ಬಿಜೆಪಿಯವರು ಆಪರೇಷನ್ ಕಮಲ ಮಾಡಿದರೆ ನಾವು ರಿವರ್ಸ್ ಆಪರೇಷನ್ ಮಾಡುತ್ತೇವೆ ಎಂದು ಅರಣ್ಯ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆನಂದ್ ಸಿಂಗ್ ಅವರ ರಾಜೀನಾಮೆಯಿಂದ ಸಮ್ಮಿಶ್ರ ಸರ್ಕಾರಕ್ಕೆ ಯಾವುದೇ ರೀತಿಯ ಧಕ್ಕೆಯಿಲ್ಲ ಎಂದು ಸ್ಪಷ್ಟಪಡಿಸಿದರು.
ಆನಂದ್ ಸಿಂಗ್ ಅವರು, ಜಿಂದಾಲ್‍ಗೆ ಭೂಮಿ ಪರಭಾರೆ ವಿಷಯಕ್ಕೆ ರಾಜೀನಾಮೆ ಕೊಟ್ಟಿರಬಹುದು. ರಾಜೀನಾಮೆ ಕೊಡುವುದರಿಂದ ಪರಿಹಾರ ಸಿಗುವುದಿಲ್ಲ. ಈ ಬಗ್ಗೆ ಸರ್ಕಾರ ಗಮನ ಹರಿಸುತ್ತದೆ ಎಂದು ಹೇಳಿದರು. ಅವರು ರಾಜೀನಾಮೆ ಕೊಟ್ಟರೂ ಯೋಚಿಸಿ ನಿರ್ಧಾರ ಕೈಗೊಳ್ಳಲು 15 ದಿನಗಳ ಕಾಲಾವಕಾಶವಿರುತ್ತದೆ ಎಂದು ತಿಳಿಸಿದರು.
ನಮ್ಮ ಸರ್ಕಾರ ಸುಭದ್ರವಾಗಿದೆ.ಯಾರಿಂದಲೂ ಕೆಡವಲು ಸಾಧ್ಯವಿಲ್ಲ. ಈಗಾಗಲೇ 12 ಮಂದಿ ಮುಂಬೈಗೆ ಹೋಗಿ ಬರಿಗೈನಲ್ಲಿ ಹಿಂತಿರುಗಿದ್ದಾರೆ. ನಮ್ಮ ಸರ್ಕಾರ 4 ವರ್ಷ ಭದ್ರವಾಗಿರುತ್ತದೆ. ಯಾರಿಂದಲೂ ಏನೂ ಮಾಡಲು ಆಗುವುದಿಲ್ಲ ಎಂದರು.
7 ಮಂದಿ ಅತೃಪ್ತರು ಕಾಂಗ್ರೆಸ್ ತೊರೆಯಲಿದ್ದಾರೆ ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಯಾರೂ ಪಕ್ಷ ಬಿಟ್ಟು ಹೋಗುವುದಿಲ್ಲವೆಂದು ಸ್ಥಳದಲ್ಲೇ ಅಥಣಿ ಶಾಸಕ ಮಹೇಶ್ ಕುಮಟಳ್ಳಿಯವರಿಗೆ ದೂರವಾಣಿಯಲ್ಲಿ ಮಾತನಾಡಿ ಖಚಿತ ಪಡಿಸಿಕೊಂಡರು.