ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಆಡಳಿತ ಮತ್ತೊಮ್ಮೆ ವಿಚಿತ್ರ ನಿರ್ಧಾರದಿಂದ ಸುದ್ದಿಯಲ್ಲಿದೆ. ದೇಶದ ಮಾಜಿ ನಾಯಕ ಕಿಮ್ ಜಾಂಗ್ -ಇಲ್ ಅವರ 10ನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ 11 ದಿನ ಶೋಕಾಚರಣೆಗೆ ಕರೆ ನೀಡಲಾಗಿದ್ದು, ಈ ಅವಧಿಯಲ್ಲಿ ನಾಗರಿಕರು ಶಾಪಿಂಗ್ ಮಾಡುವುದು, ಮದ್ಯ ಸೇವಿಸುವುದು, ಹುಟ್ಟುಹಬ್ಬ ಆಚರಿಸುವುದನ್ನು ನಿರ್ಬಂಧಿಸಲಾಗಿದೆ.
ಇಷ್ಟೇ ಅಲ್ಲ, ಬಾಯ್ತುಂಬ ನಗುವುದಕ್ಕೆ ಅಥವಾ ಕುಟುಂಬದವರು ಸಾವನ್ನಪ್ಪಿದರೆ ಅಳುವುದಕ್ಕೂ ನಿಷೇಧ ಹೇರಲಾಗಿದೆ. ಉತ್ತರ ಕೊರಿಯಾದ ಈಶಾನ್ಯ ಭಾಗದ ಗಡಿ ನಗರ ಸಿನುಯಿಜು ಎಂಬಲ್ಲಿ ಈ ಆದೇಶ ಜಾರಿಗೆ ಬಂದಿದೆ. ಬಿಡುವಿನ ವೇಳೆ ವಿನೋದ ಕಾರ್ಯಕ್ರಮ ನಡೆಸುವುದು ಹಾಗೂ ದಿನಸಿ ಅಂಗಡಿಗಳನ್ನು ಮುಚ್ಚುವಂತೆಯೂ ಆದೇಶಿಸಿರುವುದಾಗಿ ರೇಡಿಯೊ ಫ್ರೀ ಏಷ್ಯಾ ವರದಿ ಮಾಡಿದೆ. ಸೌತ್ ಹ್ವಾಂಘೇ ನಗರದಲ್ಲಿ ಪೊಲೀಸರು ಗಸ್ತು ಹೆಚ್ಚಿಸಿದ್ದು, ಶೋಕಾಚರಣೆಯ ಭಾವನೆಗೆ ಧಕ್ಕೆ ತರುವಂತಹವರ ಮೇಲೆ ಕಣ್ಗಾವಲಿರಿಸಿದ್ದಾರೆ.
ವಿಚಿತ್ರ ನಿಯಮಗಳು
- ವಿದೇಶಿ ಸಿನಿಮಾ ನೋಡಿದರೆ ಜೈಲು
- ಅಂತಾರಾಷ್ಟ್ರೀಯ ಕರೆಮಾಡುವುದೂ ಅಪರಾಧ
- ಅಪರಾಧಿ ಸಿಕ್ಕಿಬಿದ್ದರೆ ಕುಟುಂಬದವರಿಗೂ ಶಿಕ್ಷೆ
- ಸರ್ಕಾರ ಗುರುತಿಸಿರುವ ಕೇಶ ವಿನ್ಯಾಸಪಾಲನೆ ಕಡ್ಡಾಯ
ಇದೇ ಮೊದಲಲ್ಲ: ಉತ್ತರ ಕೊರಿಯಾದಲ್ಲಿ ಈ ಹಿಂದೆಯೂ ಇಂಥ ಶೋಕಾಚರಣೆ ಕಾರ್ಯಕ್ರಮಗಳು ನಡೆದಿವೆ. ಆಗಲೂ ಇಂಥದ್ದೇ ನಿರ್ಬಂಧ ಜಾರಿ ಮಾಡಲಾಗಿತ್ತು. ಆದೇಶ ಉಲ್ಲಂಘಿಸಿದವರನ್ನು ‘ಸೈದ್ಧಾಂತಿಕ ಅಪರಾಧಿಗಳು’ ಎಂದು ಘೋಷಿಸಲಾಗಿತ್ತು ಮತ್ತು ನಂತರದಲ್ಲಿ ಈ ಅಪರಾಧಿಗಳು ನಿಗೂಢವಾಗಿ ಕಣ್ಮರೆಯಾಗಿದ್ದರು. ಈವರೆಗೂ ಅವರನ್ನು ಪುನಃ ಕಂಡಿಲ್ಲ ಎಂದೂ ವರದಿಯಾಗಿದೆ. ಕಿಮ್ ಜಾಂಗ್- ಇಲ್ 1994ರಿಂದ 2011ರವರೆಗೆ ಉತ್ತರ ಕೊರಿಯಾದ ಅಧ್ಯಕ್ಷರಾಗಿದ್ದರು. ನಂತರ ಅವರ ಕಿರಿಯ ಮಗ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದರು