ಇಂಧನ ಕೊರತೆ ಇಲ್ಲ, ದೇಶದಲ್ಲಿ ಲಾಕ್ ಡೌನ್ ಇಲ್ಲ: ಕೇಂದ್ರ ಸಚಿವರ ಸ್ಪಷ್ಟನೆ
ನವದೆಹಲಿ: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಉದ್ವಿಗ್ನತೆಯಿಂದ ಜಾಗತಿಕ ಮಟ್ಟದಲ್ಲಿ ಇಂಧನ ಸಮಸ್ಯೆಗಳ ಬಗ್ಗೆ ಆತಂಕ ಹೆಚ್ಚಾಗಿದೆ. ಹಲವು ದೇಶಗಳಂತೆ ಭಾರತದಲ್ಲಿಯೂ ಎಲ್ಪಿಜಿ, ಪೆಟ್ರೋಲ್ ಮತ್ತು ಡೀಸೆಲ್ ಪೂರೈಕೆ ಕುರಿತು ವದಂತಿಗಳು ಹರಡುತ್ತಿದ್ದು, ಕೆಲವೆಡೆ ಜನರು ಪೆಟ್ರೋಲ್ ಪಂಪ್ಗಳಿಗೆ ಗುಂಪುಗೂಡುವ ಘಟನೆಗಳೂ ವರದಿಯಾಗಿವೆ.
ಆದರೆ, ದೇಶದಲ್ಲಿ ಎಲ್ಪಿಜಿ ಅಥವಾ ಇಂಧನದ ಯಾವುದೇ ಕೊರತೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಸಾಕಷ್ಟು ದಾಸ್ತಾನು ಇದ್ದು, ಪೂರೈಕೆ ವ್ಯವಸ್ಥೆ ಸುಸೂತ್ರವಾಗಿ ನಡೆಯುತ್ತಿದೆ ಎಂದು ತಿಳಿಸಿದೆ.
ಇದರ ಮಧ್ಯೆ, ದೇಶದಲ್ಲಿ ಲಾಕ್ಡೌನ್ ಜಾರಿಯಾಗಬಹುದು ಎಂಬ ವದಂತಿಯೂ ವೇಗವಾಗಿ ಹರಡುತ್ತಿದೆ. ಈ ಬಗ್ಗೆ ಪ್ರತಿಕ್ರಿಯಿಸಿದ ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ, ಲಾಕ್ಡೌನ್ ಜಾರಿಗೆ ಯಾವುದೇ ಪ್ರಸ್ತಾವನೆ ಇಲ್ಲ ಎಂದು ಖಚಿತಪಡಿಸಿದ್ದಾರೆ.
ಇನ್ನೂ, ಸಂಸತ್ ಹೊರಗೆ ಮಾತನಾಡಿದ ಕೇಂದ್ರ ಸಚಿವ ಕಿರಣ್ ರಿಜಿಜು ಕೂಡ ದೇಶದಲ್ಲಿ ಲಾಕ್ಡೌನ್ ಜಾರಿಯಾಗುವುದಿಲ್ಲ ಎಂದು ಹೇಳಿದ್ದಾರೆ. ಪರಿಸ್ಥಿತಿಯನ್ನು ನರೇಂದ್ರ ಮೋದಿ ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದೂ ತಿಳಿಸಿದ್ದಾರೆ.
ಇದೇ ವೇಳೆ, ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಇದರ ಪರಿಣಾಮವಾಗಿ ಪೆಟ್ರೋಲ್ ಮೇಲಿನ ಸುಂಕವನ್ನು ಲೀಟರ್ಗೆ 13 ರೂಪಾಯಿಯಿಂದ 3 ರೂಪಾಯಿಗೆ ಇಳಿಸಲಾಗಿದೆ. ಡೀಸೆಲ್ ಮೇಲಿನ ಸುಂಕವನ್ನು ಶೂನ್ಯಕ್ಕೆ ತಗ್ಗಿಸಲಾಗಿದೆ.
ಇರಾನ್ ವಿರುದ್ಧ ಅಮೆರಿಕ-ಇಸ್ರೇಲ್ ಸಂಘರ್ಷ ಮತ್ತು ಹಾರ್ಮುಜ್ ಜಲಸಂಧಿಯ ದಿಗ್ಬಂಧನದಿಂದ ಉಂಟಾದ ಜಾಗತಿಕ ಇಂಧನ ಬಿಕ್ಕಟ್ಟಿನ ನಡುವೆಯೇ, ಬೆಲೆ ಏರಿಕೆಯ ಭೀತಿಯನ್ನು ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ.






