ಮಹತ್ವಾಕಾಂಕ್ಷಿ ಉದ್ಯಮಿಯಾಗಿ ವೇಗವಾಗಿ ಬೆಳೆಯುತ್ತಿರುವವರು ದಕ್ಷಿಣ ಭಾರತೀಯ ಫಿಲ್ಟರ್ ಕಾಫಿ ಸರಣಿಯಾದ ಹಟ್ಟಿ ಕಾಪಿಯ ಸಂಸ್ಥಾಪಕ ಯು.ಎಸ್. ಮಹೇಂದರ್ ಅವರು. ಹಾಸನ ಮೂಲದ ಯು.ಎಸ್.ಮಹೇಂದರ್ ಅವರ ಹಟ್ಟಿ ಕಾಪಿಯ ಮಳಿಗೆಯಲ್ಲಿ ನಿತ್ಯ ಸಾವಿರಾರು ಗ್ರಾಹಕರು ಭಾರತೀಯ ಶೈಲಿಯ ಕಾಫಿಯ ಸ್ವಾದವನ್ನು ಸವಿಯುತ್ತಾರೆ.
ಹಾಸನದ ಕಾಫಿ ಬೆಳೆಗಾರ ಕುಟುಂಬಕ್ಕೆ ಸೇರಿದ ಮಹೇಂದರ್ ಅವರು ಅಲ್ಲೇ ಬಿಎಸ್ಸಿ ಎಲೆಕ್ಟ್ರಾನಿಕ್ಸ್ ಓದನ್ನು 2ನೇ ವರ್ಷದಲ್ಲಿಯೇ ನಿಲ್ಲಿಸಿ ಕಾಫಿ ವ್ಯಾಪಾರಕ್ಕೆ ಇಳಿದಿದ್ದರು. ಅಪ್ಪ ಓದಲು ಒತ್ತಾಯಿಸಿದ್ದರೂ ಅದನ್ನು ಕಿವಿಗೊಡದೆ ಕಾಫಿ ವಹಿವಾಟಿನಲ್ಲಿ ಬದುಕು ಕಟ್ಟಿಕೊಳ್ಳುವ ಕನಸು ನನಸಾಗಿಸಲು ಕಾಪೀ ವ್ಯಾಪಾರವನ್ನು ಶುರುಮಾಡಿದರು. ಮೊದಲಿಗೆ ಎಸ್ಟೇಟ್ಗಳಿಂದ ಕಾಫಿ ಸಂಗ್ರಹಿಸಿ ಬೆಂಗಳೂರಿನ ರಫ್ತುದಾರರಿಗೆ ಮಾರಾಟ ಮಾಡಲು ಶುರುಮಾಡಿದರು.
ನಂತ್ರ ಮಹೇಂದರ್, ಅವರ ಮನೆಯ ಪಕ್ಕದಲ್ಲಿಯೇ ಇದ್ದ ಮಹಾಲಿಂಗೇಗೌಡ ಅವರನ್ನು ಜೊತೆ ಮಾಡಿಕೊಂಡು ಕಾಫಿ ಟ್ರೇಡಿಂಗ್ ಶುರು ಮಾಡಿಯೇಬಿಟ್ಟರು. ಹಾಸನದಲ್ಲಿನ ವ್ಯಾಪಾರ ಅಂದುಕೊಂಡಷ್ಟು ಚೆನ್ನಾಗಿರಲಿಲ್ಲ, ಬೆಂಗಳೂರಿಗೆ ಬಂದರೆ ಹೆಚ್ಚು ಲಾಭ ಗಳಿಸಬಹುದೆಂದು ಬೆಂಗಳೂರಿಗೆ ಬಂದರು. 2001ರಲ್ಲಿ ಬೆಂಗಳೂರಿಗೆ ಬಂದಾಗ ಅವರ ಹತ್ತಿರ ಬೈಕ್ಗೆ ಪೆಟ್ರೋಲ್ಗೂ ದುಡ್ಡಿಲ್ಲದೆ ಬರಿ ಉದ್ದಿಮೆದಾರನಾಗುವ ಕನಸುಗಳನ್ನು ತುಂಬಿಕೊಂಡಿದ್ದರು. ಎಂ.ಜಿ ರಸ್ತೆಯ ಉದ್ದಕ್ಕೂ ತಿರುಗಾಡುತ್ತಿದ್ದರು. ಅಷ್ಟಾದರೂ ದೃತಿ ಗೆಡದೆ ಬಂಢ ದೈರ್ಯದಿಂದ ಹೊಸ ಆರಂಭವನ್ನು ಮಾಡಲು ನಿರ್ಧರಿಸಿದರು.
ಇದಕ್ಕೆ ಬೆಂಗಳೂರಿನಲ್ಲಿದ್ದ ಕಾಫಿ ಉದ್ಯಮಿ, ಸ್ನೇಹಿತ ಶ್ರೀಕಾಂತ್ ಪ್ರೋತ್ಸಾಹಿಸಿ ಅವರು ನಡೆಸುತ್ತಿದ್ದ ಟಾಟಾ ಕಾಫಿ ಪೂರೈಸುವ ಸಣ್ಣ ಕಾರ್ಖಾನೆಯನ್ನು ಅವರಿಗೆ ವಹಿಸಿ ತಾವು ಮೈಸೂರಿಗೆ ತೆರಳಿದರು. ಇಲ್ಲಿಂದ ಶುರುವಾಯಿತು ಮಹೇಂದರ್ ರವರ ಸಂಕಷ್ಟದ ದಿನಗಳು. ಎರಡೂವರೆ ವರ್ಷ ತುಂಬ ಕಷ್ಟಪಟ್ಟರು. ದೊಡ್ಡ, ದೊಡ್ಡ ಹೋಟೆಲ್ಗಳಿಗೆ ಕಾಫಿ ಪೂರೈಸಲು ಮುಂದಾದರೆ ಸಕಾಲಕ್ಕೆ ಹಣ ದೊರೆಯುತ್ತಿರಲಿಲ್ಲ. ಒಂದೊಮ್ಮೆ ಹೀಗೆ ಪ್ರಾಯೋಗಿಕವಾಗಿ ಒಂದು ತಿಂಗಳ ಕಾಲ ಕಾಫಿ ಪೂರೈಸಲು ಅವಕಾಶ ಮಾಡಿಕೊಟ್ಟ ಮಾಲೀಕರೊಬ್ಬರು, “ನಿಮ್ಮ ಕಾಫಿ ರುಚಿಯಾಗಿಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದರು.” ಇದನ್ನು ಕೇಳಿ ಅವರು ಮಾರಾಟದ ಬಗ್ಗೆ ತೆಲೆಕೆಡಿಸಿಕೊಳ್ಳದೆ ಗುಣಮಟ್ಟದ ಕಾಫಿ ಮಾಡಬೇಕು ಎಂದು ನಿರ್ಧರಿಸಿದರು. ಆಗ ಹುಟ್ಟಿದ್ದೇ “ಹಟ್ಟಿ ಕಾಪಿ”.
ಆಗ ನೋಡಿ. ರೀಟೇಲ್ ಮಳಿಗೆ ಮೂಲಕ ಕಾಫಿ ಮಾರಾಟ ಮಾಡಬೇಕು ಎನ್ನುವ ಆಸೆ ಅವರಲ್ಲಿ ಚಿಗುರೊಡೆಯಿತು. ಗ್ರಾಮೀಣ ಸೊಗಡು, ಸಂಸ್ಕೃತಿಯನ್ನು ಸಮರ್ಥವಾಗಿ ಬಿಂಬಿಸುವ ಹಟ್ಟಿ ಕಾಪಿ ಮಳಿಗೆ 2009ರ ನವೆಂಬರ್ 29ರಂದು ಗಾಂಧಿ ಬಜಾರ್ನಲ್ಲಿ 30 ಚದರ ಅಡಿಯಯಲ್ಲಿ ಫಿಲ್ಟರ್ ಕಾಪಿ ಮಳಿಗೆ ತೆರೆಯಲಾಯಿತು. ಆ ದಿನಗಳಲ್ಲಿ ದಿನಕ್ಕೆ 300 ಕಾಪಿ ಮಾರಾಟ ವಾಗುತ್ತಿತ್ತು. ಗ್ರಾಹಕರಿಗೆ ತುಂಬ ಮೆಚ್ಚಿಗೆಯಾಗಿ ‘ಹಟ್ಟಿ ಕಾಪಿ’ ಭಾರಿ ಜನಪ್ರಿಯತೆ ಕೂಡ ಪಡೆಯಿತು.
ಮಹೇಂದರ್ ಅವರೂ ಮಳಿಗೆಗೆ ಭೇಟಿ ನೀಡಿದಾಗ ಮಾರಾಟದ ಬಗ್ಗೆ ಗಮನ ನೀಡದೆ ಗುಣಮಟ್ಟ, ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡುತ್ತಾರೆ. ಇದೇ ಕಾರಣಕ್ಕೆ ವಿಲಾಸಿ ಕಾರುಗಳಲ್ಲಿ ಓಡಾಡುವವರೂ ಹಟ್ಟಿ ಕಾಪಿ ಹುಡುಕಿಕೊಂಡು ಬರುತ್ತಾರೆ ಎಂದು ಅವರ ನಂಬಿಕೆಯಾಗಿತ್ತು. ಅದು ನಿಜ ಕೂಡ ಆಯಿತು. ಇವರಲ್ಲಿರುವ ಅತಿ ಮೆಚ್ಚುಗೆಯ ಪಾತ್ರ ಏನೆಂದರೆ ಹಟ್ಟಿ ಕಾಪಿ ಮಳಿಗೆಗಳಲ್ಲಿ ಹಿರಿಯ ನಾಗರೀಕರು ಮತ್ತು ಅಂಗವಿಕಲರಿಗೂ ಕೆಲಸ ಕೊಟ್ಟಿರುವುದು ಇವರ ಇನ್ನೊಂದು ಹೆಗ್ಗಳಿಕೆಯಾಗಿದೆ.
ಪ್ರಸ್ತುತ ಬೆಂಗಳೂರಿನಲ್ಲಿ ಮತ್ತು ಹೈದರಾಬಾದಿನಲ್ಲಿರುವ 46 ಮಳಿಗೆಗಳಲ್ಲಿ ದಿನಕ್ಕೆ 40 ಸಾವಿರಕ್ಕೂ ಹೆಚ್ಚು ಕಾಫಿ ಕಪ್ ಳನ್ನು ಪೂರೈಸುತ್ತಿದ್ದಾರೆ. ಅಷ್ಟೇ ಅಲ್ಲ ಬೆಂಗಳೂರಿನ ಇಂಟರ್ ನ್ಯಾಷನಲ್ ಏರ್ ಪೋರ್ಟ್, ಇನ್ಫೋಸಿಸ್, ವಿಪ್ರೊ, ಸಿಸ್ಕೊ ಮುಂತಾದ ಐಟಿ ತಂತ್ರಜ್ಞಾನ ಕಂಪನಿಗಳ ಕ್ಯಾಂಪಸ್ಗಳಲ್ಲೂ ಹಟ್ಟಿ ಕಾಫಿ ಮಳಿಗೆಗಳಿವೆ. ‘ಹಟ್ಟಿ ಕಾಪಿಗೆ ಅತಿ ಹೆಚ್ಚು ಆದಾಯ ಐಟಿ ಕಂಪನಿಗಳಿಂದಲೇ ಬರುತ್ತಿದೆ. ವಾರ್ಷಿಕ 12 ಕೋಟಿ ರೂ. ವಹಿವಾಟು ಐಟಿ ಕಂಪನಿಗಳಲ್ಲಿ ಕಾಫಿ ಮಾರಾಟದಿಂದ ದೊರೆಯುತ್ತಿದೆ.
ಒಟ್ಟಾರೆ, ಕಾಫಿ ಉದ್ಯಮದಲ್ಲಿ ಅನೇಕ ಏರಿಳಿತ ಕಂಡ್ರು ಯಶಸ್ವಿ ಉದ್ಯಮಿ ಆದ ಮಹೇಂದರ್ ಯುವ ಉದ್ಯಮಿಗಳಿಗೆ ಸ್ಫೂರ್ತಿಯಾಗಿದ್ದಾರೆ.