ತಾಂತ್ರಿಕ ದೋಷ: ಲಂಡನ್–ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸುರಕ್ಷಿತ ಲ್ಯಾಂಡ್

0
142

ತಾಂತ್ರಿಕ ದೋಷ: ಲಂಡನ್–ಬೆಂಗಳೂರು ಏರ್ ಇಂಡಿಯಾ ಬೋಯಿಂಗ್ 787-8 ವಿಮಾನ ಸುರಕ್ಷಿತ ಲ್ಯಾಂಡ್

ಬೆಂಗಳೂರು: ಇಂದು ಬೆಳಗ್ಗೆ ಲಂಡನ್‌ನಿಂದ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ಬೋಯಿಂಗ್ 787-8 ಡ್ರೀಮ್‌ಲೈನರ್ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ತಕ್ಷಣವೇ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಬೆಂಗಳೂರಿನಲ್ಲಿ ಸುರಕ್ಷಿತವಾಗಿ ಲ್ಯಾಂಡ್ ಮಾಡಲಾಗಿದೆ. ವಿಮಾನದಲ್ಲಿ 200ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎಂದು ಮೂಲಗಳು ತಿಳಿಸಿವೆ.

ಮೂಲಗಳ ಪ್ರಕಾರ, ವಿಮಾನದ ಇಂಧನ ನಿಯಂತ್ರಣ ಸ್ವಿಚ್ ‘RUN’ ಸ್ಥಾನದಲ್ಲಿರಬೇಕಿದ್ದರೂ, ಅದು ‘CUT OFF’ ಸ್ಥಾನಕ್ಕೆ ಸರಿದಿರುವುದು ಗಮನಕ್ಕೆ ಬಂದಿದೆ. ‘RUN’ ಮತ್ತು ‘CUT OFF’ ಸ್ವಿಚ್‌ಗಳನ್ನು ಕ್ರಮವಾಗಿ ಎಂಜಿನ್ ಆರಂಭಿಸಲು ಹಾಗೂ ಸ್ಥಗಿತಗೊಳಿಸಲು ಬಳಸಲಾಗುತ್ತದೆ. ಈ ದೋಷವನ್ನು ಪೈಲಟ್ ವಿಮಾನದ ಯಾವ ಹಂತದಲ್ಲಿ ಗಮನಿಸಿದರು ಎಂಬುದು ತಕ್ಷಣಕ್ಕೆ ಸ್ಪಷ್ಟವಾಗಿಲ್ಲ.

ಕಳೆದ ಜೂನ್‌ನಲ್ಲಿ 260 ಜನರ ಸಾವಿಗೆ ಕಾರಣವಾದ ಏರ್ ಇಂಡಿಯಾದ ಬೋಯಿಂಗ್ 787-8 ವಿಮಾನ ಅಪಘಾತದ ಬಳಿಕ, ಇಂಧನ ನಿಯಂತ್ರಣ ಸ್ವಿಚ್ ಕಾರ್ಯನಿರ್ವಹಣೆಯ ಕುರಿತು ವಿಶೇಷ ನಿಗಾ ವಹಿಸಲಾಗುತ್ತಿದೆ. ಆ ಅಪಘಾತದ ಪ್ರಾಥಮಿಕ ತನಿಖಾ ವರದಿಯಲ್ಲಿ ಟೇಕ್ ಆಫ್ ಆದ ಕೂಡಲೇ ಇಂಧನ ಪೂರೈಕೆ ಕಡಿತಗೊಂಡಿತ್ತು ಎಂದು ಉಲ್ಲೇಖಿಸಲಾಗಿತ್ತು.

ಈ ಹಿನ್ನೆಲೆ, ಬೋಯಿಂಗ್ 787-8 ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ಸಂಭವನೀಯ ದೋಷವನ್ನು ಪೈಲಟ್ ವರದಿ ಮಾಡಿದ್ದಾರೆ ಎಂದು ಏರ್ ಇಂಡಿಯಾ ತಿಳಿಸಿದೆ. “ಪೈಲಟ್ ಪ್ರಾಥಮಿಕ ಮಾಹಿತಿ ನೀಡಿದ ತಕ್ಷಣ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಲಾಯಿತು. ಪೈಲಟ್ ನೀಡಿದ ಮಾಹಿತಿಯನ್ನು ಆದ್ಯತೆಯ ಮೇರೆಗೆ ಪರಿಶೀಲಿಸಲಾಗುತ್ತಿದೆ. ಈ ವಿಷಯವನ್ನು ವಾಯುಯಾನ ನಿಯಂತ್ರಕ ಡಿಜಿಸಿಎಗೆ ತಿಳಿಸಲಾಗಿದೆ,” ಎಂದು ಏರ್ ಇಂಡಿಯಾ ಪ್ರಕಟಣೆಯಲ್ಲಿ ಹೇಳಿದೆ.

ಇದೇ ವೇಳೆ, ಡಿಜಿಸಿಎ ನಿರ್ದೇಶನದಂತೆ ಏರ್ ಇಂಡಿಯಾ ತನ್ನ ಎಲ್ಲಾ ಬೋಯಿಂಗ್ 787 ವಿಮಾನಗಳ ಇಂಧನ ನಿಯಂತ್ರಣ ಸ್ವಿಚ್‌ಗಳನ್ನು ಪರಿಶೀಲಿಸಿದ್ದು, ಯಾವುದೇ ತಾಂತ್ರಿಕ ಸಮಸ್ಯೆಗಳು ಪತ್ತೆಯಾಗಿಲ್ಲ ಎಂದು ಸಂಸ್ಥೆ ಸ್ಪಷ್ಟಪಡಿಸಿದೆ.