ಇನ್ನು ಮುಂದೆ ಮೈಸೂರಿನ ‘ಸರಸ್ವತಿ’ ಚಿತ್ರಮಂದಿರದ ಮುಂದೆ ‘ಹೌಸ್‌ಫುಲ್’ ಎಂಬ ಬೋರ್ಡ್ ಕಾಣುವುದಿಲ್ಲ. ಕಾರಣ ಕೋವಿಡ್ ಹಾಗೂ ಲಾಕ್ ಡೌನ್ ಪರಿಣಾಮ ಈ ಚಿತ್ರಮಂದಿರವನ್ನು ಮುಚ್ಚಲಾಗುತ್ತಿದೆ.
ಮೈಸೂರು ಎಂದರೆ ಅದು ಸಾಂಸ್ಕೃತಿಕ ನಗರಿ. ಸಿನಿಮಾ ಕ್ಷೇತ್ರಕ್ಕೆ ಸಾಹಸಿಸಿಂಹ ವಿಷ್ಣುವರ್ಧನ್, ಹಿರಿಯ ನಟ ಅಶ್ವತ್ಥ್, ಚಾಲೆಂಜಿಂಗ್ ಸ್ಟಾರ್ ದರ್ಶನ್, ರಾಕಿಂಗ್ ಸ್ಟಾರ್ ಯಶ್ ಸೇರಿದಂತೆ ಸಾಕಷ್ಟು ಕಲಾವಿದರನ್ನು ಮೈಸೂರು ಕೊಡುಗೆಯಾಗಿ ನೀಡಿದೆ. ಇಂತಹ ಹಿನ್ನೆಲೆ ಇರುವ ಕಲಾ ತವರೂರು ಮೈಸೂರಿನಲ್ಲಿ ಒಂದೊಂದೇ ಚಿತ್ರಮಂದಿರಗಳು ತೆರೆಮರೆಗೆ ಸರಿಯುತ್ತಿರುವುದು ಸಿನಿ ಪ್ರೇಕ್ಷಕರಲ್ಲಿ ಬೇಸರ ಮೂಡಿಸಿದೆ. ಕೊರೊನಾ ಮತ್ತು ಲಾಕ್‌ಡೌನ್‌ನಿಂದ ಕಳೆದ ಒಂದೂವರೆ ವರ್ಷದಿಂದ ಚಿತ್ರಮಂದಿರಗಳು ಸರಿಯಾಗಿ ತೆರೆಯದ ಕಾರಣ ಮಾಲೀಕರಿಗೆ ತಮ್ಮ ಸಿಬ್ಬಂದಿಗೆ ಸಂಬಳ ಕೊಟ್ಟು ಥಿಯೇಟರ್ ನಡೆಸಲು ಕಷ್ಟವಾಗುತ್ತಿದೆ. ಹಾಗಾಗಿ ಚಿತ್ರಮಂದಿರಗಳು ಮುಚ್ಚುವ ಹಂತಕ್ಕೆ ಬಂದಿವೆ. ಸದ್ಯ ಮೈಸೂರಿನ ಮತ್ತೆರಡು ಚಿತ್ರಮಂದಿರ ಮುಚ್ಚುವ ಆಲೋಚನೆಯಲ್ಲಿವೆ.
1990ರಲ್ಲಿ ಆರಂಭವಾದ ‘ಸರಸ್ವತಿ’ ಚಿತ್ರಮಂದಿರದಲ್ಲಿ ಕನ್ನಡ ಚಿತ್ರಗಳನ್ನಷ್ಟೇ ಇಲ್ಲಿಯವರೆಗೂ ಪ್ರದರ್ಶನ ಮಾಡಿರುವ ಹೆಗ್ಗಳಿಕೆ ಹೊಂದಿದೆ. ಬಹುತೇಕ ಪುನೀತ್ ರಾಜ್ ಕುಮಾರ್ ಸಿನಿಮಾಗಳ ಪ್ರದರ್ಶನವಾಗುತ್ತಿದ್ದ ಈ ಚಿತ್ರಮಂದಿರಕ್ಕೂ ರಾಜ್ ಕುಮಾರ್ ಕುಟುಂಬಕ್ಕೂ ಅವಿನಾಭಾವ ಸಂಬಂಧ ಇತ್ತು.