ಯಾರಲ್ಲಿ ಯಾವ ಪ್ರತಿಭೆ ಇದೆ ಅನ್ನೋದು ಯಾರಿಗೂ ಗೊತ್ತಾಗಲ್ಲ. ಅದು ಹೊರಗೆ ಬಂದಮೇಲೆಯೇ ಜಗತ್ತಿಗೆ ತಿಳಿಯೋದು. ಇದಕ್ಕೆ ಉತ್ತಮ ಉದಾಹರಣೆ ಆಶಾ ಕೆಮ್ಕಾ. ಆಶಾ ಕೆಮ್ಕಾ ಅವರು ಈಗ ವೆಸ್ಟ್ ನಾಟಿಂಗ್ ಹಂಶೈರ್ ಕಾಲೇಜಿನ ಸಿಇಒ ಹಾಗೂ ಪ್ರಾಂಶುಪಾಲರು. ಅಷ್ಟೇ ಅಲ್ಲ ವರ್ಷದ ಏಷ್ಯನ್ ಬ್ಯುಸಿನೆಸ್ ವುಮೆನ್ ಅನ್ನುವ ಹಿರಿಮೆಗೂ ಪಾತ್ರರಾಗಿದ್ದಾರೆ.
ಬಿಹಾರದ ಸಿತಾಮರ್ಹಿ ಆಶಾ ಕೆಮ್ಕಾ ಅವರ ಹುಟ್ಟೂರು. 13ನೇ ವಯಸ್ಸಿನ ತನಕ ಮಾತ್ರ ಆಶಾ ಅವರಿಗೆ ಶಾಲೆಗೆ ಹೋಗುವ ಅವಕಾಶ ಸಿಕ್ಕಿತ್ತು. ಅಂದಿನ ಕಾಲದಲ್ಲಿ ಹದಿಯರೆಯದ ಹೆಣ್ಣುಮಕ್ಕಳನ್ನು ಶಾಲೆ ಬಿಡಿಸುವುದು ಭಾರತದಲ್ಲಿ ಸಹಜವಾಗಿತ್ತು. ಅದರಲ್ಲೂ ವಯಸ್ಸಿಗೆ ಬಂದ ಮೇಲೆ ಹೆಣ್ಣು ಮಕ್ಕಳನ್ನು ಶಾಲೆಗೆ ಕಳುಹಿಸುವುದಂತೂ ಅತೀ ಕಡಿಮೆ ಆಗಿತ್ತು.
ಆಶಾ ಕೂಡ ಈ ವ್ಯವಸ್ಥೆಗೆ ಬಲಿಪಶುವಾಗಿದ್ರು. 25 ವರ್ಷ ವಯಸ್ಸಾಗುವ ಹೊತ್ತಿಗೆ ಮದುವೆಯಾಗಿ, 3 ಮಕ್ಕಳ ತಾಯಿ ಕೂಡ ಆಗಿದ್ರು. 40 ವರ್ಷದ ಹಿಂದೆ ಇಂಗ್ಲೆಂಡ್ಗೆ ಹೋದ ಆಶಾಗೆ ಅಲ್ಲಿನ ಪರಿಸರ ಹಾಗೂ ಸ್ಥಳಗಳ ಬಗ್ಗೆ ಒಂದು ಚಿಕ್ಕ ಐಡಿಯಾ ಕೂಡ ಇರಲಿಲ್ಲ. ಶಾಲೆಗೆ ಹೋಗದ ಕಾರಣ ಇಂಗ್ಲಿಷ್ ಕೂಡ ಆಶಾ ಕೆಮ್ಕಾ ಅವರಿಗೆ ಬರ್ತಾ ಇರಲ್ಲಿಲ್ಲ. ಆದ್ರೆ ಕಠಿಣ ಪರಿಶ್ರಮ ಮತ್ತು ಹೊಸತನ್ನು ಕಲಿಯುವ ಬಗ್ಗೆ ಇದ್ದ ಆಸಕ್ತಿ ಮಾತ್ರ ಕಡಿಮೆ ಆಗಿರಲಿಲ್ಲ.
ಇಂಗ್ಲೆಂಡ್ಗೆ ಕಾಲಿಟ್ಟಾಗ ಇಂಗ್ಲಿಷ್ ಬಾರದ ಕಾರಣ ಮನೆಯಿಂದ ಹೊರಗೆ ಬರೋದಕ್ಕೆ ಮುಜುಗರ ಪಡುತ್ತಿದ್ದರು. ಆದರೆ, ಸುಮ್ಮನೆ ಕೂರದೆ ಆರಂಭದ ದಿನಗಳಲ್ಲಿ ಟಿವಿ ಶೋಗಳ ಮೂಲಕ ಇಂಗ್ಲಿಷ್ ಕಲಿಯುವ ಪ್ರಯತ್ನ ಮಾಡಿದ್ರು. ಕಲಿಕೆಯ ಮೇಲಿನ ಆಸಕ್ತಿ ಆಶಾಗೆ ಕಾರ್ಡಿಫ್ ಯೂನಿವರ್ಸಿಟಿಯಿಂದ ಬ್ಯುಸಿನೆಸ್ ಡಿಗ್ರಿ ಪಡೆಯುವಂತೆ ಮಾಡಿತು. ಅದು ಅವರ ಹೊಸ ಬದುಕಿನ ಆರಂಭವಾಗಿತ್ತು.
ಎಲ್ಲಿ ನ್ಯಾಯಯುತ ಶ್ರಮವಿರುತ್ತೋ ಅಲ್ಲಿ ಪ್ರತಿಫಲ ಸಿಕ್ಕೇ ಸಿಗುತ್ತೆ ಅನ್ನೋದನ್ನ ಆಶಾ ಕೆಮ್ಕಾ ಅವರು ಸಾಬೀತು ಪಡಿಸಿ ತೋರಿಸಿದ್ರು. ಇಂಗ್ಲಿಷ್ ಭಾಷೆಯನ್ನು ಅರೆದು ಕುಡಿದ್ರು. ಇಂಗ್ಲಿಷ್ ಕಲಿತ ಮೇಲೆ ಸುಮ್ಮನೇ ಕೂರಲಿಲ್ಲ. ಕೆಲಸ ಮಾಡಬೇಕೆಂಬ ಆಸೆ ಚಿಗುರು ಹೊಡೆಯಿತು. ಇಂಗ್ಲೆಂಡಿನ ದೊಡ್ಡ ನಗರಗಳಲ್ಲಿ ಕೆಲಸಕ್ಕೆ ಅಲೆದಿದ್ದಾಯ್ತು. ಕೊನೆಗೂ ತನ್ನ ಶ್ರಮದಿಂದ ಯು.ಕೆ.ಯ ವೆಸ್ಟ್ ನಾಟಿಂಗ್ ಹಾಂ ಶೈರ್ನ ಕಾಲೇಜಿನಲ್ಲಿ ಉಪನ್ಯಾಸಕಿಯಾಗಿ ವೃತ್ತಿ ಆರಂಭಿಸಿದ್ರು.
2006ರಲ್ಲಿ ಅದೇ ಕಾಲೇಜಿನಲ್ಲಿ ಸಿಇಒ ಹಾಗೂ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿಕೊಂಡ್ರು. ಇಂಗ್ಲೆಂಡ್ನ ಉನ್ನತ ನಾಗರಿಕ ಪ್ರಶಸ್ತಿಯಾದ “ಡೇಮ್ ಕಮಾಂಡರ್ ಆಫ್ ದ ಆರ್ಡರ್ ಆಫ್ ಬ್ರಿಟಿಷ್ ಎಂಪೈರ್” ಪ್ರಶಸ್ತಿಯನ್ನು 2013ರಲ್ಲಿ ಪಡೆದುಕೊಂಡ್ರು. ಇದು ನೈಟ್ಹುಡ್ ಪ್ರಶಸ್ತಿಗೆ ಸಮನಾದ ಪ್ರಶಸ್ತಿ ಅನ್ನುವುದು ಮತ್ತೊಂದು ಹೆಮ್ಮೆಯ ವಿಚಾರ. ಈ ಪ್ರಶಸ್ತಿ ಪಡೆದ 2ನೇ ಭಾರತೀಯ ಮಹಿಳೆ ಅನ್ನೋ ಖ್ಯಾತಿ ಕೂಡ ಆಶಾ ಕೆಮ್ಕಾ ಅವರ ಪಾಲಿಗಿದೆ.
ಶಿಕ್ಷಣ ತಜ್ಞೆ ಆಶಾ ಕಳೆದ 30 ವರ್ಷಗಳಿಂದ ಇಂಗ್ಲೆಂಡ್ನಲ್ಲೇ ಕೆಲಸ ಮಾಡ್ತಿದ್ದಾರೆ. ಹಲವರ ಬದುಕಿಗೆ ಸ್ಫೂರ್ತಿಯಾಗಿದ್ದಾರೆ. 1978ರಲ್ಲಿ ಆಶಾ ಇಂಗ್ಲೆಂಡ್ಗೆ ತನ್ನ ಗಂಡನ ಜೊತೆಯಲ್ಲಿ ಕಾಲಿಟ್ಟಿದ್ದರು. ಶಾಲಾ ಶಿಕ್ಷಣವನ್ನು ಕೂಡ ಸರಿಯಾಗಿ ಪೂರೈಸುವ ಮೊದಲೇ ಆಶಾ 3 ಮಕ್ಕಳ ತಾಯಾಗಿದ್ದರು. ಇಂಗ್ಲೆಂಡ್ಗೆ ಕಾಲಿಟ್ಟಾಗ ಆಶಾಗೆ ಸರಿಯಾಗಿ ಇಂಗ್ಲಿಷ್ ಮಾತನಾಡಲು ಕೂಡ ಬರುತ್ತಿರಲಿಲ್ಲ ಅನ್ನುವುದು ಇವತ್ತು ಅಚ್ಚರಿ ಮೂಡಿಸುತ್ತೆ.
ಆಶಾ ಕೆಮ್ಕಾ ರವರು ಈಗ ಬ್ರಿಟಿಷ್ ಪೌರತ್ವ ಪಡೆದುಕೊಂಡಿದ್ದಾರೆ. ಆದ್ರೆ ಭಾರತಕ್ಕೆ ಮತ್ತು ಭಾರತದಲ್ಲಿ ಸೇವೆ ಮಾಡಲು ಸದಾ ಸಿದ್ಧರಿದ್ದಾರೆ. ಭಾರತದಲ್ಲಿ ಶೈಕ್ಷಣಿಕ ಅಭಿವೃದ್ಧಿ ಮಾಡಬೇಕು ಅನ್ನುವ ಯೋಜನೆ ಮಾಡಿಕೊಂಡಿದ್ದಾರೆ. ಅದರಲ್ಲೂ ಹೆಣ್ಣು ಮಕ್ಕಳ ಶಿಕ್ಷಣದ ಬಗ್ಗೆ ಅಪಾರ ಕಾಳಜಿಯೂ ಇದೆ. ಒಟ್ಟಿನಲ್ಲಿ ಆಶಾ ಭಾರತದ ಪಾಲಿಗೆ ನಿಜವಾಗಿಯೂ ಆಶಾಕಿರಣವಾಗಿದ್ದಾರೆ.