿಮ್ಮ ತೂಕ ಏರಿಕೆ ಮಾಡುತ್ತಿದೆ ಎಂದರೆ ನೀವು ನಂಬುತ್ತೀರಾ ?
ಅನ್ನವು ವಿಟಮಿನ್ ಬಿ, ಖನಿಜಾಂಶಗಳಾದ ಮೆಗ್ನಿಷಿಯಂ, ಮ್ಯಾಂಗನೀಸ್ ಹಾಗೂ ಝಿಂಕ್ ಅಂಶವನ್ನು ಅತಿಯಾಗಿ ಹೊಂದಿರುತ್ತದೆ. ನೀವು ರಾತ್ರಿ ಅನ್ನ ಮಾಡಿಟ್ಟು ಅದನ್ನು ಮಾರನೇ ದಿನ ಸೇವನೆ ಮಾಡುವುದರಿಂದ ನಿಮ್ಮ ಕರುಳಿನ ಆರೋಗ್ಯ ಸುಧಾರಿಸುತ್ತದೆ. ಚಯಾಪಚಯ ಕ್ರಿಯೆಯ ವೇಗ ಹೆಚ್ಚುವುದರ ಜೊತೆಯಲ್ಲಿ ದೇಹದಲ್ಲಿ ರಕ್ತದ ಪ್ರಮಾಣ ಕೂಡ ನಿಯಂತ್ರಣದಲ್ಲಿ ಇರುತ್ತದೆ.
ಅನ್ನವನ್ನು ಮಿತ ಪ್ರಮಾಣದಲ್ಲಿ ಸೇವನೆ ಮಾಡಿ, ಅದರೊಂದಿಗೆ ವಿವಿಧ ತರಕಾರಿಗಳನ್ನು ಸೇವಿಸುವ ಮೂಲಕ ನೀವು ಸುಲಭದಲ್ಲಿ ತೂಕ ಇಳಿಕೆ ಮಾಡಿಕೊಳ್ಳಬಹುದಾಗಿದೆ. ಹೀಗಾಗಿ ಅನ್ನ ಖಂಡಿತವಾಗಿಯೂ ನಿಮ್ಮ ಶತ್ರುವಲ್ಲ. ಯಾವುದೇ ಪಶ್ಚಾತಾಪವಿಲ್ಲದೇ ನೀವು ಅನ್ನ ಸೇವನೆ ಮಾಡಬಹುದಾಗಿದೆ.
ಕೇವಲ ಅನ್ನ ಸೇವನೆ ತ್ಯಜಿಸಿದಾಕ್ಷಣ ಯಾರೂ ಸಣ್ಣಗಾಗುವುದಿಲ್ಲ. ಹೀಗಾಗಿ ನೀವು ದೇಹ ದಂಡನೆಯ ಕಡೆಗೂ ಗಮನ ನೀಡಬೇಕು. ಈಗೀನ ಜಮಾನದಲ್ಲಿ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವವರ ಸಂಖ್ಯೆ ಜಾಸ್ತಿ ಇರುವುದರಿಂದ ದೇಹಕ್ಕೆ ಶ್ರಮವಿಲ್ಲದೇ ಅನೇಕರು ತೂಕ ಏರಿಕೆ ಕಾಣುತ್ತಾರೆ.
ಹೀಗಾಗಿ ಆದಷ್ಟು ವ್ಯಾಯಾಮವನ್ನು ಮಾಡಿ. ಬೆಳಗ್ಗೆ ಸಂಜೆ ಯೋಗಾಸನ, ಜಿಮ್ಗಳಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಳ್ಳಿ. ಇದು ಯಾವುದೂ ಸಾಧ್ಯವಿಲ್ಲವೆಂದರೆ ಕನಿಷ್ಟ ಬೆಳಿಗ್ಗೆ – ಸಂಜೆ ಹಾಗೂ ಆಹಾರ ಸೇವನೆಯ ಬಳಿಕ ತಲಾ 20 ನಿಮಿಷಗಳ ಕಾಲ ವಾಕಿಂಗ್ ಮಾಡುವ ಅಭ್ಯಾಸ ರೂಢಿಸಿಕೊಳ್ಳಿ .
ತೂಕ ಇಳಿಕೆ ಮಾಡಬೇಕು ಎಂದುಕೊಂಡವರು ಅನ್ನ ಸೇವನೆ ತ್ಯಜಿಸುವುದಲ್ಲ. ಬದಲಾಗಿ ಸಕ್ಕರೆ ಸೇವನೆ ತ್ಯಜಿಸಬೇಕು. ಏಕೆಂದರೆ ನಿಮ್ಮ ನಿಜವಾದ ಶತ್ರು ಸಕ್ಕರೆಯೇ ಆಗಿದೆ. ಅನೇಕರು ಸಕ್ಕರೆ ಬದಲು ಬೆಲ್ಲ ಬಳಕೆ ಮಾಡುತ್ತಾರೆ. ಪೇಟೆಯಲ್ಲಿ ಸಿಗುವ ಬೆಲ್ಲಕ್ಕೂ , ಸಕ್ಕರೆಗೂ ಕ್ಯಾಲೋರಿ ಪ್ರಮಾಣದಲ್ಲಿ ತೀರಾ ವ್ಯತ್ಯಾಸವೇನು ಇರುವುದಿಲ್ಲ. ಆದಷ್ಟು ಸಿಹಿಯನ್ನು ತ್ಯಜಿಸುವ ನಿರ್ಧಾರಕ್ಕೆ ಬಂದು ಬಿಡಿ.ಇಲ್ಲವಾದಲ್ಲಿ ನೇರವಾಗಿ ಕಬ್ಬಿನ ಆಲೆಮನೆಗಳಲ್ಲಿ ಸಿಗುವ ನೈಸರ್ಗಿಕ ಬೆಲ್ಲವನ್ನು ಖರೀದಿಸಿ ಅವುಗಳನ್ನು ಸೇವನೆ ಮಾಡಿ.
ಮನೆಯಲ್ಲಿ ಅನ್ನ ಸೇವನೆ ತ್ಯಜಿಸಿ ಹೊರಗಡೆ ಗೆಳೆಯರ ಜೊತೆ ಸೇರಿ ಜಂಕ್ ಫುಡ್ ಹಾಗೂ ತಂಪು ಪಾನೀಯಗಳ ಸೇವನೆ ಮಾಡುತ್ತಿದ್ದೀರಿ ಎಂದರೆ ನೀವು ಖಂಡಿತ ದೇಹದ ತೂಕ ಇಳಿಸಿಕೊಳ್ಳಲು ಸಾಧ್ಯವಿಲ್ಲ. ಈ ಪದಾರ್ಥಗಳಲ್ಲಿ ಅಗಾಧ ಪ್ರಮಾಣದ ಕ್ಯಾಲೋರಿಗಳು ಮಾತ್ರವಲ್ಲದೇ ದೇಹಕ್ಕೆ ಹಾನಿಯುಂಟು ಮಾಡುವ ಪದಾರ್ಥಗಳೇ ಜಾಸ್ತಿ ಇರುವುದರಿಂದ ಇವುಗಳ ಸೇವನೆಯನ್ನು ಸಂಪೂರ್ಣ ನಿಲ್ಲಿಸುವುದೇ ಒಳ್ಳೆಯದು.
ತೂಕ ಇಳಿಕೆ ಮಾಡಬೇಕು ಎಂದುಕೊಂಡವರು ನೀರನ್ನು ಅಗಾಧ ಪ್ರಮಾಣದಲ್ಲಿ ಸೇವನೆ ಮಾಡಬೇಕು. ಇದರಿಂದ ದೇಹದಲ್ಲಿರುವ ವಿಷಕಾರಿ ಅಂಶಗಳು ಹೊರಬರುತ್ತದೆ. ಜಂಕ್ಫುಡ್ಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಬದಲು ಹಸಿರು ತರಕಾರಿಗಳು, ಹಣ್ಣುಗಳ ಸೇವನೆ ಮಾಡಿ.
ಸಕ್ಕರೆಯಂಶಯುಕ್ತ ಆಹಾರ ಸೇವನೆಯ ಆಸೆಯಾದಾಗ ಡ್ರೈಫ್ರೂಟ್ಗಳು ಮಿತ ಪ್ರಮಾಣದಲ್ಲಿ ಸೇವಿಸಿ ಕಡುಬಯಕೆಯನ್ನು ನಾಶ ಮಾಡಿಕೊಳ್ಳಬಹುದು. ಒಟ್ಟಾರೆಯಾಗಿ ಉತ್ತಮ ಜೀವನಶೈಲಿಯನ್ನು ನಿಮ್ಮದಾಗಿಸಿಕೊಳ್ಳುವ ಮೂಲಕ ಖಂಡಿತ ನೀವು ದೇಹದ ತೂಕವನ್ನು ಇಳಿಸಿಕೊಳ್ಳಬಹುದಾಗಿದೆ.