ವಿಮಾನ ನಿಲ್ದಾಣದ ರನ್‌ವೇಗೆ ಏಕಾ ಏಕಿ ನುಗ್ಗಿದ ವ್ಯಕ್ತಿ ಕೆಲ ಕಾಲ ಆತಂಕ ಸೃಷ್ಠಿಸಿದ ಘಟನೆ ಮಂಗಳೂರು ವಿಮಾನ ನಿಲ್ದಾಣದಲ್ಲಿ ನಡೆದಿದೆ. ವ್ಯಕ್ತಿಯನ್ನು ಸಿಐಎಸ್ಎಫ್ ಸಿಬ್ಬಂದಿ ವಶಕ್ಕೆ ಪಡೆದುಕೊಂಡಿದ್ದಾರೆ.
ಜುಲೈ 5 ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದೆ. ಭದ್ರತಾ ಸಿಬ್ಬಂದಿ ವಿಚಾರಣೆ ವೇಳೆ ವ್ಯಕ್ತಿ ಲಾರಿ ಕ್ಲೀನರ್ ಎಂದು ತಿಳಿದು ಬಂದಿದೆ. ಪಶ್ಚಿಮ ಬಂಗಾಳ ಮೂಲದ ಮುರ್ಶೀದಾಬಾದ್ ನಿವಾಸಿ ರಾಕೇಶ್ ದಾರಿ ತಪ್ಪಿ ರನ್‌ವೇ ಒಳಗಡೆ ಪ್ರವೇಶಿಸಿದ್ದಾನೆ.
ರನ್ ವೇ ಸಮೀಪದ ಪ್ರದೇಶವೊಂದರಲ್ಲಿ ಕಾಮಗಾರಿಯ ಲಾರಿ ಕ್ಲೀನರ್ ಆಗಿರುವ ರಾಕೇಶ್‌ನನ್ನು ಲಾರಿಯಲ್ಲಿ ಚಾಲಕ ಬಿಟ್ಟು ಹೋಗಿದ್ದ. ರಾತ್ರಿ ಸಮಯದಲ್ಲಿ ಒಬ್ಬನೇ ಇರೋಕೆ ಭಯಗೊಂಡ ರಾಕೇಶ್ ಡ್ರೈವರ್‌ನನ್ನು ಹುಡುಕುತ್ತಾ ರನ್ ವೇ ಒಳಗೆ ಪ್ರವೇಶಿಸಿದ್ದಾನೆ.
ರನ್ ವೇ ಕೌಪೌಂಡ್ ಅಂತಾ ಗೊತ್ತಿಲ್ಲದೇ ಒಳಗೆ ಪ್ರವೇಶಿಸಿದ್ದಾನೆ. ಆದರೆ ಇದರ ಹಿಂದೆ ಭಧ್ರತಾ ಸಿಬ್ಬಂದಿಗಳ ನಿರ್ಲಕ್ಷ್ಯವಿರುವ ಬಗ್ಗೆಯೂ ಮಾಹಿತಿ ಲಭ್ಯವಾಗಿದೆ. ಕೂಡಲೇ ರಾಕೇಶ್‌ನನ್ನು ವಶಕ್ಕೆ ಪಡೆದ CISF ಸಿಬ್ಬಂದಿ, ವಿಚಾರಣೆ ನಡೆಸಿ ಬಜಪೆ ಪೊಲೀಸರಿಗೆ ಒಪ್ಪಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಆದಿತ್ಯರಾವ್ ಎಂಬ ಆರೋಪಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಸ್ಫೋಟಕ ಇಟ್ಟಿದ್ದ. ಒಂದು ದಿನದ ಬಳಿಕ ಬೆಂಗಳೂರಿನಲ್ಲಿ ಪೊಲೀಸರಿಗೆ ಆರೋಪಿ ಶರಣಾಗಿದ್ದ.
ಕರ್ನಾಟಕದ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಮಂಗಳೂರು ವಿಮಾನ ನಿಲ್ದಾಣವೂ ಒಂದಾಗಿದೆ. ಅದಾನಿ ಕಂಪನಿಗೆ ವಿಮಾನ ನಿಲ್ದಾಣವನ್ನು ಗುತ್ತಿಗೆ ನೀಡಲಾಗಿದೆ. ಸಿಐಎಸ್‌ಎಫ್ ಪಡೆ ನಿಲ್ದಾಣದ ಭದ್ರತೆಯನ್ನು ನೋಡಿಕೊಳ್ಳುತ್ತದೆ.