ಇನ್ನೂ ಕೆಲ ದಿನ ಈ ಪ್ರದೇಶಗಳಲ್ಲಿ ಭಾರೀ ಮಳೆ

0
31

ವಾಯುವ್ಯ ಭಾರತದ ಕೆಲವು ರಾಜ್ಯಗಳಲ್ಲಿ ಬುಧವಾರದಿಂದ ನೈಋತ್ಯ ಮುಂಗಾರು ಅಂತ್ಯಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಇನ್ನೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವ ಸಾಧ್ಯತೆಯಿರುವುದಾಗಿ ತಿಳಿಸಿದೆ.

 

ಇದೇ ಅವಧಿಯಲ್ಲಿ ನೈಋತ್ಯ ಬಂಗಾಳ ಕೊಲ್ಲಿಯಲ್ಲಿನ ಚಂಡಮಾರುತ ಪರಿಚಲನೆಯು ದಕ್ಷಿಣದ ಕಡೆಗೆ ಇರಲಿದೆ. ಹೀಗಾಗಿ ಈಶಾನ್ಯ ಪ್ರದೇಶಗಳಲ್ಲಿ ಮಳೆ ಕಡಿಮೆಯಾಗಲಿದ್ದು, ದಕ್ಷಿಣದ ರಾಜ್ಯಗಳೆಡೆಗೆ ಮಾರುತಗಳು ಚಲಿಸಲಿವೆ ಎಂದು ಹೇಳಿದೆ.

ಈ ಹವಾಮಾನ ವ್ಯವಸ್ಥೆಗಳ ಪ್ರಭಾವದಡಿಯಲ್ಲಿ, ತಮಿಳುನಾಡು ಹಾಗೂ ಕೇರಳದಲ್ಲಿ ಅಕ್ಟೋಬರ್ 6ರಂದು ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರ್ನಾಟಕದಲ್ಲಿ ಅಕ್ಟೋಬರ್ 5ರಿಂದ 7ರವರೆಗೂ ಅಧಿಕ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಕರ್ನಾಟಕದ ಉತ್ತರ ಒಳನಾಡು ಹಾಗೂ ಕರಾವಳಿ ಪ್ರದೇಶಗಳಲ್ಲಿ ಬುಧವಾರ ಅಧಿಕ ಮಳೆಯಾಗುವುದಾಗಿ ಇಲಾಖೆ ಮುನ್ಸೂಚನೆ ನೀಡಿದೆ.

 

ಚಂಡಮಾರುತದ ಪರಿಚಲನೆಯು ಪಶ್ಚಿಮ ಬಂಗಾಳ ಹಾಗೂ ನೆರೆಹೊರೆಯಲ್ಲಿದ್ದು, ಸಮುದ್ರ ಮಟ್ಟಕ್ಕಿಂತ 4.5 ಕಿ.ಮೀವರೆಗೆ ವಿಸ್ತರಿಸಿದೆ. ಅದರ ಪ್ರಭಾವದಡಿಯಲ್ಲಿ ಅಸ್ಸಾಂ, ತ್ರಿಪುರಾದಲ್ಲಿ ಅಕ್ಟೋಬರ್ 6ರಂದು ವ್ಯಾಪಕ ಮಳೆಯಾಗಲಿದೆ ಎಂದು ತಿಳಿಸಿದೆ.

 

ಇದೀಗ ಮುಂಗಾರು ಅಂತ್ಯವಾಗುತ್ತಿದ್ದು, ಅಕ್ಟೋಬರ್ 9ರವರೆಗೂ ಕೆಲವು ರಾಜ್ಯಗಳಲ್ಲಿ ಮಳೆ ಮುಂದುವರೆಯುವುದಾಗಿ ತಿಳಿಸಿದೆ. ಕರ್ನಾಟಕದ ದಕ್ಷಿಣ ಒಳನಾಡು, ಕೇರಳ, ತಮಿಳುನಾಡು, ಪುದುಚೇರಿ, ಕಾರೈಕಲ್, ಮಧ್ಯ ಮಹಾರಾಷ್ಟ್ರ, ದಕ್ಷಿಣ ಕೊಂಕಣ, ಗೋವಾ, ದಕ್ಷಿಣ ಅಸ್ಸಾಂ, ಮೇಘಾಲಯ, ತ್ರಿಪುರ ಹಾಗೂ ದಕ್ಷಿಣ ಭಾಗದ ಕೆಲವು ಸ್ಥಳಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿರುವುದಾಗಿ ತಿಳಿಸಿದೆ. ಆಂಧ್ರದ ಕರಾವಳಿ, ರಾಯಲಸೀಮೆ ಹಾಗೂ ಕರ್ನಾಟಕ ಕರಾವಳಿಯಲ್ಲಿ ಅಧಿಕ ಮಳೆ ಮುನ್ಸೂಚನೆ ನೀಡಲಾಗಿದೆ.

ಉತ್ತರಾಖಂಡ, ಪಂಜಾಬ್, ಹರಿಯಾಣ, ಪೂರ್ವ ಉತ್ತರ ಪ್ರದೇಶ, ವಾಯವ್ಯ ರಾಜಸ್ಥಾನ, ದಕ್ಷಿಣ ಮಧ್ಯ ಪ್ರದೇಶ, ವಿದರ್ಭ, ಛತ್ತೀಸ್‌ಗಡ, ಬಿಹಾರ, ಜಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ, ಸಿಕ್ಕಿಂ, ಅಂಡಮಾನ್ ನಿಕೋಬಾರ್, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ, ತ್ರಿಪುರಾದಲ್ಲಿ ಗುಡುಗು ಮಿಂಚುಸಹಿತ ಮಳೆಯಾಗುವುದಾಗಿ ತಿಳಿಸಿದೆ.

 

ನೈಋತ್ಯ ಬಂಗಾಳಕೊಲ್ಲಿ ಹಾಗೂ ತಮಿಳುನಾಡು ಕರಾವಳಿ ತೀರಗಳಲ್ಲಿ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ರವಾನಿಸಲಾಗಿದೆ.

LEAVE A REPLY

Please enter your comment!
Please enter your name here