ಇಂದಿನಿಂದ ಮಲ್ಲೇಶ್ವರಂನಲ್ಲಿ ಕಡಲೆಕಾಯಿ ಪರಿಷೆ
ಬೆಂಗಳೂರು: ಐತಿಹಾಸಿಕ ಮಲ್ಲೇಶ್ವರಂ ಕಡಲೆಕಾಯಿ ಪರಿಷೆ ಇಂದು ಆರಂಭವಾಗುತ್ತಿದೆ. ನವೆಂಬರ್ 10ರವರೆಗೆ ಮೂರು ದಿನಗಳ ಕಾಲ ಈ ಪರಿಷೆ ನಡೆಯಲಿದೆ. ಒಂದು ವಾರದ ಬಳಿಕ, ನವೆಂಬರ್ 17ರಿಂದ 21ರವರೆಗೆ ಬಸವನಗುಡಿ ಕಡಲೆಕಾಯಿ ಪರಿಷೆಯೂ ನಡೆಯಲಿದೆ.
ಮಲ್ಲೇಶ್ವರಂನ ಕಾಡು ಮಲ್ಲಿಕಾರ್ಜುನ ಸ್ವಾಮಿ ದೇವಾಲಯದ ಮುಂಭಾಗದಲ್ಲಿ ನಡೆಯುವ ಈ ಪರಿಷೆಗೆ ಐತಿಹಾಸಿಕ ಹಿನ್ನೆಲೆಯಿದ್ದು, ಭಕ್ತರ ಜೊತೆಗೆ ಸಾವಿರಾರು ಜನರು ಭಾಗವಹಿಸುವ ನಿರೀಕ್ಷೆಯಿದೆ. ಇಂದು ಸಂಜೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅಧಿಕೃತವಾಗಿ ಪರಿಷೆ ಉದ್ಘಾಟಿಸಲಿದ್ದಾರೆ.
ಬಸವನಗುಡಿ ಕಡಲೆಕಾಯಿ ಪರಿಷೆಗಾಗಿ ಕೂಡ ಮುಜರಾಯಿ ಇಲಾಖೆ ಅಗತ್ಯ ಸಿದ್ಧತೆಗಳನ್ನು ಪೂರ್ಣಗೊಳಿಸಿದೆ. ಈ ಬಾರಿ ಎರಡೂ ಪರಿಷೆಗಳನ್ನು ಪ್ಲಾಸ್ಟಿಕ್ ಮುಕ್ತ (Plastic Free) ಉತ್ಸವಗಳೆಂದು ಘೋಷಿಸಲಾಗಿದೆ. ಆದ್ದರಿಂದ, ಸಾರ್ವಜನಿಕರು ಮನೆಯಿಂದಲೇ ತಮ್ಮದೇ ಚೀಲಗಳನ್ನು ತರಬೇಕಾಗಿದೆ.
ಸುರಕ್ಷತೆ ದೃಷ್ಟಿಯಿಂದ ಸಿಸಿ ಟಿವಿ ಕ್ಯಾಮೆರಾಗಳು, ಪೊಲೀಸ್ ಭದ್ರತೆ, ತುರ್ತು ಚಿಕಿತ್ಸಾ ವಾಹನಗಳ ನಿಯೋಜನೆ ಸೇರಿದಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಜೊತೆಗೆ ಆರೋಗ್ಯ, ಸ್ವಚ್ಛತೆ ಮತ್ತು ನೈರ್ಮಲ್ಯಕ್ಕೆ ವಿಶೇಷ ಒತ್ತು ನೀಡಲಾಗಿದೆ.






