ನಂಗೆ ಬಿಂದು ಏನು ಅಂತ ಚೆನ್ನಾಗಿ ಗೊತ್ತು. ಅವಳು ಯಾರ ಮನಸ್ಸನ್ನೂ ನೋವಿಸುವ ಹುಡುಗಿಯಲ್ಲ. ಇನ್ನು ಚೇತನ್ ಮನಸ್ಸನ್ನು ನೋವಿಸ್ತಾಳ? ಚಾನ್ಸೇ ಇಲ್ಲ…! ಹೌದು, ಚೇತನ್ ಅವಳಿಗೆ ಬೇಜಾರು ಮಾಡಬಾರದಿತ್ತು. ಅವತ್ತಿನ ಆ ರಾತ್ರಿ ಅವಳು ಬರದೇ ಇದ್ದಿದ್ದರೆ ಇವತ್ತು ಚೇತನ್ ಬದುಕಿರುತ್ತಿರಲಿಲ್ಲ..! ಜೀವ ಉಳಿಸಿದ ಬಿಂದುವನ್ನೇ ದೂರ ಇಟ್ಟ ಅವನು ನಿಜಕ್ಕೂ ಮನುಷ್ಯನೇ ಅಲ್ಲ ಅಂತ ನಾವೆಲ್ಲಾ ಬೈಕೊಳ್ತಾ ಇರ್ತೀವಿ. ಆದರೆ, ಬಿಂದು ಮಾತ್ರ ಹೋಗ್ಲಿ ಬಿಡ್ರೇ..ಅವನಿಗೆ ಒಳ್ಳೇದಾದ್ರೆ ಸಾಕು ಅಂತ ದೇವರಲ್ಲಿ ಪ್ರಾರ್ಥಿಸ್ತಾಳೆ…!
ನನ್ನ ಗೆಳತಿ ಬಿಂದುಗೆ ಎರಡು ವರ್ಷದ ಹಿಂದೆ ಪರಿಚಿತನಾದವ ಚೇತನ್. ಅದೊಂದು ದಿನ ರಾತ್ರಿ ನಾನು , ಬಿಂದು, ಪವಿತ್ರ, ಅಕ್ಷತಾ ಊರಿಗೆ ಹೊರಟಿದ್ವಿ. ಮೂವರದ್ದು ಚಿಕ್ಕಮಗಳೂರು ಸುತ್ತಮುತ್ತಾ ಆಗಿರೋದ್ರಿಂದ ನಾವುಗಳು ಹೆಚ್ಚಾಗಿ ಊರಿಗೆ ಒಟ್ಟಿಗೆ ಹೋಗಿಬರ್ತೀವಿ. ಹಾಗೇ ಅವತ್ತು ಕೂಡ ಊರಿಗೆ ಹೊಗ್ತಾ ಇದ್ವಿ. ಕೆಲಸ ಮುಗಿಸಿಕೊಂಡು ಹೊರಡೋದು ಸ್ವಲ್ಪ ತಡವಾಗಿತ್ತು. ಸಿಕ್ಕಿದ ಬಸ್ ಹತ್ತಿದೆವು. ತುಮಕೂರು ದಾಟಿ ಗುಬ್ಬಿ ಹತ್ತಿರ ಹೋಗುವಾಗ ರಾತ್ರಿ ಹೆಚ್ಚು ಕಡಿಮೆ 12 ಗಂಟೆ ಆಗಿರಬಹುದು..! ಗುಬ್ಬಿಯಲ್ಲಿ ಬೆಂಗಳೂರಿಗಿಂತಲೂ ದೊಡ್ಡದಾಗಿ ಟ್ರಾಫಿಕ್ ಜಾಮ್ ಆಗಿತ್ತು..! ಅದೂ ರಾತ್ರಿ…! ಬಸ್ ನಲ್ಲಿದ್ದ ಎಲ್ಲರೂ ಕೆಳಗಿಳಿದು ಏನ್ ಆಗಿದೆ ಅಂತ ನೋಡೋಕೆ ಹೊರಟೆವು. ಒಂದಿಷ್ಟು ಜನ ಗುಂಪು ಕಟ್ಟಿಕೊಂಡಿದ್ರು…! ಯಸ್, ಅಲ್ಲೊಂದು ಆಕ್ಸಿಡೆಂಟ್ ಆಗಿದ್ದು. ಬೈಕ್ ಲಾರಿಗೆ ಕುಟ್ಟಿದ ಪರಿಣಾಮ ಬೈಕ್ ಸವಾರ ಸಾವು ಬದುಕಿನ ನಡುವೆ ಹೋರಾಡುತ್ತಾ, ರಕ್ತದ ಮಡುವಿನಲ್ಲಿ ಬಿದ್ದಿದ್ದ…!
ಅಲ್ಲಿದ್ದವರ ಮೇಲೆಲ್ಲಾ ಬಿಂದು ರೇಗಾಡಕ್ಕೆ ಶುರು ಮಾಡಿದ್ಲು..! ನೀವೇನು ಮನುಷ್ಯರ? ಇಲ್ಲೇನು ಕೋತಿ ಕುಣೀತಾ ಇದ್ಯಾ? ಎಲ್ರೂ ನೋಡ್ತಾ ನಿತ್ತಿದ್ದೀರಲ್ಲ?ಆಸ್ಪತ್ರೆಗೆ ಕರ್ಕೊಂಡು ಹೋಗೋದ್ ಬಿಟ್ಟು…! ಅವಳು ಕಿರುಚಾಡುತ್ತಿದ್ದಂತೆ ಒಂದಿಷ್ಟು ಜನ ತೆಪ್ಪಗೆ ಹೋದ್ರು, ಇನ್ನೊಂದಿಷ್ಟು ಮಂದಿ ಮತ್ತೆ ಗೊಣಗೋಕೆ ಶುರುಮಾಡಿದ್ರು. ಅಷ್ಟರಲ್ಲೇ ಬಿಂದು ಆ್ಯಂಬುಲೆನ್ಸ್ ಗೆ ಕರೆಮಾಡಿದ್ಲು..!
ಆ್ಯಂಬುಲೆನ್ಸ್ ಬರೋ ತನಕ ಆಗಾಗಾ ಗಾಯಾಳುಗೆ ತನ್ನ ಉಸಿರು ಕೊಡ್ತಿದ್ಲು..! ತಲೆಗೆ ತನ್ನ ವೇಲ್ ಕಟ್ಟಿದ್ಲು…! ಅದೂ ಸಾಲದಾಗ ಬ್ಯಾಗ್ ನಲ್ಲಿದ್ದ ಬಟ್ಟೆಗಳನ್ನು ತೆಗೆದು ಕಟ್ಟಿದ್ಲು..! ಆ್ಯಂಬುಲೆನ್ಸ್ ಬಂತು..ಸೀದಾ ತುಮಕೂರು ಆಸ್ಪತ್ರೆಗೆ ಕರೆದುಕೊಂಡು ಹೋದಳು…! ಅಲ್ಲಿಂದ ವೈದರ ಸಲಹೆ ಮೇರೆಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಆ ವ್ಯಕ್ತಿಯನ್ನು ಕರ್ಕೊಂಡು ಹೋಗಿ ಸೇರಿಸಿದ್ಲು…! ಮರುದಿನ ಅವನ ಅಪ್ಪ-ಅಮ್ಮ ಬರಬೇಕಾದ್ರೆ ಅವನು ಎಷ್ಟೋ ಸುದಾರಿಸಿಕೊಂಡಿದ್ದ… ! ಡಾಕ್ಟರ್, ಜೀವಕ್ಕೇನು ಅಪಾಯ ಇಲ್ಲ ಅಂತ ಹೇಳಿದ್ರು.
ಹಾಗೆ ಬಿಂದು ಉಳಿಸಿದ ಜೀವ ಚೇತನ್…!
ಮೂರ್ನಾಲ್ಕು ತಿಂಗಳಲ್ಲಿ ಚೇತು ಪೂರ್ಣ ಗುಣಮುಖನಾದ. ಚೇತು ಮತ್ತು ಬಿಂದು ಕ್ಲೋಸ್ ಆದ್ರು. ಚೇತು ಕೆಲಸ ಕಳ್ಕೊಂಡು ನೋವಿನಲ್ಲಿದ್ದಾಗ, ಪ್ರೀತಿ ಕಳ್ಕೊಂಡು ಹುಚ್ಚನಾದಾಗಲೂ ಒಬ್ಬ ಗೆಳತಿಯಾಗಿ ಜೊತೆಗಿದ್ಲು ಬಿಂದು .
ಮುಂದೆ ಚೇತನ್ ನೇ ಬಿಂದುಗೆ ಪ್ರಪೋಸ್ ಮಾಡಿದ್ದ…! ಅದಕ್ಕೆ ಬಿಂದು ಒಪ್ಪರಲಿಲ್ಲ. ಇವನು ಹಠ ಮಾಡಿದ..! ಕೊನೆಗೂ ಬಿಂದುವಿನಿಂದ ಗ್ರೀನ್ ಸಿಗ್ನಲ್ ಪಡೆಯೋದ್ರಲ್ಲಿ ಯಶಸ್ವಿಯೂ ಆದ.!
ಆದರೆ ಮೊನ್ನೆ ಮೊನ್ನೆ ಅವನು ಫೋನ್ ಮಾಡಿದಾಗ ಬಿಂದು ಅವಳ ಅಪ್ಪ-ಅಮ್ಮನ ಜೊತೆ ಮಾತಾಡ್ತಿದ್ಲು. ಅವನು ಪದೇ ಪದೇ ಕಾಲ್ ಮಾಡಿದಾಗಲೂ ಬ್ಯುಸಿ ಅಂತ ಬಂದಿದ್ದಕ್ಕೆ ಸಿಟ್ಟಾದ. ಇವಳು ವಾಪಾಸ್ಸು ಫೋನ್ ಮಾಡಿದಾಗ ರಿಸೀವ್ ಮಾಡ್ಲಿಲ್ಲ.! ಮರುದಿನ ಭೇಟಿ ಆದಾಗ ಅನುಮಾನದಿಂದಪ್ರಶ್ನೆಗಳನ್ನು ಕೇಳಲಾರಂಭಿಸಿದ ಎಲ್ಲದಕ್ಲೂ ಬಿಂದು ಕೂಲ್ ಆಗಿಯೇ ಉತ್ತರಿಸಿದ್ಲು. ಮೊಬೈಲ್ ಕೇಳಿದ…ನಂಬಿಕೆಯಿಂದ ಕೊಟ್ಟಳು. ವಾಟ್ಸಪ್ ನಲ್ಲಿ ಇಬ್ಬರು ಹುಡುಗರು ಚಾಟ್ ಮಾಡಿರೋದನ್ನು ಕಂಡು ಯಾರು ಇವರು ಅಂದ..!
ಹೇ, ಫ್ರೆಂಡ್ಸ್ ಕಣೋ ಚೇತು ಅಂದ್ಲು..! ಅವನು ಚುಚ್ಚಿ ಚುಚ್ಚಿಮಾತಾಡಿ ಗುಡ್ ಬೈ ಹೇಳಿ ಹೊರಟ..! ಮತ್ತೀಗ ಬಿಂದು ಎಷ್ಟೇ ಫೋನ್ ಮಾಡಿದ್ರೂ ಅವನು ರಿಸೀವ್ ಮಾಡ್ತಿಲ್ಲವಂತೆ…! ಬಿಂದು ಬೇಜಾರಲಿದ್ರು, ನಗುವಿನ ಮುಖವಾಡ ಹಾಕ್ಕೊಂಡು ಇದ್ದಾಳೆ…! ಅವನಿಗೆ ಒಳ್ಳೆಯದನ್ನೇ ಬಯಸ್ತಿದ್ದಾಳೆ…!