ಕರಾವಳಿ, ಮಲೆನಾಡು, ಉತ್ತರ ಒಳನಾಡಿನಲ್ಲಿ ಕೆಲವೆಡೆ ಧಾರಾಕಾರ ಮಳೆಯಾಗುತ್ತಿದೆ. ಉತ್ತರ ಕನ್ನಡ, ದಕ್ಷಿಣ, ಕನ್ನಡ, ಉಡುಪಿ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಣೆ ಮಾಡಲಾಗಿದೆ.
ರಾಜ್ಯದಲ್ಲಿ ಮುಂಗಾರು ಆರಂಭವಾಗಿ ಹಲವು ದಿನಗಳು ಕಳೆದಿದ್ದು, ಹಲವು ಭಾಗಗಳಲ್ಲಿ ಭಾರೀ ಮಳೆಯಾಗುತ್ತಿದೆ. ಭಾರೀ ಮಳೆಯಿಂದಾಗಿ ಈಗಾಗಲೇ ಹಲವೆಡೆ ಭೂಕುಸಿತ ಉಂಟಾಗಿದ್ದು, ಪ್ರವಾಹ ಪರಿಸ್ಥಿತಿಗಳೂ ಎದುರಾಗಿವೆ.
ಜುಲೈ 23ರಂದು ವಾಯವ್ಯ ಬಂಗಾಳಕೊಲ್ಲಿಯಲ್ಲಿ ಒತ್ತಡ ರೂಪುಗೊಳ್ಳುವ ಸಾಧ್ಯತೆಯಿದೆ. ಈ ಪ್ರಭಾವದಿಂದ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಜುಲೈ 26 ರವರೆಗೂ ವ್ಯಾಪಕ ಮಳೆಯಾಗುವ ಸಾಧ್ಯತೆಯಿದೆ ಎಂದು ಬೆಂಗಳೂರಿನ ಹವಾಮಾನ ಇಲಾಖೆ ನಿರ್ದೇಶಕ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ.
ಈ ನಡುವೆ ಬೆಂಗಳೂರಿನಲ್ಲಿ ನಿನ್ನೆ(ಜು.22) ಸಂಜೆ 5.30ರವರೆಗೆ 1.7 ಎಂಎಂ ಮಳೆಯಾಗಿದ್ದು, ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1 ಎಂಎಂ, ಹೆಚ್ಎಎಲ್ ವಿಮಾನ ನಿಲ್ದಾಣದಲ್ಲಿ 0.7 ಎಂಎಂ ಮಳೆಯಾಗಿದೆ ಎಂದು ತಿಳಿದುಬಂದಿದೆ
ಕರಾವಳಿ ಜಿಲ್ಲೆಗಳಲ್ಲಿ ಗಾಳಿಯಿಂದ ಕೂಡಿದ ಮಳೆಯಾಗುತ್ತಿದೆ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಿಗೆ ಜುಲೈ 23-24ರಂದು ಆರೆಂಜ್ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆ.
ಮಹಾರಾಷ್ಟ್ರ ಹಾಗೂ ಬೆಳಗಾವಿ ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಹಾ ಮಳೆಗೆ ನದಿಗಳು ಉಕ್ಕಿ ಹರಿಯುತ್ತಿವೆ. ಹುಕ್ಕೇರಿ ತಾಲೂಕಿನ ಸಂಕೇಶ್ವರ ಪಟ್ಟಣಕ್ಕೆ ನದಿ ನೀರು ನುಗ್ಗಿದೆ. ಹಿರಣ್ಯಕೇಶಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿದೆ. ಸಂಕೇಶ್ವರ ಪಟ್ಟಣದ ತಗ್ಗು ಪ್ರದೇಶಗಳಿಗೆ ಹಿರಣ್ಯಕೇಶಿ ನದಿ ನೀರು ನುಗ್ಗಿದೆ. ಪಟ್ಟಣದ ಲಕ್ಷ್ಮೀ ದೇವಸ್ಥಾನ ಹಾಗೂ ಶಂಕರಲಿಂಗ ದೇವಸ್ಥಾನಗಳಿಗೂ ನದಿ ನೀರು ನುಗ್ಗಿದೆ