ಅಪ್ಪನ ಕೆಲಸ ಕೂಲಿ, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

Date:

ಅಪ್ಪನ ಕೆಲಸ ಕೂಲಿ, ಅಮ್ಮನಿಗೆ ಕಣ್ಣಿಲ್ಲ, ಕಿವಿ ಕೇಳದ ಮಗ ಮೂರು ಬಾರಿ ಐಎಎಸ್ ಪಾಸ್ ಮಾಡಿದ..!

ಅವತ್ತು ಆತ ಹುಟ್ಟಿದಾಗ ಅಪ್ಪ-ಅಮ್ಮನಿಗೆ ಅವನ ಭವಿಷ್ಯದ್ದೇ ಚಿಂತೆ..! ಬಡತನದಲ್ಲಿಯೇ ಹುಟ್ಟಿದ ಹುಡುಗನಿಗೆ ಕಿವುಡುತನ ಉಡುಗೊರೆಯಾಗಿ ಹುಟ್ಟುತ್ತಲೇ ಜೊತೆಗಿತ್ತು..! ಹೆತ್ತಮ್ಮ ಕುರುಡಿ..! ಇಡೀ ಕುಟುಂಬಕ್ಕೆ ಕೃಷಿ ಭೂಮಿಯಲ್ಲಿ ಕೂಲಿಯಾಗಿ ಹಗಲಿರುಳು ದುಡಿಯುತ್ತಿದ್ದ ಅಪ್ಪನೇ ಆಸರೆ..! ಗಾಯದ ಮೇಲೆ ಬರೆ ಎಳೆದಂತಾಯಿತಲ್ಲಾ.. ದೇವರು ನನ್ನ ಮಗನನ್ನು ಹುಟ್ಟು ಕಿವುಡನನ್ನಾಗಿ ಮಾಡಿ ಬಿಟ್ಟನಲ್ಲಾ ಅಂತ ಅದೆಷ್ಟೋ ಸಾರಿ ಬಡ ತಂದೆ, ಕಣ್ಣು ಕಾಣದ ತಾಯಿ ದೇವರಿಗೆ ಹಿಡಿಶಾಪ ಹಾಕಿದ್ದರೋ ಗೊತ್ತಿಲ್ಲ…! ಆದರೆ ಇವತ್ತು ಆ ಹುಡುಗ ಅಪ್ಪ-ಅಮ್ಮನ ಹೆಮ್ಮೆಯ ಮಗ ಮಾತ್ರವಲ್ಲ..! ಹುಟ್ಟಿದ ಹಳ್ಳಿಯ ಹೀರೋ, ಹಳ್ಳಿಗರ ಹೆಮ್ಮೆಯ ಪುತ್ರ..! ಕಷ್ಟಪಟ್ಟು ಬೆಳೆಯುವ ಯುವಕರಿಗೆ ಆದರ್ಶ..! ಅಂಗವೈಕಲ್ಯತೆಯನ್ನು ಲೆಕ್ಕಿಸದೆ ಗುರಿ ಮುಟ್ಟಿದ ಛಲದಂಕಮಲ್ಲ..!
ರಾಜಸ್ಥಾನ ಅಲ್ರಾನ ಜಿಲ್ಲೆಯ ಬದನ್ಗರ್ ಎಂಬ ಹಳ್ಳಿಯಲ್ಲಿ ಹುಟ್ಟಿದ ಹುಡುಗ ಬೆಳೆದು ಬಂದ ಹಾದಿ ಇದು..! ಆತ ಹುಟ್ಟಿದ ಹಳ್ಳಿ ಅಂತಿಂತ ಹಳ್ಳಿಯಲ್ಲ, ತುಂಬಾನೇ ಹಿಂದುಳಿದ ಹಳ್ಳಿ..! ಅಲ್ಲಿನ ಬಹುತೇಕರ ಹೊಟ್ಟೆಗೆ ಕೂಲಿಯೇ ಆಧಾರ..! ಈ ರಿಯಲ್ ಸ್ಟೋರಿಯ ರಿಯಲ್ ಹೀರೋನ ಅಪ್ಪನೂ ಕೂಲಿ..! ಅಮ್ಮನಿಗೆ ಕೆಲಸ ಮಾಡಲು ಆಗ್ತಾ ಇರಲ್ಲ..! ಏಕೆಂದರೆ, ಮೊದಲೇ ಹೇಳಿದಂತೆ ಆ ತಾಯಿ ಕುರುಡಿ..! ಹೀಗೆ ಹುಟ್ಟಿನಿಂದಲೇ ಕಷ್ಟ ಏನೆಂದು ಅನುಭವದೊಂದಿಗೇ ಅರ್ಥಮಾಡಿಕೊಂಡಿದ್ದ ಹುಡುಗನಿಗೆ ಕಣ್ಣೆದರು ದೊಡ್ಡ ಗುರಿಯಿತ್ತು..! ಎಷ್ಟೇ ಕಷ್ಟಬಂದರೂ ಅವನ್ನೆಲ್ಲಾ ಮೆಟ್ಟಿನಿಂತು ಬೆಳೆಯ ಬೇಕು, ನಾನು ಚೆನ್ನಾಗಿ ಓದಿ ಅಪ್ಪ-ಅಮ್ಮನ ಕಷ್ಟಕ್ಕೆ ಹೆಗಲಾಗಬೇಕು..! ಹುಟ್ಟಿನಿಂದ ಇಲ್ಲಿಯವರೆಗೂ ಸುಖ ಎಂದರೇನೆಂದು ತಿಳಿಯದ ಅಪ್ಪ-ಅಮ್ಮನನ್ನು ಚೆನ್ನಾಗಿ ನೋಡಿಕೊಳ್ಳ ಬೇಕೆಂದು ಚಿಕ್ಕಂದಿನಲ್ಲೇ ದೊಡ್ಡ ಯೋಚನೆ ಮಾಡಿದ..!
ಅಂದು ಕೊಂಡಿದ್ದನ್ನು ಸಾಧಿಸಲು ಹೊರಟ ಹುಡುಗನಿಗೆ ಆರಂಭದಿಂದಲೂ ಒಂದಲ್ಲ ಒಂದು ಅಡೆತಡೆ, ಕಷ್ಟ, ಅವಮಾನ..! ಹುಟ್ಟೂರಲ್ಲಿ ಶಾಲೆಯೇ ಇರಲಿಲ್ಲ. ಮೂರ್ನಾಲ್ಕು ಕಿಲೋಮೀಟರ್ ದೂರ ನಡೆದು ಪಕ್ಕದ ಹಳ್ಳಿ ಶಾಲೆಗೆ ಹೋಗಿ ಓದಿದ. ಮನೆಯ ಕಷ್ಟವನ್ನು ನೋಡಿ ಕೊರಗಿ ಕುಳಿತು ಕೊಳ್ಳದೇ ಅದನ್ನೇ ಸಾಧನೆಗೆ ಸ್ಪೂರ್ತಿಯಾಗಿಸಿಕೊಂಡು ಮುನ್ನೆಡದ ಹುಡುಗ `ಕಿವುಡ’ ನಾಗಿದ್ದರಿಂದ ಅಧ್ಯಾಪಕರ, ಸಹಪಾಠಿಗಳ ಅಪಹಾಸ್ಯಕ್ಕೂ ಗುರಿಯಾದ..! ಅವತ್ತು ಆ ಕಿವುಡ ಬಾಲಕನನ್ನು ಅವಮಾನಿಸಿದವರು ಕನಸು ಮನಸ್ಸಲ್ಲೂ ಅಂದು ಕೊಂಡಿರಲ್ಲ ಹುಡುಗು ನಿಂತ ನೀರಾಗದೆ ಬಹುದೂರ ಸಾಗುತ್ತಾನೆ ಅಂತ..! ಹುಡುಗ ಹಂತ ಹಂತವಾಗಿ ಎತ್ತರಕ್ಕೆ ಬೆಳೆಯುತ್ತಾ ಸಾಗಿದ..! ಅಂಗವೈಕಲ್ಯತೆ, ಬಡತನ, ಅವಮಾನಕ್ಕೆಲ್ಲಾ ಸೆಡ್ಡು ಹೊಡೆದು ಎಸ್ಎಸ್ಎಲ್ಸಿಯಲ್ಲಿ ಇಡೀ ರಾಜಸ್ಥಾನ್ ರಾಜ್ಯಕ್ಕೇ ಈ ಹಳ್ಳಿ ಹೈದ 5 ನೇ ರ್ಯಾಂಕ್ ಬಂದು ಬಿಟ್ಟ..! ಮತ್ತೆ ಹುಡುಗ ಎಲ್ಲೂ ಎಡವಲಿಲ್ಲ. ದ್ವಿತೀಯ ಪಿಯುಸಿಯಲ್ಲೂ ರಾಜ್ಯಕ್ಕೆ ಏಳನೇ ರ್ಯಾಂಕ್ ಪಡೆದ..! ನಂತರ ಬಿಎಯಲ್ಲಿ ರಾಜಸ್ಥಾನ ವಿಶ್ವವಿದ್ಯಾಲಯಕ್ಕೇ ಮೊದಲ ರ್ಯಾಂಕ್ ಬಂದ, ಗೋಲ್ಡ್ ಮೆಡಲಿಸ್ಟ್ ಆದ..! ಬಿಎ ಮುಗಿಸುತ್ತಿದ್ದಂತೆ ರಾಜಸ್ಥಾನದ ಶಾಲೆಯೊಂದರಲ್ಲಿ ಕ್ಲರ್ಕ್ ಆಗಿ ವೃತ್ತಿ ಜೀವನಕ್ಕೆ ಎಂಟ್ರಿ ಕೊಟ್ಟು ಬಿಟ್ಟ..! ಇಲ್ಲಿಂದ ಮುಂದೆ ಇವರ ಸ್ಟೋರಿಯನ್ನು ಹೇಳುವಾಗ ಏಕವಚನದಲ್ಲಿ ಸಂಭವಿಸೋದು ತಪ್ಪಾಗುತ್ತೆ..! ಯಾಕಂದ್ರೆ ಕ್ಲರ್ಕ್ ಆಗಿಯೇ ಉಳಿದಿಲ್ಲ..! ತುಂಬಾ ಎತ್ತರಕ್ಕೆ ಬೆಳೆದು ಬಿಟ್ಟಿದ್ದಾರೆ..! ಅದಕ್ಕಾಗಿ ಇಲ್ಲಿಂದ ಮುಂದೆ ಹುಡುಗ, ಅವನು-ಇವನೆಂದು ಬಳಸಲಾರೆ.
ಹ್ಞೂಂ, ಮತ್ತೆ ವಿಷಯಕ್ಕೆ ಬರೋಣ. ಕ್ಲರ್ಕ್ ಆಗಿ ವೃತ್ತಿ ಬದುಕನ್ನು ಆರಂಭಿಸಿದ ಇವರು ಆ ವೃತ್ತಿಯಲ್ಲಿ ಮುಂದುವರೆದಿದ್ದು ಕೇವಲ ಒಂದೇ ಒಂದು ವರ್ಷ..! ಅಷ್ಟೊತ್ತಿಗೆ ಆ ಕೆಲಸ ಬೇಡ..! ಇನ್ನೂ ಹೆಚ್ಚಿನದನ್ನು ಈ ಸಮಾಜದಲ್ಲಿ ನಾನು ಸಂಪಾದಿಸಬೇಕೆಂದು ಕ್ಲರ್ಕ್ ಕೆಲಸಕ್ಕೆ ರಾಜೀನಾಮೆ ಕೊಟ್ಟು `ರಾಜ್ಯಶಾಸ್ತ್ರ’ದಲ್ಲಿ ಎಂಎ ಮಾಡಿದ್ರು. ಎಂಎ ಆಗುತ್ತಿದ್ದಂತೆಯೇ ಕೆ-ಸೆಟ್, ಎನ್ಇಟಿ, ಜಿಆರ್ಎಫ್ ಅನ್ನೂ ಮಾಡಿಕೊಂಡ ಇವರು ಪಿ.ಎಚ್.ಡಿ ಯನ್ನೂ ಮಾಡಿ ಡಾಕ್ಟರ್ ಆದ್ರು..! ಟೇಂಕ್ ಜಿಲ್ಲೆಯ ರಾಜಕೀಯ ಮಹಾವಿದ್ಯಾಲಯದಲ್ಲಿ ರಾಜ್ಯಶಾಸ್ತ್ರ ಉಪನ್ಯಾಸಕರಾಗಿ ಹೊಸ ವೃತ್ತಿ ಬದುಕನ್ನು ಕಟ್ಟಿಕೊಂಡ್ರು..! ಇಷ್ಟಕ್ಕೇ ಇವರು ತೃಪ್ತರಾಗಿದ್ದಿದ್ರೆ ನಾನೀಗ ಅವರ ಸ್ಟೋರಿಯನ್ನೇ ಹೇಳೋಕೆ ಹೋಗ್ತಾ ಇರ್ಲಿಲ್ವೇನೋ..? ಅಥವಾ ನನಗೇ ಅವರ ಬಗ್ಗೆ ಬೇರೆಡೆ ಮಾಹಿತಿ ಸಿಕ್ತಾ ಇರಲಿಲ್ಲವೇನೋ..?!
ಅವರು ಉಪನ್ಯಾಸಕರಾಗಿಯೇ ಮುಂದುವರೆಯಲಿಲ್ಲ. 2001ರಲ್ಲಿ ರಾಜಸ್ಥಾನ ಸಾರ್ವಜನಿಕ ಆಡಳಿತ ಮಂಡಳಿ ನಡೆಸಿದ ಆರ್.ಎ.ಎಸ್ (ರಾಜಸ್ಥಾನ ಅಡ್ಮಿನಿಸ್ಟ್ರೇಷನ್ ಸರ್ವೀಸ್) (ಕರ್ನಾಟಕದಲ್ಲಿ ಕೆಎಎಸ್ ಇದ್ದಂಗೆ) ತಗೊಂಡು ಅದರಲ್ಲಿ ಯಶಸ್ವಿಯಾಗಿ ಬರತ್ಪುರದಲ್ಲಿ ದೇವಸ್ಥಾನ ಆಡಳಿತ ಅಧಿಕಾರಿಯಾಗಿ ಐದು ವರ್ಷ ಸೇವೆಯನ್ನು ಸಲ್ಲಿಸಿದರು..! ನಂತರ ರಾಜ್ಯಾಡಳಿತ ಸಾಕೆಂದು ದೇಶಾಡಳಿತಕ್ಕೆ ಬರೋ ಮನಸ್ಸು ಮಾಡಿಬಿಟ್ಟರು..! 2005ರಲ್ಲಿ ಐಎಎಸ್ ಪರೀಕ್ಷೆಯನ್ನು ಬರೆದರು..! ಆ ವರ್ಷ ದೇಶಕ್ಕೆ 27 ನೇ ರ್ಯಾಂಕ್ ನೊಂದಿಗೆ ಐಎಎಸ್ ಪಾಸ್ ಮಾಡಿದರಾದರೂ ಅವರಿಗೆ ಕಿವುಡ ಎಂಬ ಒಂದೇ ಒಂದು ಕಾರಣಕ್ಕೆ ಐಎಎಸ್ ಅಧಿಕಾರಿಯ ಕೆಲಸವನ್ನು ನಿರಾಕರಿಸಲಾಯಿತು..! ಆದರೂ ಇವರು ದೃತಿಗೆಡಲಿಲ್ಲ ಮತ್ತೆ 2006ರಲ್ಲಿ ಐಎಎಸ್ ಪರೀಕ್ಷೆ ಬರೆದರು. ಆಗಲೂ 978 ರ್ಯಾಂಕ್ ನೊಂದಿಗೆ ಐಎಎಸ್ ಪಾಸ್ ಮಾಡ್ತಾರೆ..! ಆಗಲೂ ಕಿವಿ ಕೇಳಲ್ಲ ಅಂತ ಇವರನ್ನು ಆಡಳಿತ ಯಂತ್ರದೊಳಗೆ ಸೇರಿಸಿಕೊಳ್ಳೋಕ್ಕೆ ನಿರಾಕರಿಸ್ತಾರೆ..! ಎರಡು ಬಾರಿ ಐಎಎಸ್ ಪಾಸ್ ಮಾಡಿದ್ದರೂ ನನಗೇ ಕೆಲಸ ಸಿಕ್ಕಿಲ್ಲ, ಇನ್ನೇಕೆ ಇದಕ್ಕೆ ಟ್ರೈ ಮಾಡಲಿ ಅಂತ ಕೈಕಟ್ಟಿ ಕುಳಿತು ಕೊಳ್ಳದೆ ಮತ್ತೆ 2009ರಲ್ಲಿ ಐಎಎಸ್ ಪರೀಕ್ಷೆ ಬರೆದು ಮತ್ತೆ ಪಾಸಾದ್ರು..!
ಮೂರನೇ ಬಾರಿ ಐಎಎಸ್ ಪರೀಕ್ಷೆ ಪಾಸ್ ಆಗುತ್ತಿದ್ದಂತೆ ಕಿವಿಗಳಿಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡರು..! ಸಂಪೂರ್ಣ ಕಿವುಡರಾಗಿದ್ದ ಇವರು ಸ್ವಲ್ಪ ಚೇತರಿಸಿಕೊಂಡು ಅರೆ ಕಿವುಡರಾದರು..! ವೈದ್ಯಕೀಯ ಮಂಡಳಿ ಕೇಳಿದ ಎಲ್ಲಾ ಪ್ರಶ್ನೆಗಳಿಗೂ ಪಟ ಪಟ ಅಂತ ಉತ್ತರಕೊಟ್ಟು ಅವರು ನಿಬ್ಬೆರಗಾಗುವಂತೆ ಮಾಡಿದ್ರು..! ನಂತರ ಇವರಿಗೆ ಭಾಗಶಃ ಕಿವುಡುತನದ ಸರ್ಟಿಫಿಕೆಟ್ ಸಿಕ್ತು..! ಸತತ ಪರಿಶ್ರಮ, ಹೋರಾಟದ ಫಲವಾಗಿ 2010ರಲ್ಲಿ ಪ್ರಧಾನಿ ಕಾರ್ಯಾಲಯದಲ್ಲಿ ಉನ್ನತ ಹುದ್ದೆಗಿಟ್ಟಿಸಿಕೊಂಡ ಇವರು ಮಣಿಪುರ ಕೆಡರ್ನಲ್ಲಿ ಸೇವೆ ಸಲ್ಲಿಸಿದರು..! ನಂತರ ಇವರನ್ನು ಹರಿಯಾಣ ಕೆಡರ್ಗೆ ವರ್ಗಾಯಿಸಲಾಯಿತು..! ಕೊನೆಗೂ ದೇಶದ ಉನ್ನತ ಹುದ್ದೆಯನ್ನು ಅಲಂಕರಿಸಿ ಸಾಧನೆಗೆ ಅಂಗವೈಕಲ್ಯತೆ, ಬಡತನ ಯಾವುದೂ ಅಡ್ಡಿ ಬರಲ್ಲ ಅನ್ನೋ ಸಂತಗಿಯನ್ನು ಜಗಜ್ಜಾಹಿರಗೊಳಿಸಿದ್ದಾರೆ..! ಈ ಸಾಧಕರ ಹೆಸರು ಮಣಿರಾಮ್ ಶರ್ಮಾ ಅಂತ.
ಮಣಿರಾಮ್ ಶರ್ಮಾ ತನ್ನ ಕಿವುಡುತನ, ಬಡತನವನ್ನು ಮೆಟ್ಟಿನಿಂತು ಅದೃಷ್ಟವನ್ನು ಪಣಕ್ಕಿಟ್ಟು ರಾತ್ರಿ ಬೆಳಗಾಗುವುರೊಳಗೆ ರಿಯಲ್ ಹೀರೋ ಆಗಿರುವುದಲ್ಲ..! ಹಂತ ಹಂತವಾಗಿ ಬೆಳೆದು ಬಂದವರು. ಕೂಲಿ ಆಳಾಗಿ, ಕ್ಲರ್ಕ್ ಆಗಿ, ಉನ್ಯಾಸಕನಾಗಿ ಆರ್.ಎ.ಎಸ್ ಆಗಿ, ಮೂರು ಬಾರಿ ಐಎಎಸ್ ಪರೀಕ್ಷೆ ಪಾಸ್ ಮಾಡಿ ಕೊನೆಗೆ ಐಎಎಸ್ ಆಫೀಸರ್ ಆದವರು..! ಇವರ ಸಾಧನೆಯೆ ಹಿಂದೆ ಯಾವಮಟ್ಟಿನ ಶ್ರಮ ಇರಬಹುದು..?! ಮಣಿರಾಮ್ ನಡೆದು ಬಂದ ಹಾದಿಯನ್ನು ನೀವೂ ನೋಡಿದರಲ್ಲ..!? ಈಗ ಹೇಳಿ ಈ ಸಾಧಕನಿಗೊಂದು ಸಲಾಂ.

Share post:

Subscribe

spot_imgspot_img

Popular

More like this
Related

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ

ಎಸ್.ಎಲ್. ಭೈರಪ್ಪನವರಿಗೆ ಮೈಸೂರಿನಲ್ಲಿ ಸ್ಮಾರಕ ನಿರ್ಮಾಣ: ಸಿಎಂ ಸಿದ್ದರಾಮಯ್ಯ ಘೋಷಣೆ ಬೆಂಗಳೂರು: ನಾಡಿನ...

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ

ಚಿನ್ನ ಖರೀದಿದಾರರಿಗೆ ಶುಭ ಸುದ್ದಿ: ಇಳಿಕೆ ಕಂಡ ಹಳದಿ ಲೋಹದ ಬೆಲೆ ಆಭರಣ...

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ

ನಾಳೆ ಮೈಸೂರಿನಲ್ಲಿ ಎಸ್​ಎಲ್​ ಭೈರಪ್ಪ ಅಂತ್ಯಕ್ರಿಯೆ ಹಿರಿಯ ಸಾಹಿತಿ, ಪದ್ಮಭೂಷಣ ಪುರಸ್ಕೃತ ಎಸ್​.ಎಲ್...

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್ ಬರುತ್ತೆ!

ಬಿಳಿಕೂದಲು ಕಪ್ಪಾಗಬೇಕಾ? ಹಾಗಿದ್ರೆ ಈ ತರಕಾರಿ ತಿನ್ನಿ ಹತ್ತೇ ನಿಮಿಷದಲ್ಲಿ ರಿಸಲ್ಟ್...