No menu items!
19.6 C
Munich
Friday, May 1, 2026

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

Must read

ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದಕ್ಕೆ ಮನವಿ: ಸಚಿವ ಶಿವಾನಂದ ಪಾಟೀಲ

ಬೆಂಗಳೂರು, ಮಾರ್ಚ್ 17: ಮುಂದಿನ ಕಬ್ಬು ನುರಿಸುವ ಹಂಗಾಮಿನಿಂದ ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿಗೆ ಒಪ್ಪಂದ ಮಾಡಿಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಲಾಗುವುದು ಎಂದು ಕಬ್ಬು ಅಭಿವೃದ್ಧಿ, ಸಕ್ಕರೆ, ಜವಳಿ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ತಿಳಿಸಿದ್ದಾರೆ.
ವಿಧಾನಪರಿಷತ್ತಿನಲ್ಲಿ ಸದಸ್ಯ ರವಿಕುಮಾರ್ ಸೇರಿದಂತೆ ಇತರರು ನಿಯಮ 330ರ ಅಡಿಯಲ್ಲಿ ನೀಡಿದ್ದ ಸೂಚನೆಗೆ ಉತ್ತರಿಸಿದ ಅವರು, ಕೇಂದ್ರ ಸರ್ಕಾರ ಸಕ್ಕರೆಯ ಕನಿಷ್ಠ ಬೆಂಬಲ ದರ (MSP) ಹೆಚ್ಚಿಸಿದರೆ ಸಕ್ಕರೆ ಕಾರ್ಖಾನೆಗಳು ಹಾಗೂ ಕಬ್ಬು ಬೆಳೆಗಾರರ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಹೇಳಿದರು.
ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆಗಳ ಸಮಸ್ಯೆ ಪರಿಹಾರಕ್ಕಾಗಿ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಭೆ ನಡೆಸಲಾಗಿದೆ. ಕಾರ್ಖಾನೆ ಮಾಲೀಕರ ಬೇಡಿಕೆಗಳಲ್ಲಿ ವಿದ್ಯುತ್ ಖರೀದಿ ಒಪ್ಪಂದ ಹಾಗೂ ನೀರಿನ ತೆರಿಗೆ ಸಂಬಂಧಿಸಿದ ವಿಚಾರಗಳು ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುತ್ತವೆ. ಈ ಬಗ್ಗೆ ಪರಿಗಣಿಸುವುದಾಗಿ ಮುಖ್ಯಮಂತ್ರಿಗಳು ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಸಕ್ಕರೆ ರಫ್ತುಗೆ ಅವಕಾಶ ನೀಡಬೇಕು. ಜೊತೆಗೆ ಎಥೆನಾಲ್ ದರ ಪರಿಷ್ಕರಣೆ ಹಾಗೂ ಉತ್ಪಾದನಾ ಪ್ರಮಾಣಕ್ಕೆ ಅನುಗುಣವಾಗಿ ಹಂಚಿಕೆ ಮಾಡಬೇಕು ಎಂಬ ಬೇಡಿಕೆಗಳಿಗೆ ಕೇಂದ್ರ ಸ್ಪಂದಿಸಿದರೆ ಕಬ್ಬು ಬೆಳೆಗಾರರ ಸಮಸ್ಯೆಗಳಿಗೆ ಪರಿಹಾರ ಸಿಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನೂ, ಗೃಹ ಬಳಕೆ ಮತ್ತು ವಾಣಿಜ್ಯ ಬಳಕೆಗೆ ಸಕ್ಕರೆಯ ವಿಭಿನ್ನ ದರ ನಿಗದಿ ಮಾಡುವ ಬಗ್ಗೆ ಕೇಂದ್ರ ಸರ್ಕಾರ ಗಮನಹರಿಸಿದರೆ ಗ್ರಾಹಕರಿಗೂ ಹಾಗೂ ರೈತರಿಗೆ ಸಹ ಪ್ರಯೋಜನವಾಗಲಿದೆ ಎಂದರು.
ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಕಬ್ಬು ಬೆಳೆಗಾರರಿಗೆ ಸಂಪೂರ್ಣ ಪಾವತಿ ಮಾಡಲಾಗಿದೆ. ಈ ವರ್ಷವೂ ನುರಿಸುವ ಪ್ರಕ್ರಿಯೆ ಮುಂದುವರಿದಿದ್ದು, ಈ ಬಾರಿಯೂ ಸಂಪೂರ್ಣ ಪಾವತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.
ಅತಿ ಹೆಚ್ಚು ಸಕ್ಕರೆ ಉತ್ಪಾದನೆ ಮಾಡುವ ರಾಜ್ಯಗಳಲ್ಲಿ ಕರ್ನಾಟಕದಲ್ಲಿ ಮಾತ್ರ ರೈತರಿಗೆ ಸಂಪೂರ್ಣ ಕಬ್ಬಿನ ಬಿಲ್ ಪಾವತಿಯಾಗಿದ್ದು, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶಗಳಲ್ಲಿ ಇನ್ನೂ ಬಾಕಿ ಉಳಿದಿದೆ ಎಂದು ಸಚಿವರು ಹೇಳಿದರು.

- Advertisement -spot_img

More articles

- Advertisement -spot_img

Latest article