ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ಎರಡನೇ ಅಲೆಯು ಕಡಿಮೆಯಾಗುತ್ತಿರುವ ಹಿನ್ನೆಲೆ ತೆಲಂಗಾಣ ಸರ್ಕಾರ ರಾಜ್ಯವನ್ನು ಸಂಪೂರ್ಣವಾಗಿ ಪುನಃ ಅನ್‌ಲಾಕ್ ಮಾಡಲು ನಿರ್ಧರಿಸಿದೆ. “ಲಾಕ್ ಡೌನ್ ಸಮಯದಲ್ಲಿ ವಿಧಿಸಲಾದ ಎಲ್ಲಾ ರೀತಿಯ ನಿಯಮಗಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದುಹಾಕಿ” ಎಂದು ಸರ್ಕಾರ ಆದೇಶಿಸಿದೆ.
“ಲಾಕ್‌ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲು ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ಕೊರೊನಾ ಪ್ರಕರಣಗಳ ಸಂಖ್ಯೆ, ಪಾಸಿಟಿವ್ ಸಂಖ್ಯೆ ಶೇಕಡಾವಾರು ಗಮನಾರ್ಹವಾಗಿ ಕಡಿಮೆಯಾಗಿದೆ. ಕೊರೊನಾ ಸಂಪೂರ್ಣ ನಿಯಂತ್ರಣಕ್ಕೆ ಬಂದಿದೆ ಎಂದು ವೈದ್ಯಕೀಯ ಅಧಿಕಾರಿಗಳು ನೀಡಿದ ವರದಿಗಳನ್ನು ಆಧರಿಸಿ ಸಂಪೂರ್ಣ ಲಾಕ್‌ಡೌನ್ ತೆಗೆಯುವ ನಿರ್ಧಾರ ತೆಗೆದುಕೊಳ್ಳಲಾಗಿದೆ,” ಎಂದು ಮುಖ್ಯಮಂತ್ರಿಗಳ ಕಚೇರಿ ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿದೆ.
“ಜುಲೈ 1 ರಿಂದ ರಾಜ್ಯದ ಎಲ್ಲಾ ಶಿಕ್ಷಣ ಸಂಸ್ಥೆಗಳನ್ನು ಪೂರ್ಣ ಸಿದ್ಧತೆಯೊಂದಿಗೆ ಪುನಃ ತೆರೆಯುವಂತೆ ಸಂಪುಟ ಶಿಕ್ಷಣ ಇಲಾಖೆಗೆ ಸೂಚನೆ ನೀಡಿದೆ. ವಿದ್ಯಾರ್ಥಿಗಳಿಗೆ ದೈಹಿಕವಾಗಿ ತರಗತಿಗಳಿಗೆ ಹಾಜರಾಗಲು ಅವಕಾಶವಿದೆ” ಎಂದು ಸರ್ಕಾರ ಪ್ರಕಟಣೆಯಲ್ಲಿ ತಿಳಿಸಿದೆ.
“ಶಿಕ್ಷಣ ಸಂಸ್ಥೆಗಳು ಪುನಃ ತೆರೆಯುವುದರೊಂದಿಗೆ, ವಿದ್ಯಾರ್ಥಿಗಳ ಕಡ್ಡಾಯ ಹಾಜರಾತಿ, ಆನ್‌ಲೈನ್ ತರಗತಿಗಳು ಮತ್ತು ಇತರ ಸಂಬಂಧಿತ ವಿಷಯಗಳ ಕುರಿತು ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಸಿದ್ಧಪಡಿಸುವಂತೆ ಸೂಚಿಸಲಾಗಿದೆ. ಹಾಗೆಯೇ ಸೂಚನೆಗಳು ಮತ್ತು ಮಾರ್ಗಸೂಚಿಗಳನ್ನು ಶೀಘ್ರವಾಗಿ ಬಿಡುಗಡೆ ಮಾಡುವಂತೆ ಶಿಕ್ಷಣ ಇಲಾಖೆಗೆ ಸಂಪುಟ ಸೂಚನೆ ನೀಡಿದೆ” ಎಂದು ಪ್ರಕಟಣೆ ಹೇಳಿದೆ.