ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಕೇಂದ್ರ ಸರ್ಕಾರವೇ ಉತ್ತರ ಕೊಡಬೇಕು: ಡಿ.ಕೆ. ಶಿವಕುಮಾರ್
ಬೆಂಗಳೂರು: “ಉತ್ತರ ಕರ್ನಾಟಕದ ಸಮಸ್ಯೆಗಳಿಗೆ ಪರಿಹಾರ ನೀಡಬೇಕಾಗಿರುವುದು ಕೇಂದ್ರ ಸರ್ಕಾರ. ಕಬ್ಬು ಬೆಳೆಗಾರರ ಸಮಸ್ಯೆ, ಮೆಕ್ಕೆಜೋಳದ ವಿಚಾರದಲ್ಲಿ ನಾನು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ರಾಜ್ಯ ಸರ್ಕಾರಕ್ಕೆ ದುಬಾರಿಯಾಗುವಂತಾದರೂ ತೀರ್ಮಾನ ಕೈಗೊಂಡಿದ್ದೇವೆ” ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೆಳಗಾವಿ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳು ಪರಿಹಾರವಾಗುವಿವೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದರು. ಕಬ್ಬು ಬೆಲೆ ಮತ್ತು ಮೆಕ್ಕೆಜೋಳದ ಬಗ್ಗೆ ಕೇಂದ್ರ ಸರ್ಕಾರ ಈವರೆಗೆ ಬಾಯಿ ಬಿಟ್ಟಿಲ್ಲ.
ಬಿಜೆಪಿ ಸಂಸದರೂ ರಾಜ್ಯದ ಸಮಸ್ಯೆಗಳ ಕುರಿತು ಧ್ವನಿ ಎತ್ತಿಲ್ಲ. ಬೊಮ್ಮಾಯಿ ಅವರು ರಾಜ್ಯವೇ ಖರೀದಿ ಮಾಡಲಿ ಎಂದು ಹೇಳುತ್ತಾರೆ. ಹಾಗಿದ್ದರೆ ಕೇಂದ್ರ ಸರ್ಕಾರದ ಪಾತ್ರವೇನು? ಪ್ರತಿಯೊಂದು ಬೆಲೆ ನಿಗದಿ ಮಾಡುವ ಅಧಿಕಾರ ಕೇಂದ್ರ ಸರ್ಕಾರದ್ದೇ. ಆದರೂ ಅವರಿಂದ ಯಾವುದೇ ತೀರ್ಮಾನ ಇಲ್ಲ,” ಎಂದು ಡಿಕೆಶಿ ಕಿಡಿಕಾರಿದರು.






