ತಿರುವನಂತಪುರಂ : ದೇಶದಾದ್ಯಂತ ರಾತ್ರಿ ವೇಳೆಯಲ್ಲಿ ಒಂಟಿ ಹೆಂಗಸರು, ಹೆಣ್ಣುಮಕ್ಕಳು ತಿರುಗಾಡುವುದು ಅಪಾಯಕಾರಿಯಾಗಿರುವ ಪ್ರಸ್ತುತ ದಿನಗಳಲ್ಲಿ ಬಸ್ಸಿನಲ್ಲಿ ತಡರಾತ್ರಿಯಲ್ಲಿ ಬಂದ ವಿದ್ಯಾರ್ಥಿನಿಯೊಬ್ಬಳ ಸುರಕ್ಷತೆಗಾಗಿ ನಿಲ್ದಾಣದಲ್ಲಿ ಕಾದು ಕುಳಿತ ಕಂಡಕ್ಟರ್ ಮತ್ತು ಡ್ರೈವರಿಗೆ ಇದೀಗ ಮೆಚ್ಚುಗೆಯ ಮಹಾಪೂರವೇ ಹರಿದು ಬಂದಿದೆ.
ಕೇರಳ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಡಕ್ಟರ್ ಪಿ ಶಾಜುದ್ದೀನ್ ಮತ್ತು ಡ್ರೈವರ್ ಡೆನ್ನಿಸ್ ಕ್ಸೇವಿಯರ್ ಶ್ಲಾಘನೀಯ ಕೆಲಸ ಮಾಡಿದವರು.
ಬೆಂಗಳೂರಿನ ಕ್ರೈಸ್ಟ್ ಕಾಲೇಜಿನಲ್ಲಿ ಎಂಫಿಲ್ ಓದುತ್ತಿರುವ ಕೇರಳದ ಕಣ್ಣೂರಿನ ವಿದ್ಯಾರ್ಥಿ ಎಲ್ಸಿನಾ ತನ್ನ ಸಂಶೋಧನೆ ನಿಮಿತ್ತ ಕಳೆದ ಮಂಗಳವಾರ ಸರಕಾರಿ ಬಸ್ಸಿನಲ್ಲಿ ಕೊಟ್ಟಾಯಂ ಜಿಲ್ಲೆಯ ಪೊಡಿಮಟ್ಟಂಗೆ ಹೋಗಿದ್ದಾಳೆ. ಪೊಡಿಮಟ್ಟಂ ಹತ್ತಿರದ ಕಂಜರಪಲ್ಲಿ ಬಸ್ ನಿಲ್ದಾಣಕ್ಕೆ ಬಂದಾಗ ರಾತ್ರಿ 11 ಗಂಟೆಯಾಗಿತ್ತು. ಅಲ್ಲದೆ ಅದೇ ದಿನ ವ್ಯಾಪಾರಿಗಳು ಪ್ರತಿಭಟನೆ ನಡೆಸಿದ್ದರಿಂದ ನಿಲ್ದಾಣದ ಬಳಿಯಿದ್ದ ಎಲ್ಲ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು.
ಎಲ್ಸಿನಾ ಒಬ್ಬಳೇ ಆ ನಿಲ್ದಾಣದಲ್ಲಿ ಇಳಿಯಬೇಕಿತ್ತು. ಜನರೇ ಇಲ್ಲದ ಸ್ಥಳದಲ್ಲಿ ಒಬ್ಬಳೇ ಹೆಣ್ಣುಮಗಳನ್ನು ಕೆಳಗಿಳಿಸಬಾರದು ಎಂದು ಡ್ರೈವರ್ ಮತ್ತು ಕಂಡಕ್ಟರ್ ಬಸ್ ನಿಲ್ಲಿಸಿ ಆಕೆಯ ಮನೆ ಮಂದಿ ಬರುವವರೆಗೂ ಕಾದು ನಿಂತಿದ್ದರು. ಅಷ್ಟೇ ಅಲ್ಲ, ಬಸ್ಸಲ್ಲಿ ಎಲ್ಲಾ ಪ್ರಯಾಣಿಕರೂ ಇದಕ್ಕೆ ಸಹಕಾರ ನೀಡಿದ್ದಾರೆ. ಬಳಿಕ ಎಲ್ಸಿನಾ ಸಂಬಂಧಿಕರು ಬಂದು ಆಕೆಯನ್ನು ಕರೆದೊಯ್ದರು.
ಪಿ ಶಜುದ್ದೀನ್ ಮತ್ತು ಡೆನ್ನಿಸ್ ಕ್ಸೇವಿಯರ್ ಕಾಳಜಿಗೆ ಮತ್ತು ಸಹ ಪ್ರಯಾಣಿಕರ ತಾಳ್ಮೆಗೆ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಇದರ ಜೊತೆಗೆ ಕೊಟ್ಟಾಯಂ ಜಿಲ್ಲೆಯ ಪುಂಜಾರ್ ತಾಲೂಕಿನ ಶಾಸಕರಾದ ಪಿ ಸಿ ಜಾರ್ಜ್ ಅವರು ಶಜುದ್ದೀನ್ ಮತ್ತು ಕ್ಸೇವಿಯರ್ ಅವರನ್ನು ಅಭಿನಂದಿಸಿದ್ದಾರೆ.