ಈ ಬಾರಿ ಇರಾನಿ ಕಪ್ ಪಂದ್ಯ ಮುಂಬೈನಿಂದ ಶಿಫ್ಟ್ ಮಾಡಲು ಬಿಸಿಸಿಐ ತೀರ್ಮಾನ!
ಈ ಬಾರಿ ಇರಾನಿ ಕಪ್ ಪಂದ್ಯವನ್ನು ಮುಂಬೈನಿಂದ ಸ್ಥಳಾಂತರಿಸಲು ಬಿಸಿಸಿಐ ನಿರ್ಧರಿಸಿದೆ.ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ 2024-25ರ ದೇಶೀಯ ಕ್ರಿಕೆಟ್ ವೇಳಾಪಟ್ಟಿಯ ಪ್ರಕಾರ ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ಇರಾನಿ ಕಪ್ ಪಂದ್ಯ ನಡೆಯಬೇಕಿತ್ತು. ಆದರೆ ಅಕ್ಟೋಬರ್ ತಿಂಗಳಲ್ಲಿ ನಗರವು ವಿಸ್ತೃತ ಮಾನ್ಸೂನ್ ಅವಧಿಯನ್ನು ಎದುರಿಸುತ್ತಿರುವುದರಿಂದ, ಐದು ದಿನಗಳ ನಿರ್ಣಾಯಕ ಪಂದ್ಯವನ್ನು ಆಯೋಜಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ಪಂದ್ಯವನ್ನು ಸ್ಥಳಾಂತರಿಸಲು ನಿರ್ಧರಿಸಲಾಗಿದೆ.
ಇರಾನಿ ಕಪ್ ಪಂದ್ಯದಲ್ಲಿ ಹಾಲಿ ರಣಜಿ ಟ್ರೋಫಿ ಚಾಂಪಿಯನ್ಸ್ ಹಾಗೂ ಶೇಷ ಭಾರತ ತಂಡ ಮುಖಾಮುಖಿಯಾಗಲಿದೆ. ಕಳೆದ ಬಾರಿ ಅಜಿಂಕ್ಯ ರಹಾನೆ ನೇತೃತ್ವದ ಮುಂಬೈ ತಂಡವು ವಿದರ್ಭ ತಂಡವನ್ನು 169 ರನ್‌ಗಳಿಂದ ಸೋಲಿಸಿ 42ನೇ ರಣಜಿ ಟ್ರೋಫಿಯನ್ನು ಎತ್ತಿ ಹಿಡಿದಿತ್ತು. ಹೀಗಾಗಿ ಈ ಬಾರಿಯ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ಕಣಕ್ಕಿಳಿಯಲಿದೆ.
ರೆಸ್ಟ್ ಆಫ್ ಇಂಡಿಯಾ ತಂಡದಲ್ಲಿ ಚಾಂಪಿಯನ್ ರಾಜ್ಯವನ್ನು ಹೊರತುಪಡಿಸಿ ಇತರೆ ರಾಜ್ಯಗಳ ಆಟಗಾರರು ಕಾಣಿಸಿಕೊಳ್ಳಲಿದ್ದಾರೆ. ಅದರಂತೆ ಅಕ್ಟೋಬರ್ 1 ರಿಂದ ಅಕ್ಟೋಬರ್ 5 ರವರೆಗೆ ನಡೆಯಲಿರುವ ಇರಾನಿ ಕಪ್ ಪಂದ್ಯದಲ್ಲಿ ಮುಂಬೈ ಹಾಗೂ ರೆಸ್ಟ್ ಆಫ್ ಇಂಡಿಯಾ ಸೆಣಸಲಿದೆ.