ಇವರು ಡಾಕ್ಟರ್ ಅಲ್ಲ ಟೀ ಸ್ಪೆಷಲಿಸ್ಟ್…! ಆದ್ರೆ ಕೆಮ್ಮು, ನೆಗಡಿ, ಜ್ವರಕ್ಕೆ ಕೊಡ್ತಾರೆ ಔಷಧ…!
ನಿಮಗೆ ಚಳಿ, ಶೀತ, ನೆಗಡಿ, ಸಣ್ಣಪುಟ್ಟ ಮೈ ಕೈ ನೋವು, ಜ್ವರ ಇದೆಯಾ..? ಇದಕ್ಕೆ ಇಲ್ಲಿ ಸಿಗುತ್ತೆ ನಿಮಗೆ ಇಷ್ಟವಾದ ಔಷಧ..!
ಏನ್ ಹೇಳ್ತಿದ್ದೀಯಾ..? ಔಷಧ ಇಷ್ಟವಾಗುವುದು ಉಂಟೇ? ಎನ್ನೋದು ನಿಮ್ಮ ಪ್ರಶ್ನೆ ಅಲ್ವೇ..? ಖಂಡಿತಾ ಇವರು ಕೊಡೋ ಔಷಧ ನಿಮಗೆ ಇಷ್ಟವಾಗುತ್ತೆ..! ಮತ್ತೆ ಮತ್ತೆ ಇವರು ಇದ್ದಲ್ಲಿಗೆ ಹೋಗಿ ಈ ಔಷಧ ತಗೋತೀರಾ..!
ಖಂಡಿತಾ ಸುಳ್ಳು ಹೇಳ್ತಿಲ್ಲ..! ಕಾಗೆ ಹಾರಿಸ್ತಿಲ್ಲ..! ಇಲ್ಲಿ ನಿಮಗೆ ಮಾಮುಲಿ ಶೀತ, ಕೆಮ್ಮು, ಜ್ವರಕ್ಕೆ ಔಷಧ ಸಿಕ್ಕೇ ಸಿಗುತ್ತೆ..! ಹಾಗಂತ ಇದು ಜನಪ್ರಿಯ ಆಸ್ಪತ್ರೆಯಲ್ಲ..! ಕ್ಲಿನಿಕ್ ಅಲ್ಲ..! ಇಲ್ಲಿ ನಿಮಗೆ ಔಷಧ ಕೊಡೋ ಡಾಕ್ಟರ್ ಡಾಕ್ಟರೇ ಅಲ್ಲ..! ಇವರೊಬ್ಬ ಟೀ ಸ್ಪೆಷಲಿಸ್ಟ್..! ಸಾಮಾನ್ಯವಾಗಿ ಬರೋ ಸಣ್ಣಪುಟ್ಟ ಜ್ವರ, ಶೀತಕ್ಕೆ ಇವರೇ ಔಷಧ ಕೊಡ್ತಾರೆ..!
ಇವರು ತುಮಕೂರಿನ ಉಮೇಶ್ ಕುಮಾರ್. ನಗರದ ಟೌನ್‍ಹಾಲ್ ವೃತ್ತದಬಳಿ, ಮಹಾನಗರ ಪಾಲಿಕೆಗೆ ಹೊಂದಿಕೊಂಡಿರುವಂತೆ ಇವರದ್ದೊಂದು ಪುಟ್ಟ ಟೀ ಸ್ಟಾಲ್ ಇದೆ. ಹೆಸರು ಶ್ರೀ ಶೆಟ್ಟಿಹಳ್ಳಿ ಟೀ ಸ್ಟಾಲ್. ಇದು ರಸ್ತೆಯ ಬದಿಯ ಇತರೆ ಟೀ ಸ್ಟಾಲ್‍ಗಳಂತೆ ತೆರೆದ ಟೀ ಸ್ಟಾಲ್..! ಟಾರ್ಪಲ್ ಕಟ್ಟಿ, ಟೇಬಲ್ ಮೇಲೆ ಸ್ಟೌವ್ ಇಟ್ಟಿರುವ ಸಣ್ಣ ಟೀ ಸ್ಟಾಲ್..!
ಇಲ್ಲಿ 50ಕ್ಕೂ ಹೆಚ್ಚು ಬಗೆಯ ಬಿಸಿಬಿಸಿ ಟೀ, ಕಾಫಿ, ಕಶಾಯ, ಹಾಲು ಸಿಗುತ್ತೆ..! ಮಾಮೂಲಿ ಟೀ, ಕಾಫಿ, ಹಾಲಿಗಿಂತ ಸಿಕ್ಕಾಪಟ್ಟೆ ಟೇಸ್ಟಿ ಆಗಿರುತ್ತೆ..! ಜೊತೆಗೆ ಹೆಲ್ತಿ ಕೂಡ..! ಯಾಕಂದ್ರೆ ಇವರು ಎಲ್ಲರಂತೆ ಟೀ, ಕಾಫಿ ಮಾಡಲ್ಲ..! ಗಿಡಮೂಲಿಕೆಗಳನ್ನು ಹಾಕಿ ರುಚಿ ರುಚಿ, ಬಿಸಿ ಬಿಸಿ ಟೀ, ಕಾಫಿ ಮಾಡಿಕೊಡ್ತಾರೆ..! ನೀವು ನಿತ್ಯ ಇವರ ಗ್ರಾಹಕರು ಅಂತಾದ್ರೆ ದಿನಕ್ಕೊಂದು ರೀತಿಯ ಟೀ, ಕಾಫಿ, ಹಾಲಿನ ರುಚಿ ನೋಡುವ ಸೌಭಾಗ್ಯ ನಿಮ್ಮದು..!
ಉಮೇಶ್ ಕುಮಾರ್ ಎಂದರೆ ಅಥವಾ ಶ್ರೀ ಶೆಟ್ಟಿಹಳ್ಳಿ ಟೀ ಸ್ಟಾಲ್ ಅಂದ್ರೆ ತುಮಕೂರಲ್ಲಿ ಯಾರಿಗೂ ಗೊತ್ತಾಗಲ್ಲ..! ಶೆಟ್ಟಾಳಯ್ಯ, ಶೆಟ್ಟಾಳಯ್ಯ ಟೀ ಸ್ಟಾಲ್ ಅಂದ್ರೆ ಮಾತ್ರ ಹೆಚ್ಚು ಮಂದಿಗೆ ಗೊತ್ತಾಗೋದು..! ಉಮೇಶ್ ಅವರು ಶೆಟ್ಟಾಳಯ್ಯ ಎಂದೇ ಪ್ರಸಿದ್ಧರಾಗಿದ್ದಾರೆ. ರಾಜಕಾರಣಿಗಳು, ಸಿನಿಮಾ ನಟರು ಕೂಡ ಶೆಟ್ಟಾಳಯ್ಯ ಅವರ ಟೀ, ಕಾಫಿಗೆ ಫಿದಾ ಆಗಿದ್ದಾರೆ..! ಪ್ರವಾಸಿ ಮಂದಿರ ಸೇರಿದಂತೆ ನಾನಾ ಕಡೆಗಳಲ್ಲಿ ತಂಗುವ ಕೆಲವು ಗಣ್ಯರು ಶೆಟ್ಟಾಳಯ್ಯ ಅವರ ಟೀ ತಗೊಂಡು ಬನ್ರಿ ಅಂತ ತಮ್ಮವರಿಗೆ ಹೇಳಿ ಕಳಿಸ್ತಾರೆ..!
ನೀವು ಶೆಟ್ಟಾಳಯ್ಯ ಅವರ ಬಳಿ ಹೋಗಿ, ‘ಯಾಕೋ ಮೈ-ಕೈ ನೋವು ಕಣ್ರೀ..! ಶೀತ ಆಗಿದೆ..! ಜ್ವರ ಬರೋ ಚಾನ್ಸ್ ಇದೆ ಅಂತ ಅನಿಸುತ್ತೆ’ ಅಂತ ಹಾಗೇಸುಮ್ಮನೇ ಮಾತಾಡಿದ್ರೆ ಸಾಕು..! 5-10ನಿಮಿಷದಲ್ಲಿ ನಿಮಗೆ ಒಂದೊಳ್ಳೆ ಕಶಾಯ ರೆಡಿ ಮಾಡಿಕೊಡ್ತಾರೆ..! ಟೀ ಕೇಳಿದ್ದ ನೀವು, ಇದು ಏನ್ರೀ, ಟೀ ಕೇಳಿದ್ನಲ್ಲ ಅಂದ್ರೆ…ಟೀ ಮತ್ತೆ ಕುಡಿಯಿರಿ..! ಈಗ ಇದನ್ನು ಕುಡಿದು ನೋಡಿ ಅಂತ ಹೇಳ್ತಾರೆ..! ಇದನ್ನು ಕುಡಿದ ನೀವು, ‘ರೀ ಇನ್ನೊಂದು ಲೋಟ ಕೊಡ್ರಿ’ ಅಂತ ಕೇಳೋದ್ರಲ್ಲಿ ಆಶ್ಚರ್ಯವೇನಿಲ್ಲ..! ಇಲ್ಲಿನ ಟೀ ಕಾಫಿ, ಹಾಲಿನಿಂದ ರೀಫ್ರೆಶ್ಮೆಂಟ್ ಸಿಗೋ ಜೊತೆಗೆ ತಲೆನೋವು, ಶೀತ, ನೆಗಡಿ ಕಡಿಮೆ ಆಗುತ್ತೆ ಅನ್ನೋದು ಖಾಯಂ ಗ್ರಾಹಕರ ಅಭಿಪ್ರಾಯ.
ಏನೆಲ್ಲಾ ವೆರೈಟಿ ಇದೆ ಗೊತ್ತಾ? : ಹಾಲಿನ ಟೀ, ನೀರಿನ ಟೀ, ಶುಂಠಿ, ಪುದೀನ, ಲವಂಗ, ಬಜೆ, ತುಳಸಿ, ನಿಂಬೆ, ಪ್ಲೈನ್, ಬೆಲ್ಲದ, ಸಕ್ಕರೆ, ಲೆಸ್, ಆರ್ಯುವೇದಿಕ್, ಅಶ್ವಗಂಧ, ಅದಿಮಧುರಂ, ಬಾದಾಮಿ, ಮೆಣಸಿನ, ಜೀರಿಗೆ, ದ್ರಾಕ್ಷಿ, ಗೋಡಂಬಿ, ದನಿಯಾ, ಡೈಜನಸ್, ಸ್ಲಿಮ್, 3ರೋಸ್, ತಾಜ್‍ಮಹಲ್, ಗಸಗಸೆ, ಕೊಬ್ಬರಿ, ಸ್ಟ್ರಾಬೆರಿ, ಪಿಸ್ತಾ, ಬಾದಾಮಿ, ಕಸ್ತೂರಿ ಗ್ರೀನ್, ಲಿಪ್ ಟಾನ್ ಗ್ರೀನ್ ಟೀ, ರೋಸ್ಮಿಲ್ಕ್, ಬಾದಾಮಿ, ಮಸಾಲ, ಗಸಗಸೆ, ಹಾರ್ಲಿಕ್ಸ್, ಜೂನಿಯರ್ ಹಾರ್ಲಿಕ್ಸ್, ಶುಂಠಿ ಹಾಲು, ಜೀರಿಗೆ ಹಾಲು, ಬೂಸ್ಟ್, ಪುದಿನ ಮಿಲ್ಕ್ ಮಿಕ್ಸ್, ರಾಗಿ ಮಾಲ್ಟ್, ಮಿಲನ ಮಿಲ್ಕ್ ಮಿಕ್ಸ್, ಶುಂಠಿ ಮತ್ತು ಜೀರಿಗೆ ಕಶಾಯ, ಆರ್ಯುವೇದಿಕ್ ಕಶಾಯ, ಶೆಟ್ಟಿಹಳ್ಳಿ ಶುಂಠಿ ಕಾಫಿ, ಫಿಲ್ಟರ್ ಕಾಫಿ ಮತ್ತು ಬ್ರೂ ಕಾಫಿ ಸೇರಿದಂತೆ ಅನೇಕ ಬಗೆಯ ಬಿಸಿಬಿಸಿ ಪಾನೀಯಗಳು ಸಿಗುತ್ತೆ.
ನೀವು ತುಮಕೂರಿಗೆ ಹೋದಾಗ ಒಮ್ಮೆ ಶೆಟ್ಟಾಳಯ್ಯ ಅವರ ಟೀ, ಕಾಫಿ, ಕಶಾಯ, ಹಾಲಿನ ರುಚಿ ನೋಡಿದ್ರೆ? ಮತ್ತೆ ತುಮಕೂರು ಕಡೆ ಹೋದಾಗ, ತುಮಕೂರು ಮಾರ್ಗದಲ್ಲಿ ಪಯಣ ಬೆಳಸಿದಾಗ ಖಂಡಿತಾ ಶೆಟ್ಟಾಳಯ್ಯ ಅವರ ಟೀ ಸ್ಟಾಲ್ ಕಡೆಗೆ ಹೋಗ್ತೀರಿ…!