No menu items!
13.5 C
Munich
Wednesday, April 22, 2026

ಮಾಸಿಕ ರಜೆ ಅಧಿಸೂಚನೆಗೆ ಮಹಿಳೆಯರೇ ವಿರೋಧ: ಹೈಕೋರ್ಟ್‌ಗೆ ಅರ್ಜಿ

Must read

ಮಾಸಿಕ ರಜೆ ಅಧಿಸೂಚನೆಗೆ ಮಹಿಳೆಯರೇ ವಿರೋಧ: ಹೈಕೋರ್ಟ್‌ಗೆ ಅರ್ಜಿ

ಬೆಂಗಳೂರು: ರಾಜ್ಯದಲ್ಲಿ ವಿವಿಧ ಕಾರ್ಮಿಕ ಕಾಯ್ದೆಗಳಡಿ ನೋಂದಾಯಿತ ಉದ್ದಿಮೆಗಳಲ್ಲಿ ಕೆಲಸ ಮಾಡುವ ಮಹಿಳಾ ನೌಕರರಿಗೆ ಋತುಚಕ್ರದ ಸಮಯದಲ್ಲಿ ತಿಂಗಳಿಗೆ ಒಂದು ದಿನ ವೇತನಸಹಿತ ರಜೆ ನೀಡುವ ಕುರಿತು ರಾಜ್ಯ ಸರ್ಕಾರ ಹೊರಡಿಸಿದ ಅಧಿಸೂಚನೆಯನ್ನು ಮಹಿಳೆಯರೇ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.

ರಾಜ್ಯ ಕಾರ್ಮಿಕ ಇಲಾಖೆ 2025ರ ನವೆಂಬರ್ 20ರಂದು ಹೊರಡಿಸಿದ ಈ ಅಧಿಸೂಚನೆಯನ್ನು ವಿರೋಧಿಸಿ ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಮಹಿಳೆಯರು ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯನ್ನು ಪ್ರತಿವಾದಿಯಾಗಿ ಸೇರಿಸಲಾಗಿದೆ. ಈ ಪ್ರಕರಣ ಇನ್ನೂ ವಿಚಾರಣೆಗೆ ಬಾಕಿಯಿದೆ.

ಅರ್ಜಿದಾರರ ಪ್ರಕಾರ, ಮೇಲ್ನೋಟಕ್ಕೆ ಈ ಅಧಿಸೂಚನೆ ಉತ್ತಮವಾಗಿ ಕಾಣಿಸಿಕೊಂಡರೂ, ಇದು ಸಂವಿಧಾನದ ಪರಿಚ್ಛೇದ 14ರ ಅಡಿಯಲ್ಲಿ ನೀಡಿರುವ ಸಮಾನತೆಯ ಹಕ್ಕಿಗೆ ವಿರುದ್ಧವಾಗಿದೆ. ಈ ನಿಯಮವು ಲಿಂಗ ತಾರತಮ್ಯಕ್ಕೆ ಕಾರಣವಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ.

ಮಹಿಳೆಯರಿಗೆ ಮಾತ್ರ ವಿಶೇಷವಾಗಿ ರಜೆ ನೀಡುವುದರಿಂದ, ಮಹಿಳೆಯರು ಪುರುಷರಿಗಿಂತ ದುರ್ಬಲರು ಎಂಬ ಭಾವನೆ ಉದ್ಯೋಗದಾತರಲ್ಲಿ ಮೂಡಬಹುದು. ಇದರಿಂದ ಮಹಿಳೆಯರನ್ನು ಕಡಿಮೆ ಸಾಮರ್ಥ್ಯ ಹೊಂದಿದವರು ಅಥವಾ ಕಡಿಮೆ ವಿಶ್ವಾಸಾರ್ಹ ಉದ್ಯೋಗಿಗಳೆಂದು ಪರಿಗಣಿಸುವ ಸಾಧ್ಯತೆಯಿದೆ.

ಇದಲ್ಲದೆ, ಮಹಿಳೆಯರಿಗೆ ಮಾತ್ರ ಈ ರೀತಿಯ ವಿಶೇಷ ಸೌಲಭ್ಯ ನೀಡುವುದರಿಂದ ಕಂಪನಿಗಳು ಮಹಿಳಾ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳುವುದರಲ್ಲಿ ಅಥವಾ ಬಡ್ತಿ ನೀಡುವುದರಲ್ಲಿ ಹಿಂದೇಟು ಹಾಕುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಋತುಚಕ್ರದ ಸಮಯದಲ್ಲಿ ಕಡ್ಡಾಯವಾಗಿ ಒಂದು ದಿನ ರಜೆ ನೀಡುವುದು ಮಹಿಳೆಯರ ವೃತ್ತಿ ಜೀವನದಲ್ಲಿ ಹಿನ್ನಡೆ ಉಂಟುಮಾಡಬಹುದು. ಇದರಿಂದ ಉದ್ಯೋಗದಾತರ ಮೇಲಿನ ಹೊರೆ ಹೆಚ್ಚುವುದಲ್ಲದೆ, ಮಹಿಳೆಯರ ಕಾರ್ಯಕ್ಷಮತೆ ಬಗ್ಗೆ ತಪ್ಪು ಅಭಿಪ್ರಾಯ ಮೂಡುವ ಸಾಧ್ಯತೆ ಇದೆ ಎಂದು ಅವರು ವಾದಿಸಿದ್ದಾರೆ.

ಈ ನಿಯಮವು ಮಹಿಳೆಯರ ಸಬಲೀಕರಣಕ್ಕೆ ಅಡ್ಡಿಯಾಗಬಹುದು ಹಾಗೂ ಮಹಿಳೆಯರನ್ನು ಪರಿಣಾಮಕಾರಿಯಲ್ಲದ ನೌಕರರಂತೆ ತೋರಿಸುವ ಭೀತಿ ಇದೆ. ಇದರ ಪರಿಣಾಮವಾಗಿ ಮಹಿಳೆಯರು ಯಾವುದೇ ವೃತ್ತಿಯನ್ನು ಸ್ವತಂತ್ರವಾಗಿ ಆರಿಸುವ ಹಕ್ಕಿಗೆ ಧಕ್ಕೆಯಾಗಬಹುದು ಎಂದು ಅರ್ಜಿದಾರರು ತಿಳಿಸಿದ್ದಾರೆ.

ಅಲ್ಲದೆ, ಈ ಅಧಿಸೂಚನೆಯು ಸಹಜ ಜೈವಿಕ ಪ್ರಕ್ರಿಯೆಯನ್ನು ಕಳಂಕಿತಗೊಳಿಸುವುದರ ಜೊತೆಗೆ ಮಹಿಳೆಯರ ಗೌರವ ಮತ್ತು ಸ್ವಾಯತ್ತತೆಗೆ ಹಾನಿ ಉಂಟುಮಾಡುತ್ತದೆ ಎಂದು ಅವರು ಆಕ್ಷೇಪಿಸಿದ್ದಾರೆ.

ಸರ್ಕಾರದ ಈ ನೀತಿ ಮಹಿಳೆಯರ ವೃತ್ತಿ ಬೆಳವಣಿಗೆಗೆ, ವಿಶೇಷವಾಗಿ ನಾಯಕತ್ವ ಹುದ್ದೆಗಳ ನೇಮಕಾತಿ ಮತ್ತು ಬಡ್ತಿಗೆ ಹಾನಿಕಾರಕವಾಗಬಹುದು. ಜೊತೆಗೆ, ಈ ನೀತಿ ರೂಪಿಸುವಾಗ ಮಹಿಳೆಯರ ಅಭಿಪ್ರಾಯ ಪಡೆಯಲಾಗಿಲ್ಲ ಎಂಬುದೂ ಅರ್ಜಿದಾರರ ಮತ್ತೊಂದು ಆಕ್ಷೇಪವಾಗಿದೆ.

ಆದ್ದರಿಂದ, ಈ ಅಧಿಸೂಚನೆಯನ್ನು ರದ್ದುಪಡಿಸಬೇಕೆಂದು ಅರ್ಜಿದಾರರು ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.

- Advertisement -spot_img

More articles

- Advertisement -spot_img

Latest article