ಕರ್ನಾಟಕದಾದ್ಯಂತ ಕೊರೋನಾವೈರಸ್ ತಾಂಡವವಾಡುತ್ತಿದೆ. ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಗಣನೀಯವಾಗಿ ಏರುತ್ತಿದ್ದು ಆಕ್ಸಿಜನ್ ಸಮಸ್ಯೆಯಿಂದ ಸಾಯುವವರ ಸಂಖ್ಯೆಯೂ ಸಹ ಹೆಚ್ಚಾಗುತ್ತಿದೆ. ರಾಜ್ಯದಲ್ಲಿ ಇಷ್ಟು ಗಂಭೀರವಾದ ಸಮಸ್ಯೆ ಇದ್ದರೂ ಸಹ ಇಷ್ಟು ದಿನಗಳ ಕಾಲ ಬಿಗ್ ಬಾಸ್ ಕಾರ್ಯಕ್ರಮವನ್ನು ನಿಲ್ಲಿಸದೆ ನಡೆಸಿಕೊಂಡು ಬರಲಾಗಿದೆ. ಆದರೆ ಇದೀಗ ಎಚ್ಚೆತ್ತಿರುವ ಕಲರ್ಸ್ ಕನ್ನಡ ವಾಹಿನಿ ಬಿಗ್ ಬಾಸ್ ಕಾರ್ಯಕ್ರಮವನ್ನು ಮೊಟಕುಗೊಳಿಸಲು ತೀರ್ಮಾನಿಸಿದೆ.
ಹೌದು ಕಲರ್ಸ್ ಕನ್ನಡ ವಾಹಿನಿಯ ಕ್ರಿಯೆಟೀವ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಸಾಮಾಜಿಕ ಜಾಲತಾಣದ ಮೂಲಕ ಬಿಗ್ ಬಾಸ್ ಕಾರ್ಯಕ್ರಮವನ್ನು ಅರ್ಧಕ್ಕೆ ನಿಲ್ಲಿಸುತ್ತಿರುವ ವಿಷಯವನ್ನು ಅಧಿಕೃತವಾಗಿ ಜನರಿಗೆ ತಿಳಿಸಿದ್ದಾರೆ. ಹೊರಗಿನ ಜಗತ್ತು ಕೊರೋನಾವೈರಸ್ ನಿಂದ ದಿನೇ ದಿನೇ ಸಂಕಟ ಪಡುತ್ತಿದ್ದರೆ ಮನೆಯೊಳಗಿರುವ ಸ್ಪರ್ಧಿಗಳಿಗೆ ಅದ್ಯಾವುದರ ಮಾಹಿತಿಯೂ ಇಲ್ಲದೇ ತಮ್ಮ ಪಾಡಿಗೆ ತಾವು ಆಟವಾಡುತ್ತಿದ್ದಾರೆ. ರಾಜ್ಯದ ಪರಿಸ್ಥಿತಿ ತುಂಬಾ ಗಂಭೀರವಾಗಿರುವಾಗ ಬಿಗ್ ಬಾಸ್ ಕಾರ್ಯಕ್ರಮವನ್ನು ನಡೆಸುವುದು ಸೂಕ್ತವಲ್ಲ ಎಂದು ಬಿಗ್ ಬಾಸ್ ಸೀಸನ್ 8ನ್ನು ಅರ್ಧಕ್ಕೆ ನಿಲ್ಲಿಸುವ ತೀರ್ಮಾನ ಮಾಡಿದ್ದೇವೆ ಎಂದು ತಿಳಿಸಿದ್ದಾರೆ.