ಅಶ್ವಿನ್ ಮಹಾನ್ ಬೌಲರ್ ಅಲ್ಲ ಎಂದ ಮಾಜಿ ಕ್ರಿಕೆಟಿಗ

0
32

34 ವರ್ಷದ ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದ ಪ್ರಮುಖ ಬೌಲರ್ ಎನಿಸಿಕೊಂಡಿದ್ದಾರೆ. ಸದ್ಯ ತಂಡದ ಹಿರಿಯ ಆಟಗಾರ ಎನಿಸಿಕೊಂಡಿರುವ ರವಿಚಂದ್ರನ್ ಅಶ್ವಿನ್ ಸಾಲು ಸಾಲು ಉತ್ತಮ ಪ್ರದರ್ಶನಗಳನ್ನು ನೀಡುತ್ತಾ ಬಂದಿದ್ದಾರೆ.

ರವಿಚಂದ್ರನ್ ಅಶ್ವಿನ್ ಇದುವರೆಗೂ 409 ಟೆಸ್ಟ್ ವಿಕೆಟ್‍ಗಳು, 150 ಏಕದಿನ ವಿಕೆಟ್‍ಗಳು, 52 ಟಿಟ್ವೆಂಟಿ ವಿಕೆಟ್‍ಗಳು, 139 ಐಪಿಎಲ್ ವಿಕೆಟ್‍ಗಳು ಸೇರಿದಂತೆ ದೇಶೀಯ ಕ್ರಿಕೆಟ್‍ನಲ್ಲಿ 500ಕ್ಕೂ ಹೆಚ್ಚು ವಿಕೆಟ್‍ಗಳನ್ನು ಪಡೆದು ಸಾರ್ವಕಾಲಿಕ ಅತ್ಯುತ್ತಮ ಬೌಲರ್ ಎನಿಸಿಕೊಂಡಿದ್ದಾರೆ. ಕಳೆದ ಬಾರಿಯ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನವನ್ನು ನೀಡಿದ ರವಿಚಂದ್ರನ್ ಅಶ್ವಿನ್ ಸದ್ಯ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯ ಹಾಗೂ ಇಂಗ್ಲೆಂಡ್ ವಿರುದ್ಧದ 5 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಇಂಗ್ಲೆಂಡ್ ತಲುಪಿದ್ದಾರೆ.

ಸದ್ಯ ಇಂಗ್ಲೆಂಡ್‌ನಲ್ಲಿರುವ ರವಿಚಂದ್ರನ್ ಅಶ್ವಿನ್ ಕುರಿತು ಮಾತನಾಡಿರುವ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಅಶ್ವಿನ್ ಮಹಾನ್ ಕ್ರಿಕೆಟಿಗನಲ್ಲ ಎಂದು ಹೇಳುವುದರ ಮೂಲಕ ವಿವಾದ ಸೃಷ್ಟಿಸಿದ್ದಾರೆ. ‘ಅಶ್ವಿನ್ ಮಹಾನ್ ಬೌಲರ್ ಜನರು ಹೇಳಿದಾಗ ಒಪ್ಪಿಕೊಳ್ಳಲು ನಾನು ತಯಾರಿಲ್ಲ. ಏಕೆಂದರೆ ಆತ ಕೆಲವು ಸಮಸ್ಯೆಗಳನ್ನು ಹೊಂದಿದ್ದಾನೆ, ಸೆನಾ ( ಸೌತ್ ಆಫ್ರಿಕಾ, ಇಂಗ್ಲೆಂಡ್, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ದೇಶಗಳನ್ನೆಲ್ಲ ಸೇರಿ ಸೆನಾ ಎಂದು ಕರೆಯಲಾಗುತ್ತದೆ ) ದೇಶಗಳಲ್ಲಿ ಹೇಳಿಕೊಳ್ಳುವಂತಹ ಬೌಲಿಂಗ್ ಪ್ರದರ್ಶನ ನೀಡಿಲ್ಲ. ಸೆನಾ ನೆಲದಲ್ಲಿ ಒಂದೇ ಒಂದು 5 ವಿಕೆಟ್ ಗೊಂಚಲನ್ನು ಸಹ ಅಶ್ವಿನ್ ಪಡೆದಿಲ್ಲ. ಇಂತಹ ಬೌಲರ್ ಸಾರ್ವಕಾಲಿಕ ಅತ್ಯುತ್ತಮ ಬೌಲರ್ ಆಗಲು ಹೇಗೆ ಸಾಧ್ಯ?’ ಎಂದು ಸಂಜಯ್ ಮಂಜ್ರೇಕರ್ ಅಶ್ವಿನ್ ವಿರುದ್ಧವಾಗಿ ಮಾತನಾಡಿದ್ದಾರೆ.

ಇನ್ನೂ ಮುಂದುವರೆದು ಮಾತನಾಡಿರುವ ಸಂಜಯ್ ಮಂಜ್ರೇಕರ್ ರವಿಚಂದ್ರನ್ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ನಡುವೆ ಹೋಲಿಕೆ ಮಾಡಿ ಮಾತನಾಡಿದ್ದಾರೆ. ಕಳೆದ 4 ವರ್ಷಗಳಲ್ಲಿ ಗಮನಿಸಿದರೆ ರವೀಂದ್ರ ಜಡೇಜಾ ಕೂಡ ರವಿಚಂದ್ರನ್ ಅಶ್ವಿನ್ ಪಡೆದಿರುವಷ್ಟೇ ವಿಕೆಟ್‍ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲದೆ ಕೆಲ ಪಿಚ್‌ಗಳಲ್ಲಿ ಅಕ್ಷರ್ ಪಟೇಲ್ ಕೂಡ ಅಶ್ವಿನ್‌ಗಿಂತ ಹೆಚ್ಚು ವಿಕೆಟ್‍ಗಳನ್ನು ಪಡೆದು ಮಿಂಚುತ್ತಿದ್ದಾರೆ. ಹೀಗೆ ಇತರ ಭಾರತೀಯ ಬೌಲರ್‌ಗಳು ಉತ್ತಮ ಪ್ರದರ್ಶನ ನೀಡುತ್ತಿರುವಾಗ ರವಿಚಂದ್ರನ್ ಅಶ್ವಿನ್ ಹೇಗೆ ಅತ್ಯುತ್ತಮ ಬೌಲರ್ ಆಗುತ್ತಾರೆ ಎಂದು ಸಂಜಯ್ ಮಂಜ್ರೇಕರ್ ಪ್ರಶ್ನಿಸಿದ್ದಾರೆ.

ಸಂಜಯ್ ಮಂಜ್ರೇಕರ್ ಭಾರತೀಯ ಆಟಗಾರರನ್ನು ಕಳಪೆ ಎನ್ನುತ್ತಿರುವುದು ಇದೇ ಮೊದಲೇನಲ್ಲ. ಈ ಹಿಂದೆ ಕೆಲವೊಂದಷ್ಟು ಬಾರಿ ರವೀಂದ್ರ ಜಡೇಜಾರನ್ನು ಸಂಜಯ್ ಮಂಜ್ರೇಕರ್ ಕಳಪೆಯಾಗಿ ಬಿಂಬಿಸಿದ್ದರು. ಆ ಸಮಯದಲ್ಲಿಯೂ ಸಹ ವಿವಾದಕ್ಕೊಳಗಾಗಿದ್ದ ಸಂಜಯ್ ಮಂಜ್ರೇಕರ್ ಹಲವಾರು ಕ್ರಿಕೆಟಿಗರು ಮತ್ತು ಕ್ರೀಡಾಭಿಮಾನಿಗಳಿಂದ ದೊಡ್ಡ ಮಟ್ಟದ ಟೀಕೆಗಳನ್ನು ಎದುರಿಸಿದ್ದರು.

ರವಿಚಂದ್ರನ್ ಅಶ್ವಿನ್ ಟೀಮ್ ಇಂಡಿಯಾದ ಪರ 409 ಟೆಸ್ಟ್ ವಿಕೆಟ್‍ಗಳನ್ನು ಪಡೆದುಕೊಳ್ಳುವುದರ ಮೂಲಕ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಅತಿಹೆಚ್ಚು ವಿಕೆಟ್ ಪಡೆದ ಭಾರತೀಯ ಆಟಗಾರರ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದುಕೊಂಡಿದ್ದಾರೆ. ಅನಿಲ್ ಕುಂಬ್ಳೆ, ಕಪಿಲ್ ದೇವ್ ಹಾಗೂ ಹರ್ಭಜನ್ ಸಿಂಗ್ ನಂತರ ರವಿಚಂದ್ರನ್ ಅಶ್ವಿನ್ ಈ ಪಟ್ಟಿಯಲ್ಲಿದ್ದಾರೆ.

 

LEAVE A REPLY

Please enter your comment!
Please enter your name here