ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯಲ್ಲಿ ಭಾರತ ತಂಡ ಈಗಾಗಲೆ ಎರಡು ಪಂದ್ಯವನ್ನು ಗೆದ್ದಿದ್ದು ಇಂದು 3ನೇ ಪಂದ್ಯ ರಾಂಚಿಯಲ್ಲಿ ಆರಂಭವಾಗಿದೆ, ಮೊದಲು ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ರಾಂಚಿಯಲ್ಲಿ ಮೂರನೇ ಏಕದಿನ ಪಂದ್ಯವನ್ನ ಆಡುತ್ತಿರುವ ಟೀಂ ಇಂಡಿಯಾ ಆಟಗಾರರು ಈ ಪಂದ್ಯದಲ್ಲಿ ವಿಶೇಷ ಆರ್ಮಿ ಕ್ಯಾಪ್ ಧರಿಸಿ ಕಣಕ್ಕೆ ಇಳಿದಿದ್ದಾರೆ. ಈ ವಿಶೇಷ ಆರ್ಮಿ ಕ್ಯಾಪ್ ಧರಿಸಿ ಇಂದು ಕಣಕ್ಕೆ ಇಳಿಯಲು ಒಂದು ಬಲವಾದ ಕಾರಣ ಇದೆ.
ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮೃತಪಟ್ಟ ಸೈನಿಕರಿಗೆ ಗೌರವ ನೀಡಲು ವಿಶೇಷವಾಗಿ ಭಾರತದ ಸೇನೆಗೆ ಬೆಂಬಲ ಸೂಚಿಸುವ ಉದ್ದೇಶದಿಂದ ಈ ಆರ್ಮಿ ಕ್ಯಾಫ್ ಧರಿಸಲಾಗಿದೆ. ಪಂದ್ಯದಲ್ಲಿ ವಿಶೇಷ ಕ್ಯಾಪ್ ಧರಿಸಿ ಆಡುವುದು ಮಾತ್ರವಲ್ಲದೇ ಯೋಧರ ಮಕ್ಕಳ ಶಿಕ್ಷಣ, ಕುಟುಂಬಗಳ ನೆರವಿಗೆ ನೆರವಾಗುವ ದೃಷ್ಟಿಯಿಂದ ರಾಷ್ಟ್ರೀಯ ರಕ್ಷಣಾ ನಿಧಿಗೆ ಹಣ ಸಂಗ್ರಹಿಸಲು ಕೂಡ ಟೀಂ ಇಂಡಿಯಾ ಮುಂದಾಗಿದೆ.
ಇದಕ್ಕಶಾಗಿ ರಾಂಚಿಯಲ್ಲಿ ನಡೆಯುತ್ತಿರುವ ಇಂದಿನ ಪಂದ್ಯದ ಸಂಭಾವನೆಯನ್ನು ಟೀಂ ಇಂಡಿಯಾ ಎಲ್ಲಾ ಸಿಬ್ಬಂದಿ, ಆಟಗಾರರು ಕೂಡ ರಾಷ್ಟ್ರೀಯ ರಕ್ಷಣಾ ನಿಧಿಗೆ ನೀಡಲಿದ್ದಾರೆ. ಅಲ್ಲದೇ ದೇಶದ ನಾಗರಿಕರು ಕೂಡ ಸೈನಿಕರಿಗೆ ನೆರವು ನೀಡಿ ಎಂದು ಇಂದಿನ ಪಂದ್ಯ ಆರಂಭಕ್ಕೂ ಮುನ್ನ ಕೊಹ್ಲಿ ಮನವಿಯನ್ನ ಮಾಡಿದ್ದಾರೆ.
ಪಂದ್ಯದ ಆರಂಭಕ್ಕೂ ಮುನ್ನ ಟೀಂ ಇಂಡಿಯಾ ಮಾಜಿ ನಾಯಕ ಎಂಎಸ್ ಧೋನಿ ತಂಡದ ಎಲ್ಲಾ ಆಟಗಾರರಿಗೆ ಕ್ಯಾಪ್ ನೀಡಿದರು. ಈಗಾಗಲೇ ಸರಣಿಯಲ್ಲಿ 2-0 ಅಂತರದಲ್ಲಿ ಮುನ್ನಡೆ ಪಡೆದಿರುವ ಟೀಂ ಇಂಡಿಯಾ ರಾಂಚಿ ಪಂದ್ಯವನ್ನು ಗೆಲ್ಲುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ. ಇದೀಗ ಟೀಂ ಇಂಡಿಯಾದ ಈ ಕಳಕಳಿಗೆ ಎಲ್ಲೆಡೆ ಪ್ರಶಂಸೆಗಳು ಲಭಿಸುತ್ತಿವೆ.