ಸುಪ್ರೀಕೋರ್ಟ್ ಇಡೀ ದೇಶ ಬಹು ಕಾಲದಿಂದ ಕಾಯುತ್ತಿದ್ದ ಅಯೋಧ್ಯಾ ಮಹಾ ತೀರ್ಪನ್ನು ಶನಿವಾರ ಪ್ರಕಟಿಸಿದೆ. ಈ ಐತಿಹಾಸಿಕ ತೀರ್ಪು ಪ್ರಕಟಿಸಿದ ಪಂಚ ಸದಸ್ಯ ಪೀಠದಲ್ಲಿ ಮೂಡಬಿದಿರೆ ಮೂಲದ ನ್ಯಾಯಮೂರ್ತಿ ಅಬ್ದುಲ್ ನಜೀರ್ ಕೂಡ ಒಬ್ಬರಾಗಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ. ಹಾಗೆಯೇ ಈ ಐತಿಹಾಸಿಕ ವಿಚಾರಕ್ಕೆ ಸಂಬಂಧಿಸಿದಂತೆ ಕರಾವಳಿಯ ಇಬ್ಬರು ಯುವ ವಕೀಲರು ಬಾಬರಿ ಮಸೀದಿ ಪರ ವಕಾಲತ್ತು ನಡೆಸಿದ್ದರು ಎಂಬುದು ಗಮನಾರ್ಹ.
ಬಾಬರಿ ಮಸೀದಿ ಪರ ವಾದ ನಡೆಸಿದ ಡಾ ರಾಜೀವ್ ಧವನ್, ಮೀನಾಕ್ಷಿ ಅರೋರಾ ಮತ್ತು ಧಪರುಲ್ಲಾ ಜೀಲಾನಿಯವರನ್ನೊಳಗೊಂಡ ತಂಡದಲ್ಲಿ ಉಪ್ಪಿನಂಗಡಿಯ ಹಿರೇಬಂಡಾಡಿ ನಿವಾಸಿ ದಿ ಯೂಸಫ್ ಎಂಬುವವರ ಪುತ್ರ ಅಬ್ದುಲ್ ರಹಿಮಾನ್, ಸುಳ್ಯ ಬಳಿಯ ಗಾಂಧಿನಗರ ಕಲ್ಲುಮುಟ್ಟು ನಿವಾಸಿ ಅಬೂಬಕ್ಕರ್ ಪುತ್ರ ಶರೀಫ್ ಇದ್ದರು.
ಪುತ್ತೂರು ನ್ಯಾಯಾಲಯದಲ್ಲಿ ವಕೀಲರಾಗಿ ವೃತ್ತಿ ಜೀವನ ಆರಂಭಿಸಿದ ಅಬ್ದುಲ್ ರಹಿಮಾನ್, ಬಳಿಕ ಸುಪ್ರೀಂಕೋರ್ಟಲ್ಲಿ ವಕೀಲರಾಗಿ ಸೇವೆಗೆ ಸೇರಿದವರು. ಅದೇರೀತಿ ಶರೀಫ್ ಸುಳ್ಯದ ಗಾಂಧಿನಗರದಲ್ಲಿ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಮುಗಿಸಿ, ಸುಳ್ಯ ಸರಕಾರಿ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷಣ, ಸುಳ್ಯದ ಎನ್ ಎಂ ಸಿಯಲ್ಲಿ ಪದವಿ, ಕೆವಿಜಿಯಲ್ಲಿ ಎಲ್ ಎಲ್ ಬಿ ಮುಗಿಸಿಕೊಂಡಿದ್ದಾರೆ. 2018ರ ಫೆಬ್ರವರಿಯಿಂದ ಸುಪ್ರೀಂಕೋರ್ಟಲ್ಲಿ ವಕೀಲರಾಗಿ ಸೇವೆಸಲ್ಲಿಸುತ್ತಿದ್ದಾರೆ.