ಅಮುಲ್ ಉತ್ಪನ್ನ ಮಳಿಗೆಗಳು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪನೆ: DCM ಡಿಕೆಶಿ ಹೇಳಿದ್ದೇನು?
ಬೆಂಗಳೂರು:- ಅಮುಲ್ ಉತ್ಪನ್ನ ಮಳಿಗೆಗಳು ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಸ್ಥಾಪನೆ ವಿಚಾರವಾಗಿ DCM ಡಿಕೆ ಶಿವಕುಮಾರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ನಗರದಲ್ಲಿ ಮಾತನಾಡಿದ ಅವರು, ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳನ್ನು ತೆರೆಯಲು ಕೆಎಂಎಫ್‌ಗೆ ಟೆಂಡರ್ ಕೊಟ್ಟಿದ್ದೇವೆ. ಎರಡು ನಿಲ್ದಾಣಗಳಲ್ಲಿ ಮಾತ್ರ ಅಮುಲ್‌ಗೆ ಅವಕಾಶ ಕೊಡಲಾಗಿದೆ ಎಂದು ತಿಳಿಸಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣಗಳಲ್ಲಿ ಎಂಟು ಮಳಿಗೆಗಳನ್ನು ತೆರೆಯಲು ನಮ್ಮದೇ ರಾಜ್ಯದ ಕೆ ಎಂಎಫ್ಗೆ ಅನುಮತಿ ಕೊಡಲಾಗಿದೆ. ಮೆಟ್ರೋ ನಿಲ್ದಾಣಗಳನ್ನು ಮಳಿಗೆಗಳನ್ನು ತೆರೆಯುವುದಕ್ಕಾಗಿ ಜಾಗತಿಕ ಟೆಂಡರ್ ಕರೆಯಲಾಗಿತ್ತು. ಅದರ ಅಡಿಯಲ್ಲಿ ಅಮುಲ್‌ಗೆ ಅವಕಾಶ ಕೊಡಲಾಗಿದೆ ಎಂದು ಉಪಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಮೆಟ್ರೋ ನಿಲ್ದಾಣದಲ್ಲಿ ಕೆಎಂಎಫ್ ನಂದಿನಿ ಬಿಟ್ಟು ಬೇರೆ ರಾಜ್ಯದ ಅಮುಲ್ ಮಳಿಗೆಗಳಿಗೆ ಅವಕಾಶ ಕೊಡುವ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಸಾರ್ವಜನಿಕರು ವ್ಯಾಪಕ ಆಕ್ಷೇಪ ವ್ಯಕ್ತಪಡಿಸಿದ್ದರು.
ಇದೀಗ ಉಪಮುಖ್ಯಮಂತ್ರಿಗಳು ಎರಡು ಕಡೆ ಮಾತ್ರ ಅಮುಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದಿದ್ದಾರೆ. ಆದರೆ, ಈ ಹಿಂದೆ ಬಿಎಂಆರ್‌ಸಿಎಲ್ ಹೌಸ್ ಜರ್ನಲ್ನಲ್ಲಿ ಪ್ರಕಟಿಸಿದ್ದ ಮಾಹಿತಿ ಪ್ರಕಾರ, ಎಂಟು ಕಡೆಗಳಲ್ಲಿ ಅಮುಲ್ ಮಳಿಗೆ ತೆರೆಯಲು ಅವಕಾಶ ನೀಡಲಾಗುತ್ತಿದೆ ಎಂದು ಉಲ್ಲೇಖಿಸಲಾಗಿತ್ತು.