ಇಡೀ ಜಗತ್ತಿಗೆ ಅಪಾಯ ಕಾದಿದೆ ಎಂದ WHO

0
31

ಇಡೀ ಪ್ರಪಂಚವನ್ನೇ ಕೊರೊನಾ ಡೆಲ್ಟಾ ರೂಪಾಂತರ ಆವರಿಸುತ್ತಿದ್ದು, “ಜಗತ್ತು ಅತಿ ಅಪಾಯಕಾರಿ ಕಾಲದಲ್ಲಿದೆ” ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಆತಂಕ ವ್ಯಕ್ತಪಡಿಸಿದ್ದಾರೆ.
ಅತ್ಯಂತ ವೇಗವಾಗಿ ಹರಡಬಲ್ಲ ಕೊರೊನಾ ಡೆಲ್ಟಾ ರೂಪಾಂತರ ಇದೀಗ ನೂರು ದೇಶಗಳಲ್ಲಿ ಪತ್ತೆಯಾಗಿದೆ. ಭಾರತದಲ್ಲಿ ಮೊದಲು ಪತ್ತೆಯಾದ ಈ ಸೋಂಕು ಇನ್ನಷ್ಟು ರೂಪಾಂತರಗಳಿಗೆ ಕಾರಣವಾಗುತ್ತಿದ್ದು, ಹಲವು ದೇಶಗಳಲ್ಲಿ ಸೋಂಕು ಹರಡಲು ಕಾರಣವಾಗುತ್ತಿದೆ. ಈ ಬಗ್ಗೆ ಎಚ್ಚರ ವಹಿಸಲೇಬೇಕಾಗಿದೆ ಎಂದು WHO ಮಹಾನಿರ್ದೇಶಕ ಡಾ. ಟೆಡ್ರೋಸ್ ಅದನಾಂ ಗೆಬ್ರೆಯೇಸುಸ್ ಎಚ್ಚರಿಕೆ ನೀಡಿದ್ದಾರೆ. ಮುಂದೆ ಓದಿ…


ವಿಶ್ವದ ಎಲ್ಲಾ ಮುಖಂಡರಿಗೂ ಸಂದೇಶ
ಸೋಂಕು ಆವರಿಸಿರುವ ಈ ಅಪಾಯಕಾರಿ ಕಾಲದಲ್ಲಿ ಲಸಿಕೆಯೊಂದೇ ಸೋಂಕನ್ನು ಕೊನೆಗಾಣಿಸಬಹುದಾದ ಸಾಧನ ಎಂದು ಅವರು ಸಲಹೆ ನೀಡಿದ್ದು, “ವಿಶ್ವದ ಎಲ್ಲಾ ನಾಯಕರಿಗೂ ಈ ಕುರಿತು ನಾನು ಎಚ್ಚರಿಕೆ ನೀಡಿದ್ದೇನೆ. ಮುಂದಿನ ವರ್ಷದ ಒಳಗೆ ಪ್ರತಿ ದೇಶದ ಶೇ 70ರಷ್ಟು ಜನಸಂಖ್ಯೆಗೆ ಲಸಿಕೆ ನೀಡಿರಬೇಕು ಎಂದು ಹೇಳಲಾಗಿದೆ. ಲಸಿಕೆ ಲಭ್ಯತೆ, ಪೂರೈಕೆಯಲ್ಲಿ ಕೂಡ ದೇಶಗಳು ಪರಸ್ಪರ ಸಹಕಾರ ನೀಡಬೇಕು” ಎಂದು ಹೇಳಿದ್ದಾರೆ.
“ಇದುವರೆಗೂ ಜಾಗತಿಕವಾಗಿ ಮೂರು ಬಿಲಿಯನ್ ಕೊರೊನಾ ಲಸಿಕೆಗಳನ್ನು ವಿತರಿಸಲಾಗಿದೆ. ಆದರೆ ಲಸಿಕೆ ವಿಷಯದಲ್ಲಿ ಅಸಮಾನತೆ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಸರಿಯಾದ ಸಮಯಕ್ಕೆ ಈ ಸಮಸ್ಯೆ ನೀಗಿಸದೇ ಇದ್ದರೆ ಇಡೀ ವಿಶ್ವವೇ ತೊಂದರೆ ಎದುರಿಸಬೇಕಾಗುತ್ತದೆ. ಸ್ವಲ್ಪ ಎಚ್ಚರಿಕೆ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಶ್ರೀಮಂತ ರಾಷ್ಟ್ರಗಳಾದ ಅಮೆರಿಕ, ಬ್ರಿಟನ್, ಫ್ರಾನ್ಸ್‌ ಹಾಗೂ ಕೆನಡಾ ದೇಶಗಳು ಒಂದು ಬಿಲಿಯನ್ ಲಸಿಕೆ ನೀಡಲು ಒಪ್ಪಿಗೆ ಸೂಚಿಸಿವೆ. ವಿಶ್ವ ಆರೋಗ್ಯ ಸಂಸ್ಥೆ ಹನ್ನೊಂದು ಮಿಲಿಯನ್ ಲಸಿಕೆಗಳನ್ನು ವಿಶ್ವಕ್ಕೆ ನೀಡುತ್ತಿದೆ ಎಂದು ಮಾಹಿತಿ ನೀಡಿದರು.
ಕೆಲವು ದೇಶಗಳು ತಮ್ಮ ಜನಸಂಖ್ಯೆಗೆ ಲಸಿಕೆ ಹಾಕುವಲ್ಲಿ ಹಿಂದೆ ಉಳಿದರೆ ಭೂಮಿ ಮೇಲಿರುವ ಪ್ರತಿಯೊಬ್ಬರಿಗೂ ಇದು ಮಾರಕವಾಗುತ್ತದೆ. ಹೀಗಾಗಿ ಲಸಿಕೆ ನೀಡಲು ಜಾಗತಿಕ ಮಟ್ಟದಲ್ಲಿ ಪ್ರಯತ್ನ ಅತ್ಯಗತ್ಯ. ಇದೇ ಸೆಪ್ಟೆಂಬರ್‌ ಒಳಗೆ ದೇಶದ 10% ಜನರಿಗಾದರರೂ ಲಸಿಕೆ ಪೂರ್ಣಗೊಳಿಸಿರಬೇಕು. ಈ ವರ್ಷದ ಕೊನೆಯಲ್ಲಿ 40% ಜನಸಂಖ್ಯೆಗೆ ಲಸಿಕೆ ಪೂರೈಕೆಯಾಗಿರಬೇಕು. ಮುಂದಿನ ವರ್ಷದ ಮೊದಲಾರ್ಧದ ಹೊತ್ತಿಗೆ 70% ಜನಸಂಖ್ಯೆಗೆ ಲಸಿಕೆ ನಿಡಲೇಬೇಕಿದೆ ಎಂಬುದನ್ನು ಒತ್ತಿ ಹೇಳಿದರು.
“ಎಲ್ಲಾ ಕಡೆಯೂ ಸೋಂಕು ನಿವಾರಣೆಯಾಗಲೇಬೇಕು”
ಎಲ್ಲಾ ಕಡೆಯೂ ಈ ಸೋಂಕನ್ನು ನಿವಾರಿಸದ ಹೊರತು ಎಲ್ಲಿಯೂ ಈ ಸೋಂಕನ್ನು ಕೊನೆಗಾಣಿಸಲು ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
ಜುಲೈ 02ರಂದು ವಿಶ್ವದೆಲ್ಲೆಡೆ 183,515,238 ಕೊರೊನಾ ಪ್ರಕರಣಗಳಿವೆ ಹಾಗೂ ಸಾವಿನ ಸಂಖ್ಯೆ 3,947,681ಕ್ಕೇರಿದೆ. ಒಟ್ಟಾರೆ, 167,999,793 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 11,542,025 ಸಕ್ರಿಯ ಪಾಸಿಟಿವ್ ಪ್ರಕರಣಗಳಿದ್ದು, 78,559 ವಿಷಮ ಪರಿಸ್ಥಿತಿಯಲ್ಲಿರುವ ಸೋಂಕಿತರಿದ್ದಾರೆ.
ಭಾರತದಲ್ಲಿ ಶನಿವಾರ 44,111 ಹೊಸ ಕೊರೊನಾ ಪ್ರಕರಣ ದಾಖಲಾಗಿವೆ.

LEAVE A REPLY

Please enter your comment!
Please enter your name here