ಆಸೀಸ್ ಗೆ ಧೋನಿಯದ್ದೇ ಟೆನ್ಷನ್, ಕನ್ನಡಿಗ ರಾಹುಲ್ ಗೆ ಸಿಗುತ್ತಾ ಚಾನ್ಸ್?

0
335

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ 1-2 ಅಂತರದ ಸೋಲು ಅನುಭವಿಸಿದ್ದ ಟೀಮ್ ಇಂಡಿಯಾ ತವರಿನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 2 ಪಂದ್ಯಗಳ ಟಿ20 ಸರಣಿಯಲ್ಲಿ 2 ಪಂದ್ಯಗಳಲ್ಲೂ ಸೋತು ಮುಖಭಂಗ ಅನುಭವಿಸಿತ್ತು.
ನಂತರ ಈಗ ಆಸ್ಟ್ರೇಲಿಯಾ ವಿರುದ್ಧ ತವರಿನಲ್ಲಿ 5 ಪಂದ್ಯಗಳ ಏಕದಿನ ಸರಣಿಯನ್ನು ಆಡುತ್ತಿದೆ. ಈಗಾಗಲೇ ಮೊದಲ ಪಂದ್ಯ ಗೆದ್ದು ಗೆಲುವಿನ ಹಳಿಗೆ ಮರಳಿದೆ ರನ್ ಮಷಿನ್ ವಿರಾಟ್ ಕೊಹ್ಲಿ ಸಾರಥ್ಯದ ಭಾರತ ತಂಡ.
ಇಂದು ನಾಗ್ಪುರದಲ್ಲಿ ಎರಡನೇ ಏಕದಿನ ಪಂದ್ಯಕ್ಕೆ ಕ್ಷಣಗಣನೆ ಆರಂಭವಾಗಿದೆ. ಆಸ್ಟ್ರೇಲಿಯಾ ಮೊದಲ ಪಂದ್ಯದ ಸೋಲಿನ ಸೇಡನ್ನು ತೀರಿಸಿಕೊಳ್ಳಲು ತವಕಿಸಿದೆ. ವಿರಾಟ್ ಪಡೆ ಈ ಪಂದ್ಯವನ್ನೂ ಗೆದ್ದು ಸರಣಿಯಲ್ಲಿ 2-0 ಮುನ್ನಡೆ ಕಾಯ್ದು ಕೊಳ್ಳುವ ಗುರಿ ಹೊಂದಿದೆ.
ಎರಡೂ ತಂಡಗಳು ಗೆಲುವಿಗಾಗಿ ಸಾಕಷ್ಟು ತಯಾರಿ ನಡೆಸುತ್ತಿವೆ. ಆಸ್ಟ್ರೇಲಿಯಾಕ್ಕೆ ಕ್ಯಾಪ್ಟನ್ ವಿರಾಟ್ ಕೊಹ್ಲಿ ಮತ್ತು ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರಿಗಿಂತ ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಅವರದ್ದೇ ದೊಡ್ಡ ಚಿಂತೆ…ಮೊದಲ ಏಕದಿನ ಪಂದ್ಯದಲ್ಲಿ ಒಂದು ಹಂತದಲ್ಲಿ ಸುಲಭವಾಗಿ ಗೆದ್ದು ಬೀಗುವ ಉತ್ಸಾಹದಲ್ಲಿದ್ದ ಆಸೀಸ್ ಉತ್ಸಾಹಕ್ಕೆ ತಣ್ಣೀರು ಎರಚಿದ್ದು ಮಹೇಂದ್ರ ಸಿಂಗ್ ಧೋನಿ. ಕೂಲ್ ಕ್ಯಾಪ್ಟನ್ ಎಂಎಸ್ ಡಿ ಕೇದಾರ್ ಜಾಧವ್ ಜೊತೆಗೂಡಿ ಭಾರತವನ್ನು ಗೆಲವಿನ ದಡ ಸೇರಿಸಿದ್ದರು.‌ 2019 ರಲ್ಲಿ ಈ ವರೆಗೆ 6ಇನ್ನಿಂಗ್ಸ್ ನಿಂದ ಧೋನಿ 150.50 ಸರಾಸರಿಯಲ್ಲಿ 301 ರನ್ ಕಲೆಹಾಕಿದ್ದಾರೆ. ಇದು ಆಸ್ಟ್ರೇಲಿಯಾದ ನಿದ್ರೆ ಗೆಡಿಸಿದೆ.
ಇನ್ನೊಂದೆಡೆ ಕಾಫಿ ವಿತ್ ಕರಣ್ ಶೋ ನಲ್ಲಿ ಮಹಿಳೆಯರ ಬಗ್ಗೆ ಅವಹೇಳನಕಾರಿ ಮಾತಾಡಿ ಆಸೀಸ್ ಪ್ರವಾಸದಿಂದ ವಾಪಸ್ಸು ಬಂದು, ನ್ಯೂಜಿಲೆಂಡ್ ಟೂರ್ ಗೂ ಕಡೆಗಾಣಿಸಲ್ಪಟ್ಟಿದ್ದ ಕನ್ನಡಿಗ ಕೆ.ಎಲ್ ರಾಹುಲ್ ತವರಿನಲ್ಲಿ ಆಸೀಸ್ ವಿರುದ್ಧ ನಡೆದ ಟಿ20 ಸರಣಿ ಮೂಲಕ ಕಮ್ ಬ್ಯಾಕ್ ಆಗಿದ್ದಾರೆ. ಎರಡೂ ಟಿ20 ಮ್ಯಾಚ್ ನಲ್ಲಿ ಭಾರತ ಸೋತರೂ ರಾಹುಲ್ ಉತ್ತಮ ಆಟ ಪ್ರದರ್ಶಿಸಿ, ತಮ್ಮ ಆಯ್ಕೆಯನ್ನು ಸಮರ್ಥಿಸಿಕೊಂಡಿದ್ದರು. ಇದೀಗ ಒನ್ ಡೇ ಯಲ್ಲೂ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಮೊದಲ ಪಂದ್ಯದಿಂದ ಹೊರಗುಳಿದಿದ್ದ ರಾಹುಲ್ ಇಂದು ನಡೆಯುವ 2ನೇ ಪಂದ್ಯದಲ್ಲಿ ಶಿಖರ್ ಧವನ್ ಬದಲಿಗೆ ಕಣಕ್ಕಿಳಿಯುವ ನಿರೀಕ್ಷೆ ಇದೆ. ವಿಶ್ವಕಪ್ ದೃಷ್ಟಿಯಿಂದ ರಾಹುಲ್ ಅವರಿಗೆ ಬಿಸಿಸಿಐ ಮತ್ತೊಂದು ಅವಕಾಶ ನೀಡಿದೆ. ಟಿ20 ಯಲ್ಲಿ ಯಶಸ್ಸು ಕಂಡ ರಾಹುಲ್ ಏಕದಿನದಲ್ಲೂ ಸಾಮಾರ್ಥ್ಯ ಸಾಬೀತುಪಡಿಸಬೇಕಾಗಿದೆ.

LEAVE A REPLY

Please enter your comment!
Please enter your name here